Site icon Vistara News

Ayodhya Ram Mandir: ಅಯೋಧ್ಯೆ ಮೇಲೆ ದಾಳಿಗೆ ಖಲಿಸ್ತಾನ್‌ ಸಂಚು! ಬಂಧಿತ ಮೂವರಿಗೆ ಉಗ್ರರ ಸಂಪರ್ಕ ಖಚಿತ

ayodhya security

ಅಯೋಧ್ಯೆ: ಅಯೋಧ್ಯೆಯಲ್ಲಿನ ರಾಮ ಮಂದಿರದ (Ayodhya Ram Mandir) ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಮೂರು ದಿನಗಳ ಮೊದಲು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಅಯೋಧ್ಯೆಯಲ್ಲಿ ಬಂಧಿಸಿದ್ದ ಮೂವರು ಶಂಕಿತರು ಖಲಿಸ್ತಾನ್ ಉಗ್ರ ಸಂಘಟನೆಗಳ (Khalistan tessorits) ಸಂಪರ್ಕ ಹೊಂದಿದ್ದಾರೆ ಎಂದು ಪತ್ತೆಯಾಗಿದೆ.

ಖಲಿಸ್ತಾನ್ ನಾಯಕರ ಧ್ವನಿಮುದ್ರಿತ ಸಂದೇಶ ಲಖನೌದಲ್ಲಿ ಕೆಲವರ ಮೊಬೈಲ್ ಫೋನ್‌ಗಳಲ್ಲಿ ಪ್ರಸಾರವಾಗಿತ್ತು. ಇದರಿಂದ ಈ ಮೂವರ ಮೇಲಿನ ಅನುಮಾನ ಗಾಢವಾಗಿದೆ ಎಂದು ಅಧಿಕಾರಿ ತಿಳಿಸಿದರು. ರೆಕಾರ್ಡ್ ಮಾಡಲಾದ ಧ್ವನಿ ಸಂದೇಶವು ಪುರುಷ ಧ್ವನಿಯಲ್ಲಿತ್ತು. ಇದರಲ್ಲಿ ತನ್ನನ್ನು ಗುರುಪತ್ವಂತ್ ಸಿಂಗ್ ಪನ್ನುನ್ ಎಂದು ಕರೆದುಕೊಂಡ ವ್ಯಕ್ತಿಯೊಬ್ಬ, ಸಂದೇಶದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉದ್ದೇಶಿಸಿ ಬೆದರಿಕೆ ಹಾಕಿದ್ದ. ಪನ್ನುನ್‌ ಯುಎಸ್ ಮತ್ತು ಕೆನಡಾದ ದ್ವಿ ಪೌರತ್ವವನ್ನು ಹೊಂದಿರುವ ಖಲಿಸ್ತಾನ್ ಭಯೋತ್ಪಾದಕನಾಗಿದ್ದಾನೆ. ತಾನು ಪಂಜಾಬ್ ಪ್ರತ್ಯೇಕತೆಯನ್ನು ಬೆಂಬಲಿಸುವ ಯುಎಸ್ ಮೂಲದ ʼಸಿಖ್‌ ಫಾರ್ ಜಸ್ಟಿಸ್ʼ (ಎಸ್ಎಫ್‌ಜೆ) ಸಂಘಟನೆಯವನು ಎಂದು ಹೇಳಿದ್ದಾನೆ. ಜನವರಿ 22ರಂದು ನಡೆಯುವ ರಾಮ ಮಂದಿರದ ಪ್ರತಿಷ್ಠಾಪನೆಯು ಅವರನ್ನು ಉಳಿಸದು ಎಂದು ಬೆದರಿಸಿದ್ದ. ರೆಕಾರ್ಡ್ ಮಾಡಲಾದ ಸಂದೇಶದಲ್ಲಿ, ಅಯೋಧ್ಯೆಯಲ್ಲಿ ಇಬ್ಬರು ಎಸ್‌ಎಫ್‌ಜೆ ಸದಸ್ಯರನ್ನು ಬಂಧಿಸಿರುವುದನ್ನು ಉಲ್ಲೇಖಿಸಲಾಗಿದೆ.

ಮೂವರು ಆರೋಪಿಗಳನ್ನು ರಾಜಸ್ಥಾನ ನಿವಾಸಿಗಳಾದ ಶಂಕರ್ ದುಸ್ಸಾದ್ ಅಲಿಯಾಸ್ ಶಂಕರ್ ಜಜೋದ್, ಅಜಿತ್ ಕುಮಾರ್ ಶರ್ಮಾ ಮತ್ತು ಪ್ರದೀಪ್ ಪುನಿಯಾ ಎಂದು ಗುರುತಿಸಲಾಗಿದೆ ಎಂದು ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿ), ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಖಚಿತಪಡಿಸಿದ್ದಾರೆ. ಶಂಕರ್ ದುಸ್ಸಾದ್ ಮತ್ತು ಪ್ರದೀಪ್ ಪುನಿಯಾ ಸಿಕರ್ ಜಿಲ್ಲೆಯ ನಿವಾಸಿಗಳಾಗಿದ್ದರೆ, ಅಜಿತ್ ಕುಮಾರ್ ಶರ್ಮಾ ಜುಂಜುನು ಜಿಲ್ಲೆಯ ನಿವಾಸಿ ಎಂದು ಅವರು ಹೇಳಿದರು.

ಕೆನಡಾ ಮೂಲದ ಇನ್ನೊಬ್ಬ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಮೂಲಕ ಪನ್ನುನ್ ಜೊತೆ ದುಸ್ಸಾದ್ ಸಂಪರ್ಕದಲ್ಲಿದ್ದ. ಖಲಿಸ್ತಾನ್ ನಾಯಕರು ದುಸ್ಸಾದ್‌ನನ್ನು ಅಯೋಧ್ಯೆಗೆ ಭೇಟಿ ನೀಡಿ ಸ್ಥಳದ ನೀಲನಕ್ಷೆ ಸಿದ್ಧಪಡಿಸುವಂತೆ ಕಳಿಸಿದ್ದರು. ಗುರುವಾರ ಅಯೋಧ್ಯೆಯ ತ್ರಿಮೂರ್ತಿ ಹೋಟೆಲ್ ಎದುರು ವಾಹನ ತಪಾಸಣೆ ವೇಳೆ ದುಸ್ಸಾದ್ ಮತ್ತು ಆತನ ಇಬ್ಬರು ಸಹಚರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅಯೋಧ್ಯೆಯನ್ನು ಸುತ್ತಾಡಿ ನೀಲನಕ್ಷೆಯನ್ನು ತಯಾರಿಸಲು ಸಹಾಯ ಮಾಡಲು ತನ್ನ ಇಬ್ಬರು ಸಹಚರರನ್ನು ಕರೆತಂದಿದ್ದೇನೆ ಎಂದು ದುಸ್ಸಾದ್ ಬಹಿರಂಗಪಡಿಸಿದ್ದಾನೆ. ದುಸ್ಸಾದ್ ಎಸ್‌ಯುವಿ ಮೇಲೆ ಕೇಸರಿ ಧ್ವಜವನ್ನು ಹಾಕಿಕೊಂಡಿದ್ದ. ಇದರಿಂದ ಪೊಲೀಸರಿಗೆ ತಮ್ಮ ಮೇಲೆ ಅನುಮಾನ ಬರುವುದಿಲ್ಲ ಎಂದು ಭಾವಿಸಿದ್ದ. ದುಸ್ಸಾದ್‌ನಿಂದ ಎರಡು ವಿಭಿನ್ನ ಗುರುತಿನ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದುಸ್ಸಾದ್ ಬಳಸುತ್ತಿದ್ದ ಸಿಮ್ ಕಾರ್ಡ್ ಧರಮ್‌ವೀರ್ ಮಹಲಾ ಎಂಬಾತನ ಹೆಸರಿನಲ್ಲಿದ್ದು, ಆತನ ಎಸ್‌ಯುವಿ ನೋಂದಣಿ ಪತ್ರಗಳೂ ನಕಲಿಯಾಗಿವೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಸ್ಸಾದ್ ದೀರ್ಘ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. 2022ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಸಿಕರ್‌ನಲ್ಲಿನ ತನ್ನ ಮನೆಯ ಮುಂದೆ ಐವರು ದುಷ್ಕರ್ಮಿಗಳಿಂದ ಹತನಾದ ಕುಖ್ಯಾತ ದರೋಡೆಕೋರ ರಾಜೇಂದ್ರ ಜಾತ್‌ ಎಂಬವನ ಆಪ್ತ ಸಹಾಯಕನಾಗಿದ್ದ ದುಸ್ಸಾದ್.‌ 2007 ಮತ್ತು 2014ರ ನಡುವೆ ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಆತನ ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ. 2011ರಲ್ಲಿ ಕಾಂಗ್ರೆಸ್‌ನ ಯುವ ಘಟಕದ ನಾಯಕ ರಾಮ್ ಕೃಷ್ಣ ಸಿಹಾಗ್ ಮತ್ತು 2014 ರಲ್ಲಿ ಬಿಕಾನೇರ್ ಜೈಲಿನಲ್ಲಿ ಕೈದಿ ಬಲ್ವೀರ್ ಬನುದಾ ಹತ್ಯೆಗಳಲ್ಲಿ ಆತ ಭಾಗಿಯಾಗಿದ್ದ.

ಮಾರ್ಚ್ 21, 2016ರಿಂದ ಏಳು ವರ್ಷಗಳ ಕಾಲ ದುಸ್ಸಾದ್‌ ಜೈಲಿನಲ್ಲಿದ್ದ. ಮೇ 15, 2023ರಂದು ಬಿಕಾನೇರ್‌ನ ಸೆಂಟ್ರಲ್ ಜೈಲಿನಿಂದ ದುಸ್ಸಾದ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ದುಸ್ಸಾದ್ ಬಿಕಾನೇರ್ ಜೈಲಿನಲ್ಲಿದ್ದಾಗ ಖಲಿಸ್ತಾನ್ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದ. ಇನ್ನೊಬ್ಬ ಖೈದಿ ಲಖ್ಬಿಂದರ್ ಸಿಂಗ್ ಎಂಬಾತನ ಮೂಲಕ ಕೆನಡಾ ಮೂಲದ ಖಲಿಸ್ತಾನಿ ನಾಯಕ ಸುಖ್ದೂಲ್ ಸಿಂಗ್ ಗಿಲ್ ಅಲಿಯಾಸ್ ಸುಖಾ ದುನೆಕೆ ಜೊತೆ ಸಂಪರ್ಕ ಪಡೆದಿದ್ದ. ಸೆಪ್ಟೆಂಬರ್ 2023ರಲ್ಲಿ ಸುಖಾ ದುನೆಕೆ ಅಪರಿಚಿತ ದಾಳಿಕೋರರಿಂದ ಸತ್ತಿದ್ದ. ದುಸ್ಸಾದ್ ವಾಟ್ಸಾಪ್ ಮೂಲಕ ಡುನೆಕೆ ಮತ್ತು ಲಾಂಡಾರೊಂದಿಗೆ ಸಂಪರ್ಕದಲ್ಲಿದ್ದ.

ಏತನ್ಮಧ್ಯೆ, ಅಯೋಧ್ಯೆಯ ಪೊಲೀಸರು ಜನವರಿ 22ರ ಮೆಗಾ ಈವೆಂಟ್‌ಗೆ ಮುನ್ನ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪಟ್ಟಣದಾದ್ಯಂತ ವಾಹನ ತಪಾಸಣೆ ಮತ್ತು ಜಾಗರೂಕತೆಯನ್ನು ತೀವ್ರಗೊಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಧ್ವನಿಮುದ್ರಿಸಿದ ಆಡಿಯೋ ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪರಿಶೀಲನೆಯನ್ನು ತೀವ್ರಗೊಳಿಸಲು ರಾಜ್ಯಾದ್ಯಂತ ನಿರ್ದೇಶನಗಳನ್ನು ನೀಡಲಾಗಿದೆ.

ಇದನ್ನೂ ಓದಿ: Ram Mandir: ಅಯೋಧ್ಯೆಯಲ್ಲಿ ಹೇಮಾ ಮಾಲಿನಿ ರಾಮಾಯಣ ನೃತ್ಯ ನಾಟಕ ವಿಶೇಷ ಪ್ರದರ್ಶನ!

Exit mobile version