ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಮಂಗಳವಾರದಿಂದ ಪ್ರಾಣ ಪ್ರತಿಷ್ಠಾಪನೆಯ ಪೂರ್ವಭಾವಿ ವಿಧಿವಿಧಾನಗಳು ಪ್ರಾರಂಭವಾಗಿವೆ. ಪ್ರಾಣ ಪ್ರತಿಷ್ಠಾ ಸಮಾರಂಭದ ಒಂದು ದಿನದ ನಂತರ ಅಂದರೆ ಜನವರಿ 23ರಿಂದ ರಾಮ ಮಂದಿರ ಸಾರ್ವಜನಿಕರಿಗೆ ತೆರೆಯಲಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ (Champat Rai) ಅವರು ಸೋಮವಾರ ಪೂರ್ವಭಾವಿ ವಿಧಿವಿಧಾನಗಳು ಸಮಾರಂಭದ ಒಂದು ದಿನ ಮೊದಲಿನವರೆಗೆ ಅಂದರೆ ಭಾನುವಾರದವರೆಗೆ ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ. ಆಚರಣೆಗಳು ಹಲವಾರು ವಿಶೇಷ ಪೂಜೆಗಳನ್ನು ಒಳಗೊಂಡಿವೆ.
ಟ್ರಸ್ಟ್ ಅಧಿಕಾರಿಗಳ ಪ್ರಕಾರ ಸೋಮವಾರ ಮಕರ ಸಂಕ್ರಾಂತಿಯಿಂದ ಹಲವು ಆಚರಣೆಗಳು ಪ್ರಾರಂಭವಾಗಿವೆ. ಸೋಮವಾರದಿಂದ ಅಯೋಧ್ಯೆಯಲ್ಲಿ ವೈದಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಎಂಟು ದಿನಗಳ ಆಚರಣೆಯನ್ನು ಪ್ರಾರಂಭಿಸಲಾಯಿತು. ಈ ವಿಧಿವಿಧಾನಗಳಲ್ಲಿ ಪ್ರಾಯಶ್ಚಿತ್ತ, ಗೋದಾನ, ವಿಶೇಷ ಸ್ನಾನ ಮತ್ತಿತರ ವಿಧಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಎಂಟು ದಿನಗಳ ಕಾಲ ಶ್ರೀರಾಮ ನಾಮಸ್ಮರಣೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯುಪಿ ಗವರ್ನರ್ ಆನಂದಿಬೆನ್ ಪಟೇಲ್, ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ಎಲ್ಲಾ ಟ್ರಸ್ಟಿಗಳು ದೇವಾಲಯದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಜನವರಿ 23ರಿಂದ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಬಹುದು. ಭಕ್ತರು ಜನವರಿ 23ರಿಂದ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಬಹುದು ಎಂದು ರಾಮ ಮಂದಿರ ಟ್ರಸ್ಟ್‌ನ ಚಂಪತ್ ರೈ ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಜನವರಿ 20ರಿಂದ ದೇವಾಲಯವಿರುವ ಪ್ರದೇಶಕ್ಕೆ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗುತ್ತಿದೆ. ಸರಿಯಾದ ಅನುಮತಿ ಹೊಂದಿರುವ ಜನರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತಿದೆ.
ಇದನ್ನೂ ಓದಿ: Rama Mandir : ರಾಮ ಮಂದಿರ ಉದ್ಘಾಟನೆಗೆ ದಿನಗಣನೆ; ಜ. 22ರವರೆಗೆ ರಾಜ್ಯದಲ್ಲಿ ಹೈಅಲರ್ಟ್