ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ (Ayodhya Ram Mandir) ದೈವಿಕ ಪರಿಮಳವನ್ನು ತುಂಬಲು ಗುಜರಾತ್‌ನ ವಡೋದರಾದಿಂದ ಹೊರಟ 108 ಅಡಿ ಉದ್ದದ ಅಗರಬತ್ತಿ (Incense stick) ಉತ್ತರಪ್ರದೇಶ ತಲುಪಿದ್ದು, ಅಯೋಧ್ಯೆಯತ್ತ ಬರುತ್ತಿದೆ.
ಈ ಧೂಪದ್ರವ್ಯವು ಸೋಮವಾರ ಆಗ್ರಾದ ಫತೇಪುರ್ ಸಿಕ್ರಿ ಮತ್ತು ಕಿರಾವಲಿಗೆ ತಲುಪಿತು. ನೂರಾರು ಜನರು ಹೆದ್ದಾರಿಯಲ್ಲಿ ಅಗರಬತ್ತಿಯನ್ನು ಸ್ವಾಗತಿಸಿ ಪುಷ್ಪವೃಷ್ಟಿ ಮಾಡಿದರಲ್ಲದೆ, ʼಜೈ ಶ್ರೀ ರಾಮ್ʼ ಘೋಷಣೆಗಳನ್ನು ಕೂಗಿದರು. ಬರೋಡದಿಂದ ಆರಂಭವಾದ ಅಗರಬತ್ತಿಯ ಯಾತ್ರೆ ಮೆರವಣಿಗೆಯಾಗಿ ಮಾರ್ಪಟ್ಟಿದೆ.
ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಬಳಸಲು ವಡೋದರಾ ನಗರದಲ್ಲಿ ಬರೋಬ್ಬರಿ 108 ಅಡಿ ಉದ್ದ ಮತ್ತು 3.5 ಅಡಿ ಅಗಲದ ಈ ಅಗರಬತ್ತಿ ತಯಾರಿಸಲಾಗಿತ್ತು. ಇದು 3,610 ಕಿಲೋಗ್ರಾಂ ತೂಕವಿದೆ. ರಸ್ತೆಯ ಮೂಲಕ ಇದನ್ನು ಅಯೋಧ್ಯೆಗೆ ಸಾಗಿಸಲಾಗುತ್ತಿದೆ. ವಡೋದರಾದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯ್ ಭರ್ವಾಡ್ (Vihabhai Bharwad) ಏಕಾಂಗಿಯಾಗಿ ಆರು ತಿಂಗಳಿನಿಂದ ತಮ್ಮ ಮನೆಯ ಹೊರಗೆ ಈ ಅಗರಬತ್ತಿಯನ್ನು ತಯಾರಿಸಿದ್ದಾರೆ. ಭರ್ವಾಡ್ ಈ ಹಿಂದೆ 111 ಅಡಿ ಉದ್ದದ ಅಗರಬತ್ತಿಯನ್ನು ಯಶಸ್ವಿಯಾಗಿ ತಯಾರಿಸಿದ್ದರು.
ಇದರ ವಿಶೇಷ ಏನು?
ಸಾವಯವ ವಸ್ತುಗಳನ್ನು ಬಳಸಿ ಈ 108 ಅಡಿ ಉದ್ದದ ಅಗರಬತ್ತಿ ತಯಾರಿಸುತ್ತಿರುವುದು ವಿಶೇಷ. ಇದಕ್ಕಾಗಿ 3,000 ಕೆಜಿ ಗಿರ್ ಹಸುವಿನ ಸೆಗಣಿ, 91 ಕೆಜಿ ಗಿರ್ ಹಸುವಿನ ತುಪ್ಪ, 280 ಕೆಜಿ ದೇವದಾರ್ ಮರದ ಭಾಗ, 370 ಕೆಜಿ ಕೊಬ್ಬರಿ ಪುಡಿ ಮತ್ತಿತರ ವಸ್ತುಗಳನ್ನು ಬಳಸಲಾಗಿದೆ. ಈ ಕಾರ್ಯಕ್ಕಾಗಿ ವಿಹಾಭಾಯ್ ಪ್ರತಿದಿನ ಎರಡರಿಂದ ಮೂರು ಗಂಟೆಗಳನ್ನು ಮೀಸಲಿಟ್ಟಿದ್ದಾರೆ. ವಿಹಾಭಾಯ್ ಅವರಿಗೆ ಸ್ಥಳೀಯ ಸಂಸದ ರಂಜನ್‌ಬೆನ್ ಭಟ್ ಮತ್ತು ಅವರ ತಂಡ ಸಹಾಯ ಹಸ್ತ ಚಾಚಿದೆ. ಇದನ್ನು ತಯಾರಿಸಲು ಒಟ್ಟು 5.30 ಲಕ್ಷ ರೂ. ಖರ್ಚಾಗಿದೆ.
1,800 ಕಿ.ಮೀ ದೂರ
ವಡೋದರಾ ಅಯೋಧ್ಯೆಯಿಂದ ಸುಮಾರು 1,800 ಕಿ.ಮೀ ದೂರದಲ್ಲಿದೆ. ಈ ಬೃಹತ್ ಅಗರಬತ್ತಿಯನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿದೆ. ಹಲೋಲ್, ಕಲೋಲ್, ಗೋಧ್ರಾ, ಶಹೇರಾ, ಅರ್ವಲ್ಲಿ, ಮೊದಸಾ, ಶಮ್ಲಾಜಿ, ಖೇರ್ವಾಡಾ, ಉದಯಪುರ, ಮಾಲ್ವಾಡಾ, ಸವರಿಯಾ ಶೇತ್ ಮಂದಿರ, ಚಿತ್ತೋರ್, ಭಿಲ್ವಾಡಾ, ದಾಡಿಯಾ, ಕಿಶನ್ಗಡ್, ಜೈಪುರ, ಘೋಸಾ ಮಹೆಂಡಿಪುರ, ಬಾಲಾಜಿ ಚೋರಾಯಾ, ಭರತ್ಪುರಗಳನ್ನು ಹಾದು ಬಂದು ಇದೀಗ ಫತೇಪುರ್ ಸಿಕ್ರಿ ತಲುಪಿದೆ. ಇನ್ನು ಆಗ್ರಾ, ಲಕ್ನೋ, ಇಟಾವಾ, ಕಾನ್ಪುರ, ಉನಾವೊ, ಬಾರಾಬಂಕಿ ಮೂಲಕ ಟ್ರಕ್ ಅಯೋಧ್ಯೆ ತಲುಪಲಿದೆ.
ಒಮ್ಮೆ ಈ ಅಗರಬತ್ತಿಯನ್ನು ಬೆಳಗಿದರೆ ಅದು ನಿರಂತರ 45 ದಿನಗಳವರೆಗೆ ಉರಿಯುತ್ತಲೇ ಇರಲಿದೆ ಎಂದು ವಿಹಾಭಾಯ್ ತಿಳಿಸಿದ್ದಾರೆ.