ಭೋಪಾಲ್: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜನವರಿ 22ರಂದು ಮಧ್ಯಪ್ರದೇಶದಲ್ಲಿಯೂ ಲಿಕ್ಕರ್ ಮಾರಾಟ ಬ್ಯಾನ್ (liquor sales ban) ಮಾಡಲಾಗಿದೆ. ಇದರೊಂದಿಗೆ, ಮಧ್ಯ ಪ್ರದೇಶವು ಆ ದಿನ ಮದ್ಯ ನಿಷೇಧ ಮಾಡುತ್ತಿರುವ ಆರನೇ ರಾಜ್ಯ ಎನಿಸಿಕೊಂಡಿದೆ.
ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಜ.22ರಂದು ʼಡ್ರೈ ಡೇʼ (dry day) ಮಾಡಲು ತೀರ್ಮಾನಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಂದು ಎಲ್ಲ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ. ಯಾವುದೇ ಬಗೆಯ ಮದ್ಯ ಮಾರಾಟ ಇರುವುದಿಲ್ಲ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ಅಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿದೆ. ಜನರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಜ.22ನ್ನು ಡ್ರೈ ಡೇ ಆಗಿಸಲು ನಿರ್ಧರಿಸಲಾಗಿದೆ. ಲಿಕ್ಕರ್, ಭಾಂಗ್ ಮುಂತಾದ ಎಲ್ಲ ಬಗೆಯ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದುವರೆಗೂ ಭಜನ್‌ಲಾಲ್ ನೇತೃತ್ವದ ರಾಜಸ್ಥಾನ ರಾಜ್ಯ ಸರ್ಕಾರ, ಉತ್ತರಾಖಂಡ, ಉತ್ತರಪ್ರದೇಶ, ಅಸ್ಸಾಂ ಹಾಗೂ ಛತ್ತೀಸ್‌ಗಢಗಳು ಆ ದಿನದಂದು ಮದ್ಯ ನಿಷೇಧ ಮಾಡಿವೆ. ಇನ್ನಷ್ಟು ರಾಜ್ಯಗಳು ಮದ್ಯ ನಿಷೇಧ ಮಾಡುವ ಸಂಭವ ಇದೆ.
ಇದೀಗ ಹೆಚ್ಚಾಗಿ ಎನ್‌ಡಿಎ ಆಡಳಿತ ಹೊಂದಿರುವ ರಾಜ್ಯಗಳು ಜ.22ರಂದು ಮದ್ಯ ಮಾರಾಟ ನಿಷೇಧ ಮಾಡಿವೆ. ಕಾಂಗ್ರೆಸ್ ಮತ್ತಿತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೂ ಅಂದು ಮದ್ಯ ಮಾರಾಟ ನಿಷೇಧಕ್ಕೆ ಬಿಜೆಪಿ ಒತ್ತಾಯಿಸಿದೆ. ಹೀಗಾಗಿ, ಕರ್ನಾಟಕದಲ್ಲೂ ಅಂದು ಮದ್ಯ ನಿಷೇಧ ಆಗಲಿದೆಯಾ ಎಂಬ ಕುತೂಹಲ ಮೂಡಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಯಾವುದೇ ಮುತುವರ್ಜಿ ಇದುವರೆಗೆ ತೋರಿಲ್ಲ.
ಇದನ್ನೂ ಓದಿ: Ram Mandir: ಮಂದಿರ ಉದ್ಘಾಟನೆ ದಿನ ಮದ್ಯ ಮಾರಾಟ ಇಲ್ಲ; ಯೋಗಿ ಖಡಕ್ ಆರ್ಡರ್