ಲಂಡನ್: ಖಲಿಸ್ತಾನಿ ಉಗ್ರ, ಖಲಿಸ್ತಾನ್ ನಾಯಕ, ಬಂಧಿತ ಅಮೃತ್‌ಪಾಲ್ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್ ಸಿಂಗ್ ಖಂಡಾ (Avtar Khanda Dies) ಮೃತಪಟ್ಟಿದ್ದಾನೆ. ಲಂಡನ್‌ನಲ್ಲಿ ಜೂನ್ 15ರಂದು ಆತ ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈದ್ಯಕೀಯ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಕರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ, ಭಾರತದ ಗುಪ್ತಚರ ಇಲಾಖೆಯ ಕಣ್ಗಾವಲಿಗೂ ಬಂದಿದ್ದ, ರಂಜೋಧ್ ಸಿಂಗ್ ಎಂದು ಕೂಡ ಕುಖ್ಯಾತಿ ಗಳಿಸಿದ್ದ. ಖಲಿಸ್ತಾನ ಲಿಬರೇಷನ್ ಫೋರ್ಸ್ (KLF) ಲಂಡನ್ ಘಟಕದ ಮುಖ್ಯಸ್ಥನೂ ಆಗಿದ್ದ ಖಂಡಾ, ಬಾಂಬ್ ತಯಾರಿಕೆಯಲ್ಲಿ ಪರಿಣತನಾಗಿದ್ದ. ಉಗ್ರನು ಲಂಡನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಖಲಿಸ್ತಾನಿಗಳು ಆತನನ್ನು ಹುತಾತ್ಮ ಎಂದು ಕರೆದಿದ್ದಾರೆ.
ತಿರಂಗಾ ಕೆಳಗಿಳಿಸಿದ್ದ ಉಗ್ರ
ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ, ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲು ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸಿದ ಬಳಿಕ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಹೈಕಮಿಷನ್ ಮೇಲೇರಿ, ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದರು. ಹೀಗೆ, ಲಂಡನ್‌ನಲ್ಲಿ ಖಲಿಸ್ತಾನಿಗಳ ಉದ್ಧಟತನದ ದಾಳಿಯ ನೇತೃತ್ವವನ್ನು ಇದೇ ಅವತಾರ್ ಖಂಡಾ ವಹಿಸಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Indira Gandhi: ಇಂದಿರಾ ಗಾಂಧಿ ಹತ್ಯೆಗೆ ಕೆನಡಾದಲ್ಲಿ ಖಲಿಸ್ತಾನಿಗಳ ಸಂಭ್ರಮ; ಖಡಕ್ ಎಚ್ಚರಿಕೆ ಕೊಟ್ಟ ಜೈಶಂಕರ್
ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದನೇ?
ಅವತಾರ್ ಖಂಡಾ ತುಂಬ ದಿನಗಳಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾಗೂ ಸ್ಯಾಂಡ್‌ವೆಲ್ ಮತ್ತು ವೆಸ್ಟ್ ಬರ್ಮಿಂಗ್‌ಹ್ಯಾಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಮಾರ್ಚ್ 19ರಂದು ಲಂಡನ್‌ನಲ್ಲಿರುವ ಹೈಕಮಿಷನ್ ಕಚೇರಿ ಮೇಲೆ ದಾಳಿ ಕುರಿತು ಎನ್‌ಐಎ ನಡೆಸುತ್ತಿರುವ ತನಿಖೆಯ ಪ್ರಮುಖ ಆರೋಪಿ ಈತನಾಗಿದ್ದು, ಕ್ಯಾನ್ಸರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸ್ಟುಡೆಂಟ್ ವೀಸಾ ಪಡೆದು ಬ್ರಿಟನ್‌ಗೆ ತೆರಳಿದ ಈತ, ಬಳಿಕ ಪ್ರತ್ಯೇಕವಾದಿ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಕೂಡ ತಿಳಿದುಬಂದಿದೆ.