Site icon Vistara News

Ayodhya Ram Mandir: ಬೀಗರ ಮನೆಗೆ ವಿಶ್‌ ಮಾಡಿದ ದಕ್ಷಿಣ ಕೊರಿಯಾ! ಯಾರೀಕೆ ಅಯೋಧ್ಯೆಯಿಂದ ಕೊರಿಯಾಗೆ ತೆರಳಿದ ರಾಜಕುಮಾರಿ?

suriratna korea queen from ayodhya

ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಯ ಸಂದರ್ಭದ ಸಂಭ್ರಮದಲ್ಲಿ ತಾನೂ ಭಾಗಿಯಾಗಿದ್ದೇನೆ ಎಂದು ದಕ್ಷಿಣ ಕೊರಿಯಾ (South Korea) ಸರ್ಕಾರ ಶುಭ ಹಾರೈಸಿದೆ. ಈ ಸಂದರ್ಭದಲ್ಲಿ ಅಯೋಧ್ಯೆಗೂ ತನಗೂ ಇರುವ ವಿಶಿಷ್ಟ ಚಾರಿತ್ರಿಕ- ವೈವಾಹಿಕ ಸಂಬಂಧವೊಂದನ್ನು ಅದು ನೆನಪಿಸಿಕೊಂಡಿದೆ.

ದಕ್ಷಿಣ ಕೊರಿಯಾ ಮಂಗಳವಾರ ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ಉದ್ಘಾಟನೆ ಹಿನ್ನೆಲೆಯಲ್ಲಿ ಭಾರತವನ್ನು ಅಭಿನಂದಿಸಿದೆ. ಜೊತೆಗೆ ಅಯೋಧ್ಯೆ ಮೂಲಕ ಎರಡು ದೇಶಗಳ ನಡುವೆ ಆಳವಾಗಿ ಬೇರೂರಿರುವ ಪ್ರಾಚೀನ ಸಂಬಂಧವನ್ನು ಎತ್ತಿ ತೋರಿಸಿದೆ. ಈ ಕುರಿತ ಅಭಿನಂದನೆಯನ್ನು ಭಾರತದ ಕೊರಿಯನ್ ರಾಯಭಾರ ಕಚೇರಿ Xನಲ್ಲಿ ಪೋಸ್ಟ್‌ ಮಾಡಿದೆ.

“ಅಯೋಧ್ಯೆಯಲ್ಲಿನ ರಾಮ ದೇವಾಲಯದ ಪ್ರತಿಷ್ಠಾಪನಾ ಸಮಾರಂಭಕ್ಕೆ ಅಭಿನಂದನೆಗಳು. ಈ ತಾಣವು ಕೊರಿಯಾ- ಭಾರತ ಸಂಬಂಧಕ್ಕೆ ಹೆಚ್ಚಿನ ಸಾಂಕೇತಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಅಯೋಧ್ಯೆಯ ರಾಶಿ ಶ್ರೀರತ್ನ (ಹೆಯೋ ಹ್ವಾಂಗ್-ಓಕೆ) ಮತ್ತು ಗಯಾದ (ಕೊರಿಯಾ) ರಾಜ ಕಿಮ್ ಸುರೋ (48 ಎ.ಡಿ.) ನಡುವಿನ ವೈವಾಹಿಕ ಸಂಬಂಧದ ಮೂಲಕ ಇದು ಸ್ಥಾಪಿತವಾಗಿದೆ” ಎಂದು ಪೋಸ್ಟ್‌ನಲ್ಲಿ ಹೇಳಿದೆ.

“ನಮ್ಮ ಎರಡು ರಾಷ್ಟ್ರಗಳ ನಡುವಿನ ಕುಟುಂಬ ರೀತಿಯ ಮತ್ತು ಆಧ್ಯಾತ್ಮಿಕ ಬಂಧಗಳು ಇದರಿಂದ ಗಾಢವಾಗಲಿವೆ. ಇವು ಮರ್ಯಾದಾ ಪುರುಷೋತ್ತಮ ಎಂದು ಕರೆಯಲ್ಪಡುವ ಭಗವಾನ್ ರಾಮನ ಆದರ್ಶಗಳಿಂದ ಪ್ರೇರಿತವಾಗಿದೆ” ಎಂದು ಪೋಸ್ಟ್ ಭರವಸೆ ವ್ಯಕ್ತಪಡಿಸಿದೆ.

ಏನಿದು ಕೊರಿಯಾ ರಾಜ- ಅಯೋಧ್ಯೆ ರಾಣಿ ವಿವಾಹ ಸಂಬಂಧ?

ದಂತಕಥೆಗಳ ಪ್ರಕಾರ, ರಾಜಕುಮಾರಿ ಶ್ರೀರತ್ನ- ಸೂರಿರತ್ನ ಎಂದೂ ಕರೆಯಲ್ಪಡುವ ರಾಣಿ ಹಿಯೋ ಹ್ವಾಂಗ್-ಓಕ್, ಕ್ರಿ.ಶ. 48ರಲ್ಲಿ ಕೊರಿಯಾದ ಕರಕ್ ಕುಲದ ರಾಜ ಕಿಮ್ ಸುರೊನನ್ನು ಮದುವೆಯಾಗಿದ್ದಳು. ಅದಕ್ಕೂ ಮುನ್ನ ಆಕೆ ಅಯೋಧ್ಯೆಯ ರಾಜಕುಮಾರಿಯಾಗಿದ್ದಳು. ಈ ವೈವಾಹಿಕ ಕೊಂಡಿಯನ್ನು ಎರಡು ದೇಶಗಳ ನಡುವಿನ ಸೌಹಾರ್ದ ಸಂಬಂಧದ ಮೂಲಾಧಾರವಾಗಿ ಕಾಣಲಾಗುತ್ತದೆ.

ರಾಣಿ ಹಿಯೋ ಹ್ವಾಂಗ್-ಓಕ್ ಅವರ ಕಥೆಯನ್ನು ಪ್ರಾಚೀನ ಕೊರಿಯನ್ ಪಠ್ಯ ʻಸಂಗುಕ್ ಯುಸಾʼದಲ್ಲಿ ವಿವರಿಸಲಾಗಿದೆ. ಆಕೆಯನ್ನು “ದೂರದ ಸಾಮ್ರಾಜ್ಯವಾದ ʼಆಯುತಾʼದಿಂದ ರಾಜ ಸುರೋನ ಮದುವೆಯಾಗಿ ಬಂದ ರಾಜಕುಮಾರಿ” ಎಂದು ಆಕೆಯನ್ನು ವಿವರಿಸುತ್ತದೆ. ಆಯುತಾ- ಇಂದಿನ ಅಯೋಧ್ಯೆ ಎಂದು ನಂಬಲಾಗಿದೆ. 2001ರಲ್ಲಿ ಅಯೋಧ್ಯೆಯಲ್ಲಿ ಈ ರಾಣಿಗೆ ಒಂದು ಸ್ಮಾರಕ ನಿರ್ಮಿಸಲಾಗಿದೆ.

2015ರಲ್ಲಿ ಪಿಎಂ ನರೇಂದ್ರ ಮೋದಿ ಅವರ ದಕ್ಷಿಣ ಕೊರಿಯಾಗೆ ಭೇಟಿ ನೀಡಿದಾಗ, ಈ ರಾಣಿಯ ಪರಂಪರೆಯನ್ನು ಗೌರವಿಸಲು, ಈ ಸ್ಮಾರಕವನ್ನು ವಿಸ್ತರಿಸುವ ಒಪ್ಪಂದಕ್ಕೆ ಮೋದಿ ಹಾಗೂ ಆಗಿನ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಸಹಿ ಹಾಕಿದ್ದರು. ಸುಂದರ ಸ್ಮಾರಕ ಉದ್ಯಾನವನವನ್ನು 2022ರಲ್ಲಿ ಉದ್ಘಾಟಿಸಲಾಯಿತು.

ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಕರಕ್ ಕುಲದ ಸುಮಾರು 60 ಲಕ್ಷ ಜನರು ಅಯೋಧ್ಯೆಯನ್ನು ತಮ್ಮ ತಾಯಿಯ ತಾಯ್ನಾಡು ಎಂದು ಪರಿಗಣಿಸುತ್ತಾರೆ. 2018ರ ನವೆಂಬರ್‌ನಲ್ಲಿ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜಂಗ್-ಸೂಕ್ ಭಾರತ ಪ್ರವಾಸಕ್ಕೆ ಆಗಮಿಸಿದಾಗ ಈ ವಿಚಾರವನ್ನು ವ್ಯಾಪಕವಾಗಿ ಒತ್ತಿಹೇಳಲಾಯಿತು. ತಮ್ಮ ನಾಲ್ಕು ದಿನಗಳ ವಾಸ್ತವ್ಯದ ಸಮಯದಲ್ಲಿ ಅವರು ಅಯೋಧ್ಯೆಯ ಸರಯೂ ನದಿಯ ದಡದಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಕೊರಿಯಾದಲ್ಲಿ ರಾಣಿ ಹಿಯೋ ಹ್ವಾಂಗ್-ಓಕ್ ಎಂದು ಪ್ರೀತಿಯಿಂದ ನೆನಪಿಸಿಕೊಳ್ಳುವ ರಾಜಕುಮಾರಿ ಸೂರಿರತ್ನ ಅವರಿಗೆ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ: ಮಂದಿರ ಉದ್ಘಾಟನೆ ದಿನ ಹುಟ್ಟಿದ ಮಗನಿಗೆ ರಾಮ್‌ ರಹೀಮ್‌ ಎಂದು ಹೆಸರಿಟ್ಟ ಮುಸ್ಲಿಂ ಮಹಿಳೆ!

Exit mobile version