ಕೆನಡಾ: ತಂಬಾಕು ಉತ್ಪನ್ನಗಳ ಮೇಲೆ ಅವುಗಳಿಂದ ಆಗುವ ಆರೋಗ್ಯದ ಹಾನಿ ಕುರಿತು ಅತ್ಯಂತ ಭಯಾನಕವಾದ, ವಿಕಾರವಾದ ಚಿತ್ರಗಳನ್ನು ಹಾಕುವ ಪರಿಪಾಠ ಎಲ್ಲ ದೇಶಗಳಲ್ಲೂ ಇದೆ. ಆದರೆ, ಎಷ್ಟೇ ಹೆದರಿಸಿದರೂ ಸಿಗರೇಟು ಸೇದುವವರ ಸಂಖ್ಯೆ ಒಂದಿನಿತೂ ಇಳಿದಿಲ್ಲ! ಹೀಗಾಗಿ ಕೆನಡಾ ಸರ್ಕಾರ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅಂದರೆ, ಪ್ರತಿಯೊಂದು ಸಿಗರೇಟ್ ಪ್ಯಾಕ್ ಮೇಲೆ ಬರಹ ರೂಪದಲ್ಲಿ ಎಚ್ಚರಿಕೆ ನೀಡಲು ಮುಂದಾಗಿದೆ.
ಕೆನಡಾದಲ್ಲಿ ಯುವಜನರು ಸಿಗರೇಟ್ ದಾಸರಾಗುತ್ತಿರುವ ಪ್ರಮಾಣ ವಿಪರೀತವಾಗಿ ಹೆಚ್ಚಿದೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ ಸಿಗರೇಟ್ ಪ್ಯಾಕ್ ಮೇಲೆ ಕೇವಲ ಎಚ್ಚರಿಕೆ ಚಿತ್ರ ಹಾಕುವ ಜತೆಗೆ ಪ್ರತಿ ಸಿಗರೇಟಿನ ಮೇಲೂ ಸಂದೇಶವನ್ನೂ ಪ್ರಿಂಟ್ ಮಾಡಲು ನಿರ್ಧರಿಸಲಾಗಿದೆ. ಇಂಥ ಪ್ರಯೋಗ ನಡೆಸುವ ವಿಶ್ವದ ಮೊದಲನೆಯ ದೇಶ ಎಂಬ ಹಿರಿಮೆಗೆ ಕೆನಡಾ ಪಾತ್ರವಾಗಲಿದೆ.
ಇದನ್ನು ಓದಿ| No Tobacco Day: ಸ್ಮೋಕ್ ಮಾಡೋರ ಸಹವಾಸ ಮಾಡಲೇಬೇಡಿ!
ಕೆನಡಾದಲ್ಲಿ ಸದ್ಯಕ್ಕೆ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 11ರಷ್ಟು ಯುವಕರು ಹಾಗೂ 15 ರಿಂದ 16 ವರ್ಷ ವಯೋಮಿತಿಯ ಶೇ. 4ರಷ್ಟು ಯುವಕರು ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಹೀಗಾಗಿ ಸಿಗರೇಟ್ ಉತ್ಪನ್ನಗಳ ಮೇಲೆ ಅವುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಗಳ ಮಾಹಿತಿಯನ್ನು ಮುದ್ರಿಸುವ ತೀರ್ಮಾನಕ್ಕೆ ಬರಲಾಗಿದೆ. ʼಪ್ರತಿ ಪಫ್‌ನಲ್ಲಿಯೂ ವಿಷʼ ಎಂದು ಪ್ರತಿ ಸಿಗರೇಟ್ ಮೇಲೂ ಬರೆಯಲು ನಿರ್ಧರಿಸಲಾಗಿದೆ.
ಧೂಮಪಾನದಿಂದ ಉಂಟಾಗುವ ಹೊಟ್ಟೆಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿ ಪ್ರಕಟಿಸಲಾಗುವುದು ಎಂದು ಕೆನಡಾ ಅಧಿಕಾರಿಗಳು ತಿಳಿಸಿದ್ದಾರೆ. 2023ರಿಂದ ಈ ನಿಯಮ ಜಾರಿಗೆ ಬರಲಿದೆ.
ಕೆನಡಾ ಸರ್ಕಾರದ ಈ ನಿಯಮವನ್ನು ಅಂತಾರಾಷ್ಟ್ರೀಯ ತಂಬಾಕು ನಿಯಂತ್ರಣ ನೀತಿ ಮೌಲ್ಯಮಾಪನ ಯೋಜನೆಯ ಪ್ರಧಾನ ತನಿಖಾಧಿಕಾರಿಯಾದ ಜೆಫ್ರಿ ಫಾಂಗ್ ಪ್ರಶಂಸಿಸಿದ್ದಾರೆ. ಇದು ನಿಜವಾಗಿಯೂ ಉತ್ತಮ ನಿರ್ಧಾರ. ಈ ಹೊಸ ಕ್ರಮದಿಂದ ಆರೋಗ್ಯ ಎಚ್ಚರಿಕೆಗಳ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ಸಿಗರೇಟ್ ಸೇವನೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಪ್ರತಿಯೊಬ್ಬ ಧೂಮಪಾನಿಗೂ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ| No Tobacco Day: ಧೂಮಪಾನದಿಂದ ಲೈಂಗಿಕ ಸುಖಕ್ಕೆ ಹೊಗೆ!