Site icon Vistara News

Ayodhya Ram Mandir: ಹತ್ತಿ ಬಟ್ಟೆಯಲ್ಲಿ ಕಂಗೊಳಿಸಿದ ಅಯೋಧ್ಯೆಯ ಬಾಲಕ ರಾಮ; ಫೋಟೊ ಇಲ್ಲಿದೆ

Ayodhya Ram Mandir

Ayodhya Ram Mandir

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪೂಜಿಸಲ್ಪಡುವ ಬಾಲಕ ರಾಮ ಶನಿವಾರ (ಮಾರ್ಚ್‌ 30)ದಿಂದ ಆರಾಮದಾಯಕ ಹತ್ತಿ ಉಡುಪಿನಿಂದ ಕಂಗೊಳಿಸುತ್ತಿದ್ದಾನೆ. ಬೇಸಿಗೆ ಋತು ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ರಾಮನ ವಿಗ್ರಹಕ್ಕೆ ಹತ್ತಿ ಬಟ್ಟೆಯನ್ನು ತೊಡಿಸಲಾಗಿದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕೇತ್ರ ಟ್ರಸ್ಟ್‌ (Shri Ram Janmbhoomi Theerth Kshetra) ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಪೋಸ್ಟ್‌ನಲ್ಲಿ ಏನಿದೆ?

ʼʼಬೇಸಿಗೆ ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಇಂದಿನಿಂದ ಭಗವಾನ್ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಹತ್ತಿ ವಸ್ತ್ರವನ್ನು ತೊಡಿಸಲಾಗಿದೆ. ರಾಮಲಲ್ಲಾ ಇಂದು ಧರಿಸಿರುವ ವಸ್ತ್ರವನ್ನು ಕೈಮಗ್ಗದ ಹತ್ತಿಯಿಂದ ತಯಾರಿಸಲಾಗಿದೆ. ನೈಸರ್ಗಿಕ ನೀಲಿ ಬಣ್ಣ ಬಳಿಯಲಾಗಿದ್ದು, ಗೊಟ್ಟಾ ಹೂವುಗಳಿಂದ ಅಲಂಕರಿಸಲಾಗಿದೆʼʼ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಮಿತಿ ಮೀರುತ್ತಿದೆ ತಾಪಮಾನ

ಜಾಗತಿಕ ತಾಪಮಾನ ಹೆಚ್ಚಳ ಭಾರತದಲ್ಲಿಯೂ ಪರಿಣಾಮ ಬೀರಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಮಧ್ಯ ಭಾರತದ ವಿವಿಧ ನಗರಗಳಲ್ಲಿ ತೀವ್ರ ತಾಪಮಾನ ದಾಖಲಾಗುತ್ತಿದೆ. ಮಾರ್ಚ್ 28ರಂದು ತಾಪಮಾನವು 41 ಡಿಗ್ರಿ ಸೆಲ್ಶಿಯಸ್‌ ಮೀರಿದೆ ಎಂದು ಭಾರತ ಹವಾಮಾನ ಇಲಾಖೆ ವರದಿ ಮಾಡಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಯಲಸೀಮಾ ಮುಂತಾದೆಡೆ ಸಾಮಾನ್ಯ ತಾಪಮಾನ 5 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಾಗಿದೆ. ಅಕೋಲಾದಲ್ಲಿ ಈ ವರ್ಷದ ಅತ್ಯಧಿಕ ತಾಪಮಾನ 42.6 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ.

ಈತನ್ಮಧ್ಯೆ ಮುಂಬರುವ ರಾಮನವಮಿ ಉತ್ಸವಕ್ಕೆ ಮುಂಚಿತವಾಗಿ ಹನುಮಾನ್ ಗರ್ಹಿ ದೇವಾಲಯದ ಆಡಳಿತವು ಶುಕ್ರವಾರ ಸಭೆ ನಡೆಸಿ ವ್ಯವಸ್ಥೆಯ ಬಗ್ಗೆ ಚರ್ಚಿಸಿತು. ಸಭೆಯಲ್ಲಿ ಅಯೋಧ್ಯೆಯ ಜಿಲ್ಲಾಡಳಿತ ಮತ್ತು ಪೊಲೀಸರು ಉಪಸ್ಥಿತರಿದ್ದರು. ಬಿಸಿಲಿನಲ್ಲಿ ಸರದಿ ನಿಲ್ಲುವ ಭಕ್ತರ ತೊಂದರೆಯಗದಂತೆ ನೋಡಿಕೊಳ್ಳಲು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕುರಿತು ಸಮಾಲೋಚನೆ ನಡೆಸಲಾಯಿತು. ಜತೆಗೆ ಶೌಚಾಲಯಗಳ ವ್ಯವಸ್ಥೆಗೆ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳು ಸೂಚಿಸಿದರು.

ಪೊಲೀಸ್ ಆಡಳಿತ ಮತ್ತು ಅಯೋಧ್ಯೆ ಮೇಯರ್ ಅವರು ಮಾತನಾಡಿ, ʼʼರಾಮ ನವಮಿಯ ಸಮಯದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಭಕ್ತರ ಅನುಕೂಲಕ್ಕಾಗಿ ಎಲ್ಲ ವ್ಯವಸ್ಥೆಗಳು ಮಾಡಲಾಗಿದೆʼʼ ಎಂದು ಭರವಸೆ ನೀಡಿದ್ದಾರೆ. ಲಕ್ಷಾಂತರ ಭಕ್ತರು ರಾಮ್ ಲಲ್ಲಾ ದರ್ಶನ ಪಡೆಯುವ ಜತೆಗೆ ಹನುಮಾನ್ ಗರ್ಹಿ ರಾಮ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ರಾಮ ನವಮಿ ಏಪ್ರಿಲ್‌ 17ರಂದು ನಡೆಯಲಿದೆ.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ತೆರಳುವ ಯೋಚನೆಯಲ್ಲಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ

ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿಯನ್ನು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಗಣ್ಯರ ಸಮ್ಮುಖದಲ್ಲಿ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದಾರೆ. ಅದಾದ ಬಳಿಕ ಜನವರಿ 23ರಂದು ಈ ಭವ್ಯ ರಾಮ ದೇಗುಲ ಸಾವರ್ಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಅಂದಿನಿಂದ ರಾಮ ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version