ಹೊಸದಿಲ್ಲಿ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಪಕ್ಷದ ಈ ನಿರ್ಧಾರ ಸದ್ಯದಲ್ಲೇ ಆಗಮಿಸಲಿರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ಗೆ ದುಬಾರಿಯಾಗಬಹುದು ಎಂದು ಕೆಲವು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಿದ್ದಾರೆ.
ಜನವರಿ 22ರಂದು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆದರೆ ಇದು ʼರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮ. ಹೀಗಾಗಿ ತಾನು ಭಾಗವಹಿಸುತ್ತಿಲ್ಲʼ ಎಂದು ಕಾಂಗ್ರೆಸ್ ಹೇಳಿದೆ. ಮಂದಿರ ನಿರ್ಮಾಣ ಅಪೂರ್ಣವಾಗಿರುವಾಗಲೇ, ಲೋಕಸಭೆ ಚುನಾವಣೆಗೂ ಮುನ್ನ ಆತುರವಾಗಿ ಉದ್ಘಾಟನೆ ನಡೆಯುತ್ತಿದೆ ಎಂಬ ಅಂಶವನ್ನು ಅದು ಎತ್ತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ), ಎಡಪಕ್ಷಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.
ಯಾಕೆ ತಿರಸ್ಕಾರ?
ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಈ ನಿರ್ಧಾರದ ಹಿಂದಿನ ತರ್ಕವೇನು? ರಾಮಮಂದಿರ ಪ್ರತಿಸ್ಠಾಪನೆಯಿಂದ ಯಾವುದೇ ಲಾಭವಾದರೂ ಅದು ಬಿಜೆಪಿಗೆ ಸಿಗಲಿದೆ. ಹಿಂದುತ್ವದ ಇಮೇಜಿನ ವಿಚಾರಕ್ಕೆ ಬಂದರೆ ಬಿಜೆಪಿಯೊಂದಿಗೆ ಬೇರೆ ಯಾವ ಪಕ್ಷವೂ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಸಮಾರಂಭದಲ್ಲಿ ಕಾಂಗ್ರೆಸ್ ಭಾಗವಹಿಸಿದರೂ ಈ ವಿಚಾರದಲ್ಲಿ ಅದು ಬಿಜೆಪಿಯ ಒಂದು ಮತವನ್ನೂ ಕಿತ್ತುಕೊಳ್ಳಲಾರದು. ಇದಲ್ಲದೆ, ಅದು ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳುವ ಅಪಾಯವನ್ನೂ ಕಾಂಗ್ರೆಸ್‌ಗೆ ಉಂಟುಮಾಡುತ್ತದೆ.
ಟಿಎಂಸಿಗೆ ಲಾಭ
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಈ ವಿಚಾರದಲ್ಲಿ ತಮ್ಮ ನಿರ್ಧಾರದ ಬಗೆಗೆ ದೃಢವಾಗಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯ ಸಮಯದಲ್ಲಿ ʼಜೈ ಶ್ರೀ ರಾಮ್ʼ ಎಂಬ ಘೋಷಣೆಯನ್ನು ಚುನಾವಣಾ ಇಶ್ಯೂ ಮಾಡಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ ಅದು ಬಿಜೆಪಿಯ ಪರವಾಗಿ ಕೆಲಸ ಮಾಡಲಿಲ್ಲ. ಆದ್ದರಿಂದ 2024ರ ಲೋಕಸಭೆ ಚುನಾವಣೆಯಲ್ಲಿಯೂ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಮಮತಾ ಇಷ್ಟಪಡುವುದಿಲ್ಲ. ಮಂದಿರಕ್ಕೆ ಹೋದರೆ ಖಂಡಿತವಾಗಿಯೂ ಮುಸ್ಲಿಂ ಮತಗಳು ಸ್ವಲ್ಪ ಅಲ್ಲಾಡಬಹುದು ಎಂಬುದು ಅವರಿಗೆ ತಿಳಿದಿದೆ.
ಕಾಂಗ್ರೆಸ್‌ಗೆ ದ್ವಂದ್ವ
ಆದರೆ ಕಾಂಗ್ರೆಸ್ಸಿನ ಪರಿಸ್ಥಿತಿ ಭಿನ್ನ. ಕಾಂಗ್ರೆಸ್ ನಾಯಕರ ನಡುವೆಯೇ ಈ ಬಗ್ಗೆ ದ್ವಂದ್ವ, ಭಿನ್ನಮತ ಇದೆ. ಇತ್ತೀಚೆಗಷ್ಟೇ ಉನ್ನತ ನಾಯಕರು ಮತ್ತು ರಾಜ್ಯ ನಾಯಕರು ನಡೆಸಿದ ಸಭೆಯಲ್ಲಿ, ಉತ್ತರ ಪ್ರದೇಶ ಕಾಂಗ್ರೆಸ್‌ನ ಕೆಲವು ನಾಯಕರ ಪಕ್ಷದ ಈ ನಿಲುವು ತಮ್ಮ ಮತಗಳಿಕೆ ಅವಕಾಶಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದರು. ಈ ನಡುವೆ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಮಂದಿರಕ್ಕೆ ಹೋಗಲೂ ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಇದೇ ಮೊದಲಲ್ಲ. ಕಾಂಗ್ರೆಸ್, ಇತರ ವಿರೋಧ ಪಕ್ಷಗಳೊಂದಿಗೆ ಹೊಸ ಸಂಸತ್ತಿನ ಕಟ್ಟಡದ ಭೂಮಿಪೂಜೆ ಮತ್ತು ಸೆಂಗೋಲ್ ಸಮಾರಂಭವನ್ನು ಕೂಡ ಬಹಿಷ್ಕರಿಸಿತ್ತು. ಹೀಗೆ ಮಾಡುವ ಮೂಲಕ ಪಕ್ಷ ಹಿಂದೂ ವಿರೋಧಿ ಎಂಬ ಹೀಗಳಿಕೆಗೆ ಪಾತ್ರವಾಗಿತ್ತು. ಇದನ್ನು ಕಾಂಗ್ರೆಸ್ ಮರೆಯಲು ಬಿಡದೆ ಬಿಜೆಪಿ ಸಾಕಷ್ಟು ಟ್ರೋಲ್ ಮಾಡಿತ್ತು. ಈಗಂತೂ ಕಾಂಗ್ರೆಸ್‌ನ ಈ ನಿಲುವನ್ನು ಬಿಜೆಪಿ ಯಾವ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಲೋಕಸಭೆ ಚುನಾವಣೆಯವರೆಗೂ ಇದನ್ನು ವಿಸ್ತರಿಸಿ, ಕಾಂಗ್ರೆಸ್ ಹಿಂದೂವಿರೋಧಿ ಎಂಬ ಭಾವನೆ ಬಿತ್ತಲು ಅಗತ್ಯವಾದ ಎಲ್ಲ ಬಗೆಯ ಪ್ರಚಾರವನ್ನೂ ಮಾಡಲಿದೆ.
“ಧರ್ಮವು ವೈಯಕ್ತಿಕ ವಿಚಾರವಾಗಿದೆ. ಅದರೊಂದಿಗೆ ರಾಜಕೀಯವನ್ನು ಬೆರೆಸುವುದು ಅನೈತಿಕ” ಎಂದು ಕಾಂಗ್ರೆಸ್ ಹೇಳಿದೆ. ಬಿಜೆಪಿಯು ಈ ಹಿಂದೆ ರಾಮಮಂದಿರ ಮತ್ತು ಧರ್ಮವನ್ನು ರಾಜಕೀಯ ಲಾಭ ಪಡೆಯಲು ಮಾತ್ರ ಬಳಸಿಕೊಂಡಿದೆ ಎಂದು ಪಕ್ಷ ಆರೋಪಿಸಿದೆ. ಆದರೆ ಇಂಥ ತಾತ್ವಿಕ ಸಂಗತಿಗಳನ್ನು ತಳಮಟ್ಟದ ಮತದಾರರ ನೆಲೆಯಲ್ಲಿ ಅರ್ಥ ಮಾಡಿಸುವುದು ಕಷ್ಟ.
ಮೊದಲ ಬಾರಿಯಲ್ಲ
ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಪಕ್ಷದಲ್ಲಿನ ಕೆಲವರನ್ನು ತಳಮಟ್ಟದಲ್ಲಿ ಇಕ್ಕಟ್ಟಿಗೆ ಸಿಕ್ಕಿಸುತ್ತವೆ. ಉದಾಹರಣೆಗೆ, ಮಧ್ಯಪ್ರದೇಶ ಚುನಾವಣೆಯ ಮಧ್ಯದಲ್ಲಿ, ಡಿಎಂಕೆ ನಾಯಕ ನೀಡಿದ ʼಸನಾತನ ಧರ್ಮʼದ ಕುರಿತ ಹೇಳಿಕೆ ವಿವಾದ ಎಬ್ಬಿಸಿತ್ತು. ಇದಾದ ನಂತರ ಇಂಡಿಯಾ ಫ್ರಂಟ್‌ನ ಜಂಟಿ ರ್ಯಾಲಿ ಬೇಡ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ನಿರ್ಧಾರ ತೆಗೆದುಕೊಂಡಿದ್ದರು. ಈಗಂತೂ ಕಾಂಗ್ರೆಸ್‌ನ ಈ ನಿರ್ಧಾರದಿಂದ ಹಿಂದಿ ಹೃದಯ ಭಾಗದವರು ಆತಂಕಗೊಂಡಿದ್ದಾರೆ.
ಪ್ರಧಾನ ಮಂತ್ರಿಯ ಸುತ್ತ ಕೇಂದ್ರೀಕೃತವಾಗಿರುವ ಯಾವುದೇ ಧಾರ್ಮಿಕ ಕಾರ್ಯಕ್ರಮದಿಂದ ದೂರವಿದ್ದು ಜಾತ್ಯತೀತ ಇಮೇಜ್ ಪ್ರದರ್ಶಿಸುವುದು ಮುಖ್ಯ ಎಂದು ಕಾಂಗ್ರೆಸ್ ಹೈಕಮಾಂಡ್ ಭಾವಿಸಿದೆ. ಆದರೆ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ನಂಬಿಕೆ ಇಟ್ಟಿದೆ ಎಂದು ಮತದಾರರಿಗೆ ಹೇಳಲು ಬಿಜೆಪಿ ಇದನ್ನು ಬಳಸಿಕೊಳ್ಳುತ್ತದೆ.
ವಿದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ಸೆಂಗೋಲ್ ಸಮಾರಂಭದ ಬಗ್ಗೆ ಸರ್ಕಾರವನ್ನು ಟೀಕಿಸಿದ್ದರು. ಇದು ಹಿಂದೆಂದೂ ಕಾಣದ ಮತ್ತು ಕೇಳಿರದ ಘಟನೆಯಾಗಿದೆ ಎಂದು ಟೀಕಿಸಿದ್ದರು. ಆದರೆ ದಕ್ಷಿಣದ ಸಾಧುಗಳ ಮುಂದೆ ಪ್ರಧಾನಿ ಮೋದಿ ಸಾಷ್ಟಾಂಗ ನಮಸ್ಕಾರ ಮಾಡಿ, ದಕ್ಷಿಣದತ್ತ ಸಾಫ್ಟ್ ಕಾರ್ನರ್ ಮೂಡಿಸಿಕೊಳ್ಳುವ ಅವಕಾಶ ಸೃಷ್ಟಿಸಿಕೊಂಡಿದ್ದರು. ಬಿಜೆಪಿಯಂತೂ ರಾಮಮಂದಿರವನ್ನು ಚುನಾವಣೆ ಲಾಭಕ್ಕಾಗಿ ಬಳಸಿಕೊಳ್ಳುವುದು ಸ್ಪಷ್ಟ. ಆದರೆ ಈ ಸ್ಪಷ್ಟತೆ ಕಾಂಗ್ರೆಸ್‌ನಲ್ಲಿ ಇಲ್ಲ. ಅತ್ತ ಜಾತ್ಯತೀತತೆ ಹಾಗೂ ಇತ್ತ ಮೃದು ಹಿಂದುತ್ವಗಳ ನಡುವೆ ಓಲಾಡುತ್ತಿರುವ ಕಾಂಗ್ರೆಸ್‌ನ ಈ ನಿಲುವು ಅದಕ್ಕೆ ಲಾಭವನ್ನಂತೂ ಮಾಡುವುದಿಲ್ಲ.
ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಗೆ ಬಾರದಿರುವ ಕಾಂಗ್ರೆಸ್ ನಿರ್ಧಾರ ಅಕ್ಷಮ್ಯ ಅಪರಾಧ: ಬಿ.ಎಸ್. ಯಡಿಯೂರಪ್ಪ