ಮುಂಬೈ: ಕಡಿಮೆ ಹೊಗೆ ಹೊರಸೂಸುವ, ಪರಿಸರ ಸ್ನೇಹಿ ಬೋಯಿಂಗ್ ಅನ್ನು (Environmental friendly boeing) ವಿಮಾನ ಯಾನ ಕ್ಷೇತ್ರಕ್ಕೆ ಪರಿಚಯಿಸಿದ ಖ್ಯಾತಿ ಹೊಂದಿರುವ ಆಕಾಸ ಏರ್‌ಲೈನ್ಸ್ (Akasa Air)ಗೆ ಕಿರೀಟಕ್ಕೆ ಮತ್ತೊಂದು ಗರಿ ಲಭಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯ (Aviation Ministry) ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಅಕಾಸ ಏರ್ ಈಗ ಉನ್ನತ ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಇಂಡಿಗೊವನ್ನು ಹಿಂದಿಕ್ಕಿದೆ.
ವಿಮಾನಯಾನ ಸಚಿವಾಲಯವು ಆನ್ ಟೈಮ್ ಪರ್ಫಾರ್ಮೆನ್ಸ್ (On-time performance-OTP) ಡೇಟಾವನ್ನು ಬಿಡುಗಡೆ ಮಾಡಿದೆ. ಅಕಾಸ ಏರ್ 2023ರ ನವೆಂಬರ್‌ನಲ್ಲಿ 78.2% ಒಟಿಪಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂಡಿಗೊ 77.5% ಒಟಿಪಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ಏನಿದು ಒಟಿಪಿ?
ನವದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಈ ನಾಲ್ಕು ನಿಲ್ದಾಣಗಳಲ್ಲಿ ವಿಮಾನಗಳ ಸೇವೆ, ಆಗಮನ ಮತ್ತು ನಿರ್ಗಮನದ ಆಧಾರದ ಮೇಲೆ ಎಲ್ಲ ವಿಮಾನಯಾನ ಸಂಸ್ಥೆಗಳ ಆನ್ ಟೈಮ್ ಪರ್ಫಾರ್ಮೆನ್ಸ್ ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ.
ರ‍್ಯಾಂಕಿಂಗ್ ಪಟ್ಟಿ
- ಆಕಾಸ ಏರ್-78.2%
- ಇಂಡಿಗೊ-77.5%
- ವಿಸ್ತಾರ-72.8%
- ಏರ್ ಇಂಡಿಯಾ-62.5%
- ಸ್ಪೈಸ್ ಜೆಟ್-41.8%
ಮೊದಲೇ ತಿಳಿಸಿದಂತೆ ವಿಮಾನಗಳು ಸಮಯಕ್ಕೆ ಸರಿಯಾಗಿ ಆಗಮಿಸುವ ಆಧಾರದ ಮೇಲೆ ಒಟಿಪಿಯನ್ನು ಅಳೆಯಲಾಗುತ್ತದೆ. ವಿಮಾನವು ನಿಗದಿತ ಸಮಯದ 15 ನಿಮಿಷಗಳಲ್ಲಿ ಬಂದಾಗ ಅಥವಾ 15 ನಿಮಿಷಗಳಲ್ಲಿ ನಿರ್ಗಮಿಸಿದಾಗ ಅದನ್ನು ಸರಿಯಾದ ಸಮಯ ಎಂದು ಪರಿಗಣಿಸಲಾಗುತ್ತದೆ.
ದೂರುಗಳ ಸಂಖ್ಯೆ
ದೇಶೀಯ ವಿಮಾನಗಳಿಗೆ ಸಂಬಂಧಿಸಿ 2023ರ ನವೆಂಬರ್‌ನಲ್ಲಿ ಒಟ್ಟು 601 ದೂರು ದಾಖಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ವಿಸ್ತಾರ ಮತ್ತು ಇಂಡಿಗೊ ಎಲ್ಲಕ್ಕಿಂತ ಕಡಿಮೆ ದೂರನ್ನು ಹೊಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶೀಯ ವಿಮಾನಯಾನ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ದೇಶೀಯ ವಿಮಾನಯಾನ ಸಂಸ್ಥೆಗಳ ಮೂಲಕ 2023ರ ಜನವರಿ ಮತ್ತು ನವೆಂಬರ್ ನಡುವೆ 1,382.34 ಲಕ್ಷ ಪ್ರಯಾಣಿಕರನ್ನು ಸಂಚರಿಸಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 25ಕ್ಕಿಂತ ಅಧಿಕ.
ಅಕಾಸ ಏರ್ ಅನ್ನು 2022ರಲ್ಲಿ ಕೋಟ್ಯಧಿಪತಿ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಸ್ಥಾಪಿಸಿದ್ದರು. ಕಡಿಮೆ ವೆಚ್ಚದ ಭಾರತೀಯ ವಿಮಾನಯಾನ ಸಂಸ್ಥೆಯಾಗಿ ಇದು ಗುರುತಿಸಿಕೊಂಡಿದೆ. ಇಂಡಿಗೊ ಮತ್ತು ಏರ್ ಇಂಡಿಯಾಗೆ ಪ್ರಬಲ ಸ್ಪರ್ಧೆ ಒಡ್ಡಿದೆ. ಮುಂಬಯಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಜೆಟ್ ಏರ್‌ವೇಸ್ ಮತ್ತು ಗೋ ಫಸ್ಟ್‌ನ ಮಾಜಿ ಸಿಇಒ ವಿನಯ್ ದುಬೆ ಅವರ ಸಹಭಾಗಿತ್ವದಲ್ಲಿ ಜುಂಜುನ್ವಾಲಾ ಅಕಾಸ ಏರ್ ಅನ್ನು ಪ್ರಾರಂಭಿಸಿದ್ದರು. ಸದ್ಯ ಆಕಾಸ ಏರ್ ಸಂಸ್ಥೆಯನ್ನು ಎಸ್‌ಎನ್‌ವಿ ಏವಿಯೇಷನ್ ಪ್ರೈವೆಟ್ ಲಿಮಿಟೆಡ್ ಎನ್ನುವ ಸಂಸ್ಥೆ ಮುನ್ನಡೆಸುತ್ತಿದೆ. 2024ರ ಮಾರ್ಚ್ ವೇಳೆಗೆ ಒಂದು ಸಾವಿರ ಉದ್ಯೋಗಿಗಳನ್ನೂ ನೇಮಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ. ಸದ್ಯ, ವಿಮಾನಯಾನ ಸಂಸ್ಥೆಯ 19 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿವೆ. ಇನ್ನೂ 72 ಹೊಸ ವಿಮಾನಗಳು ಸೇರ್ಪಡೆಯಾಗಲಿವೆ ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: Akasa Air : ಆಕಾಸ ಏರ್‌ಲೈನ್ಸ್‌ನಿಂದ 20ನೇ ಪರಿಸರ ಸ್ನೇಹಿ ವಿಮಾನ; ಬೆಂಗಳೂರಿನಲ್ಲಿ ಲ್ಯಾಂಡಿಂಗ್