ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಡಿಸೆಂಬರ್ 30ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼ ಮತ್ತು ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.
ತಮ್ಮ ಭೇಟಿಯ ವೇಳೆ ಅವರು ₹3,284.60 ಕೋಟಿಗೂ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ತಮ್ಮ ಅಯೋಧ್ಯೆ ಭೇಟಿಯ ಸಂದರ್ಭದಲ್ಲಿ ರೋಡ್‌ಶೋ ಮತ್ತು ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ ಎಂದು ಅಯೋಧ್ಯೆಯ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ.
ಈ ಕಾರ್ಯಕ್ರಮಗಳು ಹಾಗೂ ಮುಂಬರಲಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ (Ayodhya Ram Mandir) ಮುನ್ನ ನಗರದಲ್ಲಿ ಮಾಡಲಾಗುತ್ತಿರುವ ವ್ಯವಸ್ಥೆಗಳ ಬಗ್ಗೆ ದಯಾಳ್ ಮಾಹಿತಿ ನೀಡಿದರು. “ಇಲ್ಲಿನ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿವೆ. ಮುಖ್ಯಮಂತ್ರಿಗಳೂ ಅದನ್ನು ಪರಿಶೀಲಿಸುತ್ತಿದ್ದಾರೆ. ಉನ್ನತ ಮಟ್ಟದ ಸೇವೆಗಳಿಗಾಗಿ, ನಾವು ಇಲ್ಲಿಂದ ಲಕ್ನೋಗೆ ಬ್ಯಾಕಪ್ ಯೋಜನೆಯನ್ನು ಹೊಂದಿದ್ದೇವೆ. ಡಿಸೆಂಬರ್ 30ರಂದು ಪ್ರಧಾನಿ ಬರುತ್ತಿದ್ದಾರೆ. ಇದ್ದವು. ಮೊದಲ ಹಂತದಲ್ಲಿರುವ ಏರ್‌ಪೋರ್ಟ್ ಮತ್ತು ರೈಲು ನಿಲ್ದಾಣಗಳ ಉದ್ಘಾಟನೆ ನಡೆಯಲಿದೆ. ಅಂದಾಜಿನ ಪ್ರಕಾರ ಜನವರಿ 22ರ ನಂತರ 50,000-55,000 ಜನ ಪ್ರತಿದಿನ ಅಯೋಧ್ಯೆಗೆ ಬರಬಹುದು. ಆಡಳಿತವು ಅದಕ್ಕೆ ತಯಾರಿ ನಡೆಸುತ್ತಿದೆ” ಎಂದು ದಯಾಳ್ ಹೇಳಿದರು.
“ಪ್ರಧಾನಿ ರೈಲುಗಳಿಗೆ ಹಸಿರು ಬಾವುಟ ತೋರಿಸಲಿದ್ದಾರೆ. ನಂತರ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಅಯೋಧ್ಯೆಯ ಆಯುಕ್ತರು ತಿಳಿಸಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಭಗವಾನ್ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಉತ್ತರ ಪ್ರದೇಶ ಸರ್ಕಾರವು ಡಿಸೆಂಬರ್ 30ರಿಂದ ಜನವರಿ ವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ ₹100 ಕೋಟಿ ಬಜೆಟ್ ಅನ್ನು ನಿಗದಿಪಡಿಸಿದೆ.
ಈ ಮಹತ್ವದ ಧಾರ್ಮಿಕ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಆಡಳಿತವು ನಗರದ ಸೌಂದರ್ಯೀಕರಣ ಅಭಿಯಾನವನ್ನು ಪ್ರಾರಂಭಿಸಿದೆ. ರಸ್ತೆಗಳನ್ನು ಅಗಲೀಕರಣಗೊಳಿಸಲಾಗುತ್ತಿದೆ ಮತ್ತು ಮೂಲಸೌಕರ್ಯಗಳನ್ನು ನವೀಕರಿಸಲಾಗುತ್ತಿದೆ. ಸಮಾರಂಭಕ್ಕೆ 3000 ವಿವಿಐಪಿಗಳು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: Ayodhya Ram Mandir: ಆಹ್ವಾನಕ್ಕೆ ಥ್ಯಾಂಕ್ಸ್ ಎಂದ ಕಾಂಗ್ರೆಸ್; ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ?