ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೂ (Ayodhya Ram Mandir Pran Pratishta) ಮುನ್ನವೇ ರೂ.500ರ ಹೊಸ ನೋಟು (500 RS currency note) ಹೊರಬಿಡಲಾಗಿದ್ದು, ಅದರಲ್ಲಿ ನೂತನ ರಾಮ ಮಂದಿರ ಹಾಗೂ ಶ್ರೀರಾಮನ ಚಿತ್ರವಿದೆ ಎಂಬ ಸುದ್ದಿ ಹಾಗೂ ಅದರ ಜೊತೆಗೆ ನೋಟಿನ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ದಿನಗಳಿಂದ ಸದ್ದು (Viral news) ಮಾಡುತ್ತಿದೆ.
ರೂ.500ಕ್ಕೆ ಸಂಬಂಧಿಸಿದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ.500 ನೋಟುಗಳಲ್ಲಿ ಗಾಂಧಿ ಆಕೃತಿಯ ಬದಲು ಶ್ರೀ ರಾಮನ ಚಿತ್ರ ಮುದ್ರಿಸಲಾಗುತ್ತಿದೆ ಎಂಬ ಪ್ರಚಾರ ಜೋರಾಗಿದೆ. ಇದರಲ್ಲಿ ಒಂದು ಬದಿಯಲ್ಲಿ ಶ್ರೀ ರಾಮನ ಚಿತ್ರವನ್ನು ಹಾಗೂ ಇನ್ನೊಂದು ಬದಿಯಲ್ಲಿ ಕೆಂಪು ಕೋಟೆಯ ಬದಲಿಗೆ ಅಯೋಧ್ಯೆ ರಾಮ ದೇವಾಲಯದ ಮಾದರಿಯನ್ನು
ಮುದ್ರಿಸಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಚರ್ಚೆ ಶುರುವಾಗಿದೆ. ಗಾಂಧೀಜಿ ಅವರ ಕನ್ನಡಕದ ಬದಲು ಶ್ರೀರಾಮನ ಬಾಣ ಮತ್ತು ಬಿಲ್ಲು ಇರುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿ ಹಂಚಿಕೊಳ್ಳಲಾದ ನೋಟುಗಳ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜನವರಿ 22ರಂದು ಈ ನೋಟು ಬಿಡುಗಡೆಯಾಗಲಿದೆ ಎಂದೂ ಹೇಳಲಾಗುತ್ತಿದೆ.
ಆದರೆ ಸತ್ಯವೇನು? ಹೊಸ ನೋಟುಗಳು ಬರುತ್ತಿರುವುದು ನಿಜವಲ್ಲ. ಇಂಥ ಯಾವುದೇ ನಿರ್ಧಾರವನ್ನು ಆರ್‌ಬಿಐ ಆಗಲೀ ಸರ್ಕಾರವಾಗಲೀ ದಿಡೀರ್ ಎಂದು ಕೈಗೊಳ್ಳಲು ಸಾಧ್ಯವಿಲ್ಲ. ನೋಟುಗಳ ಬದಲಾವಣೆಗೆ ಸಂಬಂಧಿಸಿ ಆರ್‌ಬಿಐ ಏನನ್ನೂ ಪ್ರಕಟಿಸಿಲ್ಲ. 1996ರಲ್ಲಿ RBI ಕರೆನ್ಸಿ ನೋಟುಗಳ ಮೇಲೆ ಅಶೋಕಸ್ತೂಪದ ಬದಲಿಗೆ ಮಹಾತ್ಮ ಗಾಂಧಿ ಸರಣಿಯನ್ನು ಮುದ್ರಿಸಲು ಪ್ರಾರಂಭಿಸಿತು. ಅಂದಿನಿಂದ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರವಿದ್ದು, ಅದನ್ನು ಬದಲಾಯಿಸುವ ಯಾವುದೇ ನಿರ್ಧಾರವನ್ನು ಆರ್‌ಬಿಐ ಇದುವರೆಗೆ ಕೈಗೊಂಡಿಲ್ಲ.
ಹೀಗಾಗಿ ಈಗ ವೈರಲ್ ಆಗುತ್ತಿರುವುದು ಎಡಿಟ್ ಮಾಡಿದ ಫೋಟೋ ಎಂಬುದು ಖಚಿತವಾಗಿದೆ.
ಇದನ್ನೂ ಓದಿ: Ayodhya Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಿಷೇಧ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಪಿಐಎಲ್