ನವದೆಹಲಿ: ದೇಶಾದ್ಯಂತ ಈಗ ರಾಮನ ಜಪವೇ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ. ದೇಶಾದ್ಯಂತ ಸಾಧು-ಸಂತರು, ಗಣ್ಯರು, ಸಾಧಕರು ಸೇರಿ ಸಾವಿರಾರು ಗಣ್ಯರು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಗಣ್ಯರು ಮಾತ್ರವಲ್ಲ, ಸುಮಾರು 55 ದೇಶಗಳ 100ಕ್ಕೂ ಅಧಿಕ ಗಣ್ಯರು ಕೂಡ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ವಿಶ್ವ ಹಿಂದು ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿವೇಕಾನಂದ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಅಮೆರಿಕ, ಬ್ರಿಟನ್ ಸೇರಿ 55 ದೇಶಗಳ ಸಂಸದರು, ರಾಯಭಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಸೇರಿ 100ಕ್ಕೂ ಅಧಿಕ ಗಣ್ಯರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು ಜನವರಿ 20ರಂದೇ ಲಖನೌಗೆ ಆಗಮಿಸಲಿದ್ದು, ಜನವರಿ 21ರಂದು ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಯಾವ ದೇಶಗಳಿಂದ ಗಣ್ಯರ ಆಗಮನ?
ಜರ್ಮನಿ, ಫಿಜಿ, ಫಿನ್‌ಲ್ಯಾಂಡ್, ಅಮೆರಿಕ, ಬ್ರಿಟನ್, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್, ಕೀನ್ಯಾ, ಕೊರಿಯಾ, ಮಾರಿಷಸ್, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್ ಇಂಡೀಸ್ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ.
ಬಿಗಿ ಬಂದೋಬಸ್ತ್
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Pranita Subhash: ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಪ್ರಣೀತಾ ಸುಭಾಷ್
ರಾಮಮಂದಿರ ಉದ್ಘಾಟನೆ ದಿನ ಗಣ್ಯರಿಗೂ ಸೇರಿ ಲಕ್ಷಾಂತರ ಜನರಿಗೆ ವಿಶೇಷ ರಾಮ ಹಲ್ವಾ ವಿತರಿಸಲಾಗುತ್ತದೆ. ವಿಷ್ಣು ಮನೋಹರ್ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಬೃಹತ್ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್ ಹಾಲು, 2,500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪೌಡರ್ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ