ಅಯೋಧ್ಯೆ: ಆರನೇ ದೀಪೋತ್ಸವದ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಮೋದಿ (Modi In Ayodhya)ರಾಮಲಲ್ಲಾನ ದರ್ಶನದ ಜತೆಗೆ ರಾಮ ಮಂದಿರ ನಿರ್ಮಾಣದ ಕಾಮಗಾರಿಯನ್ನೂ ವೀಕ್ಷಿಸಿದ್ದಾರೆ. ಹಾಗೆಯೇ, ಶ್ರೀರಾಮನ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಶ್ರೀರಾಮನ ಆದರ್ಶ ಹಾಗೂ ಸಂವಿಧಾನದ ಆಶಯಗಳ ಪಾಲನೆಯೇ ನಮ್ಮ ಆಡಳಿತದ ಗುರಿಯಾಗಿದೆ” ಎಂದು ಹೇಳಿದ್ದಾರೆ.
“ರಾಮನ ಆದರ್ಶವು ಎಲ್ಲರಿಗೂ ಪ್ರೇರಣೆಯಾಗಿದೆ. ರಾಮನ ಆದರ್ಶ, ದೂರದೃಷ್ಟಿಯಂತೆ ಭಾರತವು ಏಳಿಗೆ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಗತಿಯು ಹೊಸ ದಿಕ್ಕು ಪಡೆಯಲಿದೆ. ಶ್ರೀರಾಮನಿಂದ ನಾವು ಎಷ್ಟು ಸಾಧ್ಯವೋ ಅಷ್ಟು ಕಲಿಯೋಣ. ಮರ್ಯಾದಾ ಪುರುಷೋತ್ತಮನಾದ ರಾಮನು, ಮರ್ಯಾದೆ ಗಳಿಸುವ ಜತೆಗೆ ಬೇರೆಯವರಿಗೆ ಗೌರವ ನೀಡುವುದನ್ನೂ ಕಲಿಸಿದ್ದಾರೆ” ಎಂದು ತಿಳಿಸಿದರು.
“ಭಗವಾನ್ ರಾಮನು ಕರ್ತವ್ಯಕ್ಕೆ ಹೊಸ ಶಕ್ತಿ ನೀಡಿದ್ದಾನೆ. ರಾಮನು ತ್ಯಾಗದ ಪ್ರತಿರೂಪವೂ ಆಗಿದ್ದಾನೆ, ರಾಮನು ಯಾರನ್ನೂ ಹಿಂದೆ ಬಿಡುವುದಿಲ್ಲ. ಏಕೆಂದರೆ, ರಾಮನು ದೇಶದ ಅಸ್ಮಿತೆಯಾಗಿದ್ದಾನೆ. ರಾಷ್ಟ್ರದ ಶಕ್ತಿಯಾಗಿದ್ದಾನೆ. ರಾಮನ ಆದರ್ಶ ಹಾಗೂ ಸಂವಿಧಾನದ ಆಶಯಗಳಂತೆಯೇ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ” ಎಂದು ಹೇಳಿದರು.
ಅಯೋಧ್ಯೆ ಸಾಂಸ್ಕೃತಿಕ ರಾಜಧಾನಿ
“ಶ್ರೀರಾಮನು ಅಯೋಧ್ಯೆಯ ರಾಜಕುಮಾರ ಆಗಿದ್ದಾನೆ. ಆದರೆ, ರಾಮನು ಇಡೀ ದೇಶದ ಆದರ್ಶವಾಗಿದ್ದಾನೆ. ಮುಂದಿನ ದಿನಗಳಲ್ಲಿ ಅಯೋಧ್ಯೆಯು ಧಾರ್ಮಿಕ, ಸಾಂಸ್ಕೃತಿ, ಸ್ವಚ್ಛತೆ, ಮೌಲ್ಯಗಳ ಪ್ರತಿರೂಪವಾಗಲಿದೆ. ಅಯೋಧ್ಯೆಯ ಹಿರಿಮೆಯು ವಿಶ್ವಕ್ಕೇ ಮಾದರಿ ಎನಿಸಲಿದೆ. ಅಯೋಧ್ಯೆಯ ಹೆಸರು ಎಲ್ಲಕ್ಕಿಂತ ಮೊದಲು ಬರಲಿದೆ. ರಾಮ ಜನ್ಮಭೂಮಿಯಲ್ಲಿ ನಿಂತು ನಾನು ಹೇಳುತ್ತಿದ್ದೇನೆ. ಮನುಕುಲ, ಮಾನವತೆಯ ಸಂಕೇತವಾಗಿ ದೇಶವನ್ನು ಅಭಿವೃದ್ಧಿಗೊಳಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ. ಮತ್ತೊಮ್ಮೆ ದೇಶದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು” ಎಂದು ಹೇಳಿದರು.
ರಾಮ ಯಾರನ್ನೂ ಹಿಂದೆ ಬಿಡಲ್ಲ
“ಶ್ರೀರಾಮನು ಮೌಲ್ಯಗಳ ಪ್ರತಿರೂಪಿಯಾಗಿದ್ದು, ಎಲ್ಲರ ಸಮಾನತೆ, ಏಳಿಗೆ, ಸುಭಿಕ್ಷೆ, ಆದರ್ಶಗಳುಳ್ಳ ಸಮಾಜವನ್ನು ಪ್ರತಿಪಾದಿಸಿದ್ದಾನೆ. ಹಾಗಾಗಿ, ರಾಮ ಹಾಗೂ ರಾಮನ ಆದರ್ಶಗಳು ಯಾರನ್ನೂ ಹಿಂದೆ ಬೀಳುವಂತೆ ಮಾಡುವುದಿಲ್ಲ. ಭಗವಾನ್ ಶ್ರೀರಾಮನು ಯಾರ ಕೈಯನ್ನೂ ಬಿಡುವುದಿಲ್ಲ. ರಾಮನ ಆದರ್ಶದಂತೆಯೇ ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೆಯೋದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ತಿಳಿಸಿದರು. ಮೋದಿ ಭಾಷಣ ಮುಗಿಸುತ್ತಲೇ ನೆರೆದಿದ್ದ ಎಲ್ಲರೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ | Modi In Ayodhya | ರಾಮಲಲ್ಲಾ ದರ್ಶನ ಪಡೆದ ಮೋದಿ, ಅಯೋಧ್ಯೆ ರಂಗು ಫೋಟೊಗಳಲ್ಲಿ ನೋಡಿ