ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ತಲೆ ಎತ್ತುತ್ತಿರುವ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠೆಗೆ (Pran prathishta) ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಈ ಸಮಾರಂಭ ನಡೆಯಲಿದ್ದು, ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಯೋಧ್ಯೆಯಲ್ಲಿ ಈಗಾಗಲೇ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿವೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಸಿದ್ಧತೆಗಾಗಿ ನಗರವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಜನವರಿ 22ರಂದು ವಿಶೇಷ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ದೇಗುಲ ನಗರಿ ಅಯೋಧ್ಯೆಗೆ ನೀವೂ ತೆರಳಬೇಕು ಎಂದು ಆಯೋಚಿಸುತ್ತಿದ್ದೀರಾ? ಹಾಗಾದರೆ ಯಾವ ರೀತಿ ತೆರಳಬಹುದು ಎನ್ನುವುದರ ಮಾಹಿತಿ ಇಲ್ಲಿದೆ.
ಅಯೋಧ್ಯೆಗೆ ಯಾವ ರೀತಿ ತೆರಳಬಹುದು?
ವಿಮಾನ ಮಾರ್ಗ
ಇತ್ತೀಚೆಗೆ ಅಯೋಧ್ಯೆಯ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗಾಗಿ ತೆರೆದುಕೊಂಡಿದೆ. ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅಯೋಧ್ಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಹಲವು ವಿಮಾನಯಾನ ಕಂಪೆನಿಗಳು ಭಾರತದ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಮಾನ ಸೇವೆಯನ್ನು ಪ್ರಕಟಿಸಿವೆ. ಪ್ರವಾಸಿಗರು ಮಹಾಯೋಗಿ ಗೋಕ್ರಖ್ನಾಥ್ ವಿಮಾನ ನಿಲ್ದಾಣ, ಗೋರಖ್‌ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಲಕ್ನೋ ಮತ್ತು ಪ್ರಯಾಗ್‌ರಾಜ್ ಅಥವಾ ವಾರಣಾಸಿ ವಿಮಾನ ನಿಲ್ದಾಣಗಳಿಗೆ ತೆರಳಿ ಅಲ್ಲಿಂದಲೂ ಅಯೋಧ್ಯೆ ತಲುಪಬಹುದು.
ರೈಲು ಮಾರ್ಗ
ಅಯೋಧ್ಯೆಯಲ್ಲಿ ಸುಸಜ್ಜಿತ ರೈಲು ನಿಲ್ದಾಣವೂ ನಿರ್ಮಾಣವಾಗಿದ್ದು, ಪ್ರಧಾನಿ ಮೋದಿ ಕಳೆದ ತಿಂಗಳು ಚಾಲನೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಅನುಗುಣವಾಗಿ ಮೀಸಲಾದ ಅಯೋಧ್ಯೆ ರೈಲ್ವೆ ಸ್ಟೇಷನ್ ವಿವಿಧ ವಲಯಗಳ ರೈಲ್ವೆಯಿಂದ ಉತ್ತಮ ಸಂಪರ್ಕ ಹೊಂದಿದೆ.
ರಸ್ತೆ ಮಾರ್ಗ
ಅಯೋಧ್ಯೆಗೆ ನಿಯಮಿತವಾಗಿ ಕಾರ್ಯನಿರ್ವಹಿಸುವ ಹಲವು ಸಾರ್ವಜನಿಕ ಮತ್ತು ಖಾಸಗಿ ಸೇವಾ ಬಸ್‌ಗಳು ಲಭ್ಯ. ಇವು ವಿವಿಧ ಪ್ರದೇಶಗಳಿಂದ ಅಯೋಧ್ಯೆಗೆ ಸಂಚರಿಸುತ್ತವೆ. ಉತ್ತರ ಪ್ರದೇಶದ ಸಾರಿಗೆ ನಿಗಮದ ಬಸ್‌ಗಳು ಲಕ್ನೋ, ಗೋರ್‌ಖ್‌ಪುರ, ದೆಹಲಿ ಮತ್ತು ಇತರ ಪ್ರಮುಖ ನಗರಗಳಿಂದ ಅಯೋಧ್ಯೆಗೆ ತೆರಳುತ್ತವೆ.
ಶ್ರೀರಾಮನ ಜೀವನ ಸಾರುವ ಸ್ಟ್ಯಾಂಪ್ ಬಿಡುಗಡೆ
ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆಯ ಸ್ಮರಣಾರ್ಥ ಮೋದಿ ಅವರು ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾಮಮಂದಿರ, ಭಗವಾನ್ ಗಣೇಶ, ಭಗವಾನ್ ಹನುಮಾನ್, ಜಟಾಯು, ಕೇವಟ್‌ರಾಜ್ ಹಾಗೂ ಶಬರಿ ಮಾತೆಯ ಆರು ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದರು. ಚಿನ್ನದ ಎಲೆಗಳ ಮೇಲೆ ಸೂರ್ಯನ ಕಿರಣ ಸ್ಪರ್ಶಿಸುವುದು, ಭಗವಾನ್ ಶ್ರೀರಾಮನ ಜೀವನ ವೃತ್ತಾಂತ ಸಾರುವ ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ರಾಮಮಂದಿರದ ಜತೆಗೆ ಚೌಪೈ ಮಂಗಲ ಭಗವಾನ್ ಅಮಂಗಲ ಹರಿಯ ವಿನ್ಯಾಸವೂ ಅಂಚೆ ಚೀಟಿಯಲ್ಲಿದೆ.
ಸೂರ್ಯದೇವ, ಸರಯೂ ನದಿ ಹಾಗೂ ದೇವಾಲಯದ ಸುತ್ತಮುತ್ತ ಇರುವ ವಾಸ್ತುಶಿಲ್ಪದ ಹಿರಿಯನ್ನೂ ಅಂಚೆ ಚೀಟಿಗಳು ಸಾರುತ್ತಿವೆ. ಸುಮಾರು 48 ಪುಟಗಳ ಪುಸ್ತಕದಲ್ಲಿ ಶ್ರೀರಾಮನು ಜಾಗತಿಕವಾಗಿ ಹೇಗೆ ಪ್ರಭಾವ ಬೀರಿದ್ದಾನೆ ಎಂಬುದನ್ನೂ ಅಂಚೆ ಚೀಟಿಗಳ ಮೂಲಕವೇ ತಿಳಿಸಲಾಗಿದೆ.
ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ವಿಜ್ಞಾನದ ಬಲ; ಸಾವಿರ ವರ್ಷವಾದರೂ ಏನೂ ಆಗಲ್ಲ, ಹೇಗೆ ಅಂತೀರಾ?