Site icon Vistara News

Ayodhya Ram Mandir: ಆಹ್ವಾನಕ್ಕೆ ಥ್ಯಾಂಕ್ಸ್ ಎಂದ ಕಾಂಗ್ರೆಸ್; ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ?

ram mandir sonia gandhi

ಹೊಸದಿಲ್ಲಿ: ಅಯೋಧ್ಯೆಯ ನೂತನ ರಾಮಮಂದಿರ (Ayodhya Ram Mandir) ಶಂಕುಸ್ಥಾಪನೆ ಸಮಾರಂಭಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ (Sonia gandhi) ಮತ್ತು ಪಕ್ಷದ ಇತರ ನಾಯಕರಿಗೆ ಆಹ್ವಾನ ನೀಡಲಾಗಿದೆ. ಸೋನಿಯಾ ಗಾಂಧಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆಹ್ವಾನ ಬಂದಿರುವುದನ್ನು ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಖಚಿತಪಡಿಸಿದ್ದಾರೆ. “ಈ ಆಹ್ವಾನಕ್ಕಾಗಿ ತುಂಬಾ ಧನ್ಯವಾದʼ ಎಂದು ಹೇಳಿದ್ದಾರೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗಲಿದೆ.

“ಈ ವಿಷಯದಲ್ಲಿ ನಮಗೇನೂ ಆಕ್ಷೇಪವಿಲ್ಲ. ಸೋನಿಯಾ ಗಾಂಧಿ ಅವರು ಈ ವಿಷಯದಲ್ಲಿ ತುಂಬಾ ಸಕಾರಾತ್ಮಕವಾಗಿದ್ದಾರೆ. ಅವರು ಹೋಗಬಹುದು ಅಥವಾ ಪಕ್ಷದಿಂದ ನಿಯೋಗ ಹೋಗುತ್ತದೆ” ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ಇದೇ ವೇಳೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿಯವರು ನನ್ನನ್ನು ಆಹ್ವಾನಿಸುವುದಿಲ್ಲ. ಏಕೆಂದರೆ ಅವರು ನಿಜವಾದ ಭಕ್ತರನ್ನು ಆಹ್ವಾನಿಸುವುದಿಲ್ಲ. ಮುರಳಿ ಮನೋಹರ ಜೋಶಿ, ಲಾಲ್ ಕೃಷ್ಣ ಅಡ್ವಾಣಿ ಅಥವಾ ದಿಗ್ವಿಜಯ ಸಿಂಗ್ ಆಗಿರಲಿ, ನಿಜವಾದ ಭಕ್ತರಿಗೆ ಆಹ್ವಾನವನ್ನು ನೀಡಲಾಗುವುದಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ವಾರದ ಆರಂಭದಲ್ಲಿ, ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನವನ್ನು ಕಳುಹಿಸಿತ್ತು.

ಈ ಸಮಾರಂಭದಲ್ಲಿ ರಾಮಲಲ್ಲಾ ಮೂರ್ತಿಯನ್ನು ಭವ್ಯ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜಕಾರಣಿಗಳಷ್ಟೇ ಅಲ್ಲದೆ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ರಾಜಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ, ಮಹಾವೀರ್ ಜೈನ್ ಮತ್ತು ರೋಹಿತ್ ಶೆಟ್ಟಿ ಮುಂತಾದ ಚಿತ್ರರಂಗದ ಗಣ್ಯರಿಗೂ ಆಹ್ವಾನ ಕಳುಹಿಸಲಾಗಿದೆ.

ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್, ಧನುಷ್ ಮತ್ತು ರಿಷಬ್ ಶೆಟ್ಟಿ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಯಿದೆ. ಸಮಾರಂಭಕ್ಕೆ ಎಲ್ಲಾ ಪಂಗಡಗಳ 4,000 ಸಂತರನ್ನು ಟ್ರಸ್ಟ್ ಆಹ್ವಾನಿಸಿದೆ.

ಇದನ್ನೂ ಓದಿ: Ram Mandir: ರಾಮ ಮಂದಿರಕ್ಕಾಗಿ 108 ಅಡಿ ಉದ್ದದ ಅಗರಬತ್ತಿ! ಇದರ ವೆಚ್ಚ ಎಷ್ಟು?

Exit mobile version