ಅಯೋಧ್ಯೆ: 1992ರಲ್ಲಿ ಇದೇ ಜಾಗದಲ್ಲಿದ್ದ ವಿವಾದಿತ ಕಟ್ಟಡ ಧ್ವಂಸವಾಗಿತ್ತು; 2005ರಲ್ಲಿ ಇದೇ ಜಾಗದಲ್ಲಿ ಉಗ್ರರ ದಾಳಿ ನಡೆದಿತ್ತು; ಇಂದು ಅದೇ ತಾಣದಲ್ಲಿ ಭವ್ಯವಾದ ರಾಮ ಮಂದಿರ ತಲೆಯೆತ್ತುತ್ತಿದೆ. ಮಂದಿರ ಉದ್ಘಾಟನೆಗೆ (Ayodhya Ram Mandir) ಮೂರು ವಾರಗಳ ಮೊದಲು, ಡಿಸೆಂಬರ್ 30ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು “ಒಂದು ಕಾಲದಲ್ಲಿ ಭಗವಾನ್ ರಾಮ ಡೇರೆಯಡಿಯಲ್ಲಿ ವಾಸಿಸುತ್ತಿದ್ದ; ಈಗ ಅವನಿಗೆ ಕಾಂಕ್ರೀಟ್ ಮನೆ ಸಿಗುತ್ತಿದೆ” ಎಂದು ಹೇಳಿದ್ದರು.
ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯದ ಕಡೆಗಿನ ಪ್ರಯಾಣದ ಹಿಂದೆ ದಶಕಗಳಷ್ಟು ದೀರ್ಘಕಾಲದ ಕತೆ ಇದೆ. ಈ ಪವಿತ್ರ ನಗರದ 67 ಎಕರೆ ಭೂಮಿ ಹಿಂದೂಗಳ ನಂಬಿಕೆಯೊಂದಿಗೆ ಎಷ್ಟೋ ಕಾಲದಿಂದ ತಳುಕು ಹಾಕಿಕೊಂಡಿದೆ. ಇಲ್ಲಿಯೇ 2005ರ ಭಯೋತ್ಪಾದಕ ದಾಳಿ ಕೂಡ ನಡೆದಿತ್ತು. ಎಂದೆಂದೂ ಈ ತಾಣ ಹಿಂದೂಗಳಿಗೆ ಸಿಗುವುದೇ ಇಲ್ಲವೇನೋ ಎಂಬ ಆತಂಕ ಕೂಡ ಅಂದು ಮೂಡಿತ್ತು.
2005ರ ಬೇಸಿಗೆಯ ಮುಂಜಾನೆ, ಭಯೋತ್ಪಾದಕರು ಗ್ರೆನೇಡ್‌ಗಳು, ರಾಕೆಟ್ ಲಾಂಚರ್‌ಗಳು ಮತ್ತು ತಮ್ಮ ದೇಹದ ಮೇಲೆ ಬಾಂಬ್‌ಗಳನ್ನು ಕಟ್ಟಿಕೊಂಡು ದೇವಾಲಯದ ಸ್ಥಳಕ್ಕೆ ದಾಳಿ ನಡೆಸಿದ್ದರು. ಐವರು ಶಸ್ತ್ರಸಜ್ಜಿತ ಎಲ್‌ಇಟಿ ಉಗ್ರರು ದೇವಸ್ಥಾನದ ಭದ್ರತಾ ಗ್ರಿಲ್ ಅನ್ನು ಭೇದಿಸಲು ತಮ್ಮ ವಾಹನವನ್ನು ಸ್ಫೋಟಿಸಿದರು. ತಾತ್ಕಾಲಿಕ ದೇವಾಲಯದ 100 ಮೀಟರ್‌ಗಳೊಳಗೆ ತಲುಪಿದರು. ಗ್ರೆನೇಡ್‌ಗಳು ಅಥವಾ ತಮ್ಮ ದೇಹಕ್ಕೆ ಕಟ್ಟಲಾದ ಬಾಂಬ್‌ಗಳನ್ನು ಸ್ಫೋಟಿಸಲು ಉದ್ದೇಶಿಸಿದ್ದರು. ಅವರು ‘ಸೀತಾ ರಸೋಯಿ’ ತಲುಪಿದ್ದರು. ಒಂದು ಗಂಟೆಯ ಅವಧಿಯ ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡದೇ ಇದ್ದಿದ್ದರೆ, ಇದು 1992ರ ಬಾಬರಿ ಮಸೀದಿ ಧ್ವಂಸಕ್ಕಿಂತಲೂ ದೊಡ್ಡ ರಾಷ್ಟ್ರೀಯ ಬಿಕ್ಕಟ್ಟು ಆಗಬಹುದಿತ್ತು.
ಅಯೋಧ್ಯೆ ಆಗ ಸ್ವಲ್ಪ ಮಾತ್ರ ಅಭಿವೃದ್ಧಿ ಹೊಂದಿದ್ದ ಪಟ್ಟಣವಾಗಿತ್ತು. ಆಗಿನ ತಾತ್ಕಾಲಿಕ ದೇವಾಲಯ ಸಣ್ಣ ಟೆಂಟ್‌ನ ಅಡಿಯಲ್ಲಿತ್ತು. ಹೆಚ್ಚಿನ ಭದ್ರತೆಯನ್ನು ಹೊಂದಿದ್ದರೂ ಭಯೋತ್ಪಾದಕರು ಅಲ್ಲಿಯವರೆಗೂ ಬರುವಂತಾದುದು ಆಗಿನ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರದ ಬಗ್ಗೆ ಅನುಮಾನಪಡುವಂತೆ ಮಾಡಿತ್ತು. “ಪ್ರಭು ರಾಮ ಟೆಂಟಿನಲ್ಲಿ ಇದ್ದರೂ ಉಗ್ರರು ಅವನನ್ನು ಸ್ಫೋಟಿಸುವಲ್ಲಿ ಯಶಸ್ವಿಯಾಗಲಿಲ್ಲ” ಎಂದು ಭಕ್ತರು ಮಾತನಾಡಿಕೊಂಡರು.
ಸುಪ್ರೀಂ ಕೋರ್ಟ್ ತೀರ್ಪು, ಮೂಡಿದ ಭರವಸೆ
ಸುದೀರ್ಘ ಕಾಲದ ವ್ಯಾಜ್ಯದ ನಂತರ ಅಂತಿಮವಾಗಿ 2019ರಲ್ಲಿ ಸುಪ್ರೀಂ ಕೋರ್ಟ್ (Supreme court) ರಾಮ ಮಂದಿರ ನಿರ್ಮಿಸಲು 67 ಎಕರೆ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸಲು ದಾರಿ ಮಾಡಿಕೊಟ್ಟಿತು. ಅಷ್ಟರಲ್ಲಾಗಲೇ 2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಬಂದಿತ್ತು. ಇತರ ಕಡೆಗಳಲ್ಲಿ ಆದಂತೆ ಅಯೋಧ್ಯೆಯಲ್ಲೂ ಅಭಿವೃದ್ಧಿಯ ಛಾಯೆಗಳು ಹೊರಹೊಮ್ಮಿದ್ದವು. ಆದರೆ ರಾಮನಿನ್ನೂ ಕೋರ್ಟ್ ವ್ಯಾಜ್ಯ ಇದ್ದ ಕಾರಣ ಟೆಂಟ್‌ನಲ್ಲಿಯೇ ಇದ್ದ. ಟೆಂಟ್ ಹೊರಗಿನಿಂದ ಕೊಳಕಾಗಿತ್ತು. ಭದ್ರತೆ ಮಾತ್ರ ಬಿಗಿಯಾಗಿತ್ತು. ಒಳಗೆ ಕಾಡು ಬೆಳೆದಿತ್ತು. ಆಗ ಅಲ್ಲಿಗೆ ಭೇಟಿ ನೀಡುತ್ತಿದ್ದ ಯಾತ್ರಿಕರಿಗೆ ಅಸಮಾಧಾನವಾಗುತ್ತಿತ್ತು.
ಇದು ದೇವಸ್ಥಾನ, 10 ಮೀಟರ್ ದೂರದಿಂದ ಪ್ರಾರ್ಥನೆ ಸಲ್ಲಿಸಬಹುದು ಎಂದು ಸಿಆರ್‌ಪಿಎಫ್ ಸಿಬ್ಬಂದಿ ಯಾತ್ರಾರ್ಥಿಗಳಿಗೆ ಹೇಳುವವರೆಗೂ ಇದು ದೇವಾಲಯದ ಟೆಂಟ್ ಎಂಬುದು ಗೊತ್ತಾಗುತ್ತರಲಿಲ್ಲ. ಇದು ಮತ್ತೊಂದು ಭದ್ರತಾ ಚೆಕ್‌ಪಾಯಿಂಟ್ ಎಂದೇ ತಪ್ಪಾಗಿ ಹಲವರು ಗ್ರಹಿಸುತ್ತಿದ್ದರು. ಅಲ್ಲಿ ಕುಳಿತಿದ್ದ ಒಬ್ಬ ಅರ್ಚಕರು ಪ್ರಸಾದವನ್ನು ನೀಡುತ್ತಿದ್ದರು. ಕೆಲವೇ ಸೆಕೆಂಡು ಮಾತ್ರ ಅಲ್ಲಿ ನಿಲ್ಲಬಹುದಿತ್ತು. “ಶೀಘ್ರದಲ್ಲೇ ದೊಡ್ಡ ದೇವಾಲಯ ಬರಲಿದೆ” ಎಂದು ಪುರೋಹಿತರು ಹೇಳುತ್ತಿದ್ದರು.
ಈಗ ಅಯೋಧ್ಯೆಯ ಈ ಸ್ಥಳಕ್ಕೆ ಭೇಟಿ ನೀಡಿದರೆ ರಚನೆಯಾಗುತ್ತಿರುವ ಭವ್ಯವಾದ ದೇವಾಲಯದ ನೋಟ ಗೋಚರಿಸುತ್ತದೆ. ಅಯೋಧ್ಯೆಯನ್ನು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಜಾಗತಿಕ ಆಧ್ಯಾತ್ಮಿಕ ತಾಣವನ್ನಾಗಿ ಮಾಡಲು 32,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆ ಪ್ರಗತಿಯಲ್ಲಿದೆ. ಲೋಕಾರ್ಪಣೆಗೊಂಡ ಬಳಿಕ ಈ ದೇವಾಲಯ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನಸಂದಣಿಯನ್ನು ಹೊಂದುವ ಸಾಧ್ಯತೆಯಿದೆ. 2047ರ ವೇಳೆಗೆ ವಾರ್ಷಿಕ 10 ಕೋಟಿಗೂ ಹೆಚ್ಚು ಜನ ಅಯೋಧ್ಯೆಗೆ ಭೇಟಿ ನೀಡಬಹುದು. ದೇವಾಲಯದ ನಿರ್ಮಾಣಕ್ಕೆ 1,800 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದು ಸಂಪೂರ್ಣವಾಗಿ ದೇಣಿಗೆಯಿಂದ ಆಗಲಿದೆ. ದೇವಾಲಯದ ನೆಲ ಮಹಡಿ ಪೂರ್ಣಗೊಂಡಿದೆ. ರಾಮಲಲ್ಲಾ ಮೂರ್ತಿಯನ್ನು ಇಲ್ಲಿ ಸ್ಥಾಪಿಸಿ ಉದ್ಘಾಟನೆಯ ಒಂದು ದಿನದ ನಂತರ, ಅಂದರೆ ಜನವರಿ 23ರಿಂದ ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗುತ್ತದೆ.
ದೇವಾಲಯದ ಮೊದಲ ಮತ್ತು ಎರಡನೇ ಮಹಡಿಗಳು ಡಿಸೆಂಬರ್ 30, 2024ರೊಳಗೆ ಪೂರ್ಣಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ. ಮತ್ತು 71 ಎಕರೆಗಳ ಸಂಪೂರ್ಣ ದೇಗುಲ ಆವರಣವು 2025ರಲ್ಲಿ ಪೂರ್ಣಗೊಳ್ಳುತ್ತದೆ. ಹೆದ್ದಾರಿಗಳು, ರಸ್ತೆಗಳು, ಮೂಲಸೌಕರ್ಯಗಳು, ಟೌನ್‌ಶಿಪ್‌ಗಳು, ಭವ್ಯ ಪ್ರವೇಶ ದ್ವಾರಗಳ ದೊಡ್ಡ ಜಾಲ ಮತ್ತು ಬಹುಮಟ್ಟದ ಪಾರ್ಕಿಂಗ್ ಸೌಲಭ್ಯಗಳು ಬರುತ್ತಿವೆ. ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ಮೇಲ್ದರ್ಜೆಗೇರಿದ ರೈಲು ನಿಲ್ದಾಣವು ಈಗಾಗಲೇ ಕಾರ್ಯಾರಂಭ ಮಾಡಿವೆ. ಪಟ್ಟಣದ ಅಲಂಕರಣವೂ ನಡೆಯುತ್ತಿದೆ. ಸರಯೂ ನದಿಯ ಮುಂಭಾಗವು ಹೊಸ ಮತ್ತು ಸ್ವಚ್ಛವಾದ ಘಾಟ್‌ಗಳೊಂದಿಗೆ ಭವ್ಯವಾಗಿದೆ. 2005ರಲ್ಲಿ ನೋಡಿದವರು ಈಗಿನ ಅಯೋಧ್ಯಾ ಪಟ್ಟಣವನ್ನು ಬಹುಶಃ ಗುರುತಿಸಲಾರರು.
ಅಯೋಧ್ಯೆಯು ಕಿರಿದಾದ ಮಾರ್ಗಗಳು, ಹನುಮಾನ್ ಘಡಿ ದೇವಸ್ಥಾನ, ಇಲ್ಲಿನ ಅಂಗಡಿಗಳಲ್ಲಿ ಮಾರಾಟವಾಗುವ ವಿವಿಧ ರೀತಿಯ ಪೇಡಾಗಳಿಗೆ ಹೆಸರುವಾಸಿಯಾಗಿದೆ. ಈಗ ಅದರ ಭವ್ಯವಾದ ಮಂದಿರದಿಂದ ಪ್ರಸಿದ್ಧವಾಗಲಿದೆ. ಇದು ರಾಮನ ಜನ್ಮಸ್ಥಳ ಎಂಬ ಕೋಟ್ಯಂತರ ಜನರ ನಂಬಿಕೆಗೆ ಸೂಕ್ತವಾದ ಭವ್ಯವಾದ ದೇವಾಲಯ ಮೂಡುತ್ತಿದೆ.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯ ರಾಮ್‌ಲಲ್ಲಾ ಮೂರ್ತಿಗೆ ಮೈಸೂರಿನಿಂದ ಗುಪ್ತವಾಗಿ ತೆರಳಿದ ಶಿಲೆ