Site icon Vistara News

Ayodhya Ram Mandir: ರಾಮಮಂದಿರ ಪ್ರಾಣ ಪ್ರತಿಷ್ಠೆ, ಅಮೆರಿಕದ ದೇವಾಲಯಗಳಲ್ಲೂ ಸಂಭ್ರಮವೋ ಸಂಭ್ರಮ!

ram mandir US

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ (Pran Pratishta) ಹಿನ್ನೆಲೆಯಲ್ಲಿ ಸಂಭ್ರಮಿಸಲು ಅಮೆರಿಕದ ಹಿಂದೂ ದೇವಾಲಯಗಳಲ್ಲೂ ಭರ್ಜರಿ ಸಿದ್ಧತೆಗಳು ನಡೆದಿವೆ.

ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನಾನಾ ದೇವಾಲಯಗಳಲ್ಲಿ ನಡೆಯುವ ಸರಣಿ ಪೂಜಾದಿ ಕಾರ್ಯಕ್ರಮಗಳಲ್ಲಿ ಸಾವಿರಾರು ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ. “ಅಯೋಧ್ಯೆಯು ವಿನಾಶ ಮತ್ತು ನಿರ್ಲಕ್ಷ್ಯದಿಂದ ವೈಭವಪೂರ್ಣವಾಗಿ ಹೊರಹೊಮ್ಮಿದೆ. ಸನಾತನ ಧರ್ಮದ ಶಾಶ್ವತ ಸ್ವರೂಪವನ್ನು ಬಿಂಬಿಸುತ್ತದೆ. 550 ವರ್ಷಗಳ ನಂತರ ರಾಮ್ ಲಲ್ಲಾ ಮಂದಿರದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕವು ಇಡೀ ದೇಶಕ್ಕೆ ಮತ್ತು ಪ್ರಪಂಚದಾದ್ಯಂತದ ಸುಮಾರು ನೂರು ಕೋಟಿ ಹಿಂದೂಗಳಿಗೆ ಅಪಾರ ಸಂತೋಷವನ್ನು ತಂದಿದೆ” ಎಂದು ಅಮೆರಿಕದ ಹಿಂದೂ ವಿಶ್ವವಿದ್ಯಾಲಯದ ಅಧ್ಯಕ್ಷ ಕಲ್ಯಾಣ್ ವಿಶ್ವನಾಥನ್ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಟೆಕ್ಸಾಸ್‌ನ ಶ್ರೀ ಸೀತಾ ರಾಮ ಪ್ರತಿಷ್ಠಾನವನ್ನು ಪ್ರತಿನಿಧಿಸುವ ಕಪಿಲ್ ಶರ್ಮಾ, ಐದು ಶತಮಾನದ ನಂತರ ಅಯೋಧ್ಯೆಯಲ್ಲಿ ಭಗವಾನ್ ರಾಮನ ಮಂದಿರ ನಿರ್ಮಾಣವಾಗಿರುವುದು ಜಾಗತಿಕವಾಗಿ ಹಿಂದೂಗಳಿಗೆ ಮಹತ್ವದ್ದು ಎನ್ನುತ್ತಾರೆ. ಸುದೀರ್ಘ ಕಾಯುವಿಕೆಯಿಂದ ಹಿಂದೂ ನಂಬಿಕೆ ಮತ್ತು ಆಚರಣೆಯ ಮಹತ್ವದ ದಿನ ಅವತರಿಸಿದೆ ಎಂದಿದ್ದಾರೆ. ಶ್ರೀರಾಮ ಜನ್ಮಭೂಮಿ ಪ್ರಾಣ ಪ್ರತಿಷ್ಠಾ ಆಚರಣೆಯ ಕಾರ್ಯಕ್ರಮವನ್ನು ಹ್ಯೂಸ್ಟನ್‌ನಲ್ಲಿರುವ ಪ್ರತಿಷ್ಠಾನದ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಇಲ್ಲಿನ ಉತ್ಸವಗಳು ಸುಂದರಕಾಂಡ ಪಾರಾಯಣದೊಂದಿಗೆ ಪ್ರಾರಂಭವಾಗುತ್ತದೆ. ನೃತ್ಯ, ಗಾಯನ ಮತ್ತು ಸಂಗೀತವನ್ನು ಒಳಗೊಂಡ ಸಾಂಸ್ಕೃತಿಕ ಪ್ರದರ್ಶನಗಳಿವೆ. ತರುವಾಯ ರಾಮನ ಹವನ ಮತ್ತು ವಿಧ್ಯುಕ್ತವಾದ ಪಟ್ಟಾಭಿಷೇಕ ನಡೆಯಲಿದೆ. ಭಗವಾನ್ ರಾಮನ ಮೆರವಣಿಗೆ ಮತ್ತು ಪ್ರಸಾದ ವಿತರಣೆಯೊಂದಿಗೆ ಉತ್ಸವ ಮುಕ್ತಾಯಗೊಳ್ಳುತ್ತದೆ. “ಅಯೋಧ್ಯಾ ಮಂದಿರ ತಾಣದಿಂದ ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಿಸಲಾದ ಪ್ರಸಾದ ಮತ್ತು ರಾಜ್ (ಪವಿತ್ರ ಧೂಳು) ಅನ್ನು ವಿತರಿಸುತ್ತೇವೆ” ಎಂದು ಶರ್ಮಾ ಹೇಳಿದ್ದಾರೆ.

ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರ್ ಅವರು ಶನಿವಾರ ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿ ರಾಮಮಂದಿರ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೆಲವು ಪಾಕಿಸ್ತಾನಿ ಅಮೆರಿಕನ್ನರು ಗ್ರೇಟರ್ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ.

“ಶ್ರೀರಾಮನ ಕೋಟ್ಯಂತರ ಅನುಯಾಯಿಗಳ ಬಹುನಿರೀಕ್ಷಿತ ಕನಸು ನನಸಾಗಲಿದೆ” ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್ತಿನ ಅಮಿತಾಭ್‌ ಮಿತ್ತಲ್ ಹೇಳಿದ್ದಾರೆ. ಅಮೆರಿಕದಲ್ಲಿರುವ ಸುಮಾರು 1,000 ದೇವಾಲಯಗಳಲ್ಲಿ ರಾಷ್ಟ್ರವ್ಯಾಪಿ ಉತ್ಸವಗಳನ್ನು ವಿಹಿಂಪ ಸಂಘಟನೆ ಕೈಗೊಂಡಿದೆ. ಬಹುತೇಕ ಎಲ್ಲರೂ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು ಈ ವಾರಾಂತ್ಯದಲ್ಲಿ ಸೇರುತ್ತಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರದಲ್ಲಿ ಮಂಡಲ ಪೂಜೆಗೆ ರಾಯಚೂರಿನ ವೈದಿಕರ ತಂಡ ಆಯ್ಕೆ

ವಿಹಿಂಪದ ವಾಷಿಂಗ್ಟನ್ ಡಿಸಿ ಶಾಖೆಯು ರಾಷ್ಟ್ರೀಯ ರಾಜಧಾನಿಯ ಮೇರಿಲ್ಯಾಂಡ್ ಉಪನಗರದಲ್ಲಿರುವ ಪ್ರೌಢಶಾಲೆಯಲ್ಲಿ ಕಾರ್ ರ್ಯಾಲಿ, ಲವ್ ಧೋಲೆ ತಾಶೆ, ಶ್ರೀರಾಮ ಪೂಜೆಯೊಂದಿಗೆ ಬೆರಗುಗೊಳಿಸುವ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಿದೆ. ಕ್ಯಾಲಿಫೋರ್ನಿಯಾದದಲ್ಲಿ 20ಕ್ಕೂ ಹೆಚ್ಚು ಕಾರ್ ರ್ಯಾಲಿಗಳನ್ನು ಆಯೋಜಿಸಲಾಗಿದೆ. ಅಲ್ಲಿ 600ಕ್ಕೂ ಹೆಚ್ಚು ಕಾರುಗಳು ಭಾಗವಹಿಸುವ ನಿರೀಕ್ಷೆಯಿದೆ.

“ಈ ಸಂದರ್ಭಕ್ಕಾಗಿ ಶ್ರೀರಾಮನ ಭಕ್ತರು ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಕಾರ್ ರ್ಯಾಲಿಯನ್ನು ನಡೆಸುತ್ತಾರೆ. ರ್ಯಾಲಿಯು ಡಿಜಿಟಲ್ ಮೊಬೈಲ್ ಟ್ರಕ್‌ಗಳಲ್ಲಿ ಭಗವಾನ್ ರಾಮನ ಚಿತ್ರಗಳು ಮತ್ತು ಅವನ ಬಗ್ಗೆ ಸುಮಧುರ ಸ್ತೋತ್ರಗಳೊಂದಿಗೆ ಇರುತ್ತದೆ” ಎಂದು ದೀಪ್ತಿ ಮಹಾಜನ್ ಹೇಳಿದರು.

ಚಿಕಾಗೋ, ಹ್ಯೂಸ್ಟನ್ ಮತ್ತು ಲಾಸ್ ಏಂಜಲೀಸ್‌ನಂತಹ ನಗರಗಳ ಹೊರಾಂಗಣ ಸ್ಥಳಗಳಲ್ಲಿ ಪ್ರಮುಖ ಜಾಹೀರಾತು ಫಲಕಗಳನ್ನು ವಿಹಿಂಪ ಹಾಕಿದ್ದು, ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭವನ್ನು ಪ್ರದರ್ಶಿಸುತ್ತಿದೆ. ಇದರ ಜೊತೆಗೆ ಸೋನಿ ಟಿವಿಯು ಜನವರಿ 21ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ ಶ್ರೀಮದ್ ರಾಮಾಯಣವನ್ನು ಪ್ರದರ್ಶಿಸುತ್ತಿದೆ.

ಇದನ್ನೂ ಓದಿ: Ram Mandir: ಬಾಲರಾಮ ಆಯ್ತು, ಈಗ ಭವ್ಯ ಮಂದಿರದ ವಿಡಿಯೊ ವೈರಲ್;‌ ನೀವೂ ನೋಡಿ

Exit mobile version