ಅಯೋಧ್ಯೆ: ರಾಮ ಮಂದಿರವನ್ನು (Ayodhya Ram Mandir) ಎಲ್ಲಿ ಕಟ್ಟಬೇಕು ಎಂದು ಸಂಕಲ್ಪಿಸಿದ್ದೆವೋ ಅಲ್ಲೇ ಕಟ್ಟಿದ್ದೇವೆ. ಇದು 500 ವರ್ಷಗಳ ಹೋರಾಟದ ಫಲ; ಕೋಟ್ಯಂತರ ಭಾರತೀಯರ ಕನಸು ನನಸಾದ ದಿನ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದರು.
ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲಿ (pran prathistha) ಪ್ರಧಾನಿ ನರೇಂದ್ರ ಮೋದಿ (PM Narendra modi) ಅವರೊಂದಿಗೆ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
ಇಂದು ದೇಶದ ಎಲ್ಲ ಮನಗಳೂ ರಾಮನನ್ನು ತುಂಬಿಕೊಂಡಿವೆ. ಎಲ್ಲ ಮನೆಗಳೂ ರಾಮ ಮಂದಿರಗಳಾಗಿವೆ. ಎಲ್ಲರ ಕಣ್ಣುಗಳೂ ಆನಂದದ ಅಶ್ರುಗಳಿಂದ ತುಂಬಿವೆ. ಎಲ್ಲರ ರೋಮ ರೋಮಗಳಲ್ಲೂ ರಾಮನೇ ತುಂಬಿಕೊಂಡಿದ್ದಾನೆ. ಎಲ್ಲ ದಾರಿಗಳೂ ಅಯೋಧ್ಯೆಯತ್ತ ಗುರಿಯಾಗಿವೆ. ಇಂದು ತ್ರೇತಾಯುಗವೇ ಇಲ್ಲಿ ಸೃಷ್ಟಿಯಾದಂತಿದೆ ಎಂದು ಅವರು ನುಡಿದರು.
#WATCH | Uttar Pradesh CM Yogi Adityanath says, "The temple has been built where we had resolved to build it…"#PranPratishthaRamMandir pic.twitter.com/pgAlnm7NKo
— ANI (@ANI) January 22, 2024
500 ವರ್ಷಗಳ ನಿರಂತರ ಹೋರಾಟ, ಸಾಧನೆಗೆ ಇಂದು ಫಲ ಸಿಕ್ಕಿದೆ. ಆದರಣೀಯ ಪ್ರಧಾನಿ ಮೋದಿಯವರು ಇದನ್ನು ನಿಜ ಮಾಡಿದ್ದಾರೆ. ಇದು ಮಂದಿರ ಪ್ರಾಣಪ್ರತಿಷ್ಠಾಪನೆ ಮಾತ್ರವಲ್ಲ, ಇದು ರಾಮರಾಜ್ಯ ಸ್ಥಾಪನೆಯ ಉದ್ಘೋಷಣೆ ಕೂಡ ಆಗಿದೆ. ಇದೊಂದು ಐತಿಹಾಸಿಕ ಕ್ಷಣ. ದೇಶದ ಪ್ರತಿ ಮನೆ- ಮನವೂ ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದರು.
ಅಯೋಧ್ಯೆಯೂ ಬದಲಾಗಿದೆ. ಇನ್ನೆಂದೂ ಇಲ್ಲಿನ ಶಾಂತಿಯನ್ನು ಯಾರೂ ಕದಡಲಾರರು. ಇಲ್ಲಿ ಗುಂಡಿನ ಹಾರಾಟದ ಸದ್ದು ಕೇಳಿಸಲಾರದು. ಸರಯೂ ನದಿ ರಕ್ತದಿಂದ ಕೆಂಪಾಗಲಾರದು. ಕರ್ಫ್ಯೂ ಇಲ್ಲಿ ಬೇಕಾಗಲಾರದು. ರಾಮನಾಮ ಸಂಕೀರ್ತನೆಯ ಸಂಭ್ರಮ ಇಲ್ಲಿ ಸದಾ ಮುಂದುವರಿಯಲಿದೆ. ಇಲ್ಲಿ ವಿಮಾನ ನಿಲ್ದಾಣ ಬರಬೇಕು ಎಂಬ ಕನಸಿತ್ತು. ಇಂದು ಅದೂ ನನಸಾಗಿದೆ. ಅಯೋಧ್ಯಾ ಧಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ಬೆಳೆಯಲಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್, ಗುಜರಾತ್ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ರಾಮಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ಚಂಪಕ ರಾಯ್ ವೇದಿಕೆಯಲ್ಲಿದ್ದರು.
ಇದನ್ನೂ ಓದಿ: Ayodhya Ram Mandir: ದೇಗುಲದ ಗರ್ಭ ಗುಡಿ ಎಂದರೇನು? ಏನಿದರ ವಿಶೇಷ?