Site icon Vistara News

Ayodhya Ram Mandir: ನಮ್ಮ ಮತ್ತು ಶಂಕರಾಚಾರ್ಯರ ನಡುವೆ ಭಿನ್ನಮತವಿಲ್ಲ ಎಂದ ವಿಹಿಂಪ

Ram Mandir

Ayodhya Ram Mandir: Dignitaries From 55 Nations To Attend Pran Pratishtha On Jan 22

ಹೊಸದಿಲ್ಲಿ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಸುಪ್ರೀಂ ಗುರುಗಳಾದ ಶಂಕರಾಚಾರ್ಯರು (Shankaracharya) ಭಾಗವಹಿಸುವುದಿಲ್ಲ ಎಂಬ ಹೇಳಿಕೆಗಳ ನಡುವೆ, ತಮ್ಮ ಹಾಗೂ ಶಂಕರಾಚಾರ್ಯರ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ (Vishwa Hindu Parishath) ಸ್ಪಷ್ಟನೆ ನೀಡಿದೆ.

ರಾಮ ಮಂದಿರ ಟ್ರಸ್ಟ್ ಮತ್ತು ಹಿಂದೂ ಧರ್ಮದರ್ಶಿಗಳ ನಡುವೆ, ವಿಶೇಷವಾಗಿ ನಾಲ್ವರು ಶಂಕರಾಚಾರ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿರುವ ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌, ದೇಗುಲದ ಶಂಕುಸ್ಥಾಪನೆಯನ್ನು ಸ್ವಾಗತಿಸಿರುವ ಶೃಂಗೇರಿ ಮತ್ತು ದ್ವಾರಕಾ ಮಠದ ಶಂಕರಾಚಾರ್ಯರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಅಯೋಧ್ಯೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಇತರ ಇಬ್ಬರು ಶಂಕರಾಚಾರ್ಯರು ಜನವರಿ 22ರ ಕಾರ್ಯಕ್ರಮದ ಆಹ್ವಾನವನ್ನು ನಿರಾಕರಿಸಿದ್ದಾರೆ. ಪುರಿ ಗೋವರ್ಧನ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ, ಏಕೆಂದರೆ ಅದು ಶಾಸ್ತ್ರಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಉತ್ತರಾಖಂಡದ ಜ್ಯೋತಿರ್ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಕೂಡ ಹಾಜರಾಗಲು ನಿರಾಕರಿಸಿದ್ದಾರೆ. ದೇವಾಲಯದ ಕೆಲಸಗಳು ಅಪೂರ್ಣವಾಗಿದ್ದರೂ ಸಹ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ.

ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದವರನ್ನು ವಿಎಚ್‌ಪಿ ಸ್ವಾಗತಿಸುತ್ತದೆ. ಇದನ್ನು ಭಾರತ ಮತ್ತು ವಿದೇಶಗಳಾದ್ಯಂತ ನೇರಪ್ರಸಾರ ಮಾಡಲಾಗುವುದು. ಅದರ ಭಾಗವಾಗಲು ನಿರಾಕರಿಸಿದವರ ನಿರ್ಧಾರವನ್ನು ಸಂಸ್ಥೆ ಗೌರವಿಸುತ್ತದೆ ಎಂದು ಕುಮಾರ್ ಹೇಳಿದರು. “ಇದು ಯುದ್ಧವಲ್ಲ, ಇಲ್ಲಿ ಸೋಲು ಅಥವಾ ಗೆಲುವು ಇಲ್ಲ. ಇದು 24 ತಲೆಮಾರುಗಳ ಹೋರಾಟವಾಗಿದೆ. ದೇವಸ್ಥಾನ ಸಿದ್ಧವಾಗಿರುವುದು ನಮ್ಮ ಪೀಳಿಗೆಯ ಸೌಭಾಗ್ಯ. ಇದನ್ನು ವ್ಯಕ್ತಪಡಿಸಲು ಪದಗಳಿಲ್ಲ. ಇದು ಭಾರತದ ಸ್ವಾಭಿಮಾನದ ಮರುಸ್ಥಾಪನೆ. ಇದು ನಮ್ಮನ್ನು ವಸಾಹತುಶಾಹಿ ಮನಸ್ಥಿತಿಯಿಂದ ಹೊರತರುತ್ತದೆ ಎಂದು ವಿಎಚ್‌ಪಿ ನಾಯಕ ಹೇಳಿದರು.

“ನಾವು ಆಡ್ವಾಣಿ ಅವರನ್ನು ಆಹ್ವಾನಿಸಲು ಹೋದಾಗ, ಅವರು ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಅವರ ವೃದ್ಧಾಪ್ಯ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣದ ಬಗ್ಗೆ ಅವರ ಕುಟುಂಬವು ಕಳವಳ ಹೊಂದಿತ್ತು. ಎಲ್ಲಾ ಸಾರಿಗೆ ಸೌಲಭ್ಯವನ್ನು ನೋಡಿಕೊಳ್ಳಲಾಗುವುದು ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ” ಎಂದು ಕುಮಾರ್ ಹೇಳಿದರು.

ಮಂದಿರವನ್ನು ಆರೆಸ್ಸೆಸ್ ಮತ್ತು ಬಿಜೆಪಿಯು ರಾಜಕೀಯಗೊಳಿಸಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ. ಧರ್ಮವು ವೈಯಕ್ತಿಕ ವಿಷಯವಾಗಿದೆ. ಆರೆಸ್ಸೆಸ್/ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ಮಂದಿರದ ಸ್ಥಾಪನೆಯ ಯೋಜನೆಯಲ್ಲಿ ತೊಡಗಿಕೊಂಡಿದೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದಕ್ಕೆ ಪ್ರತಿಕ್ರಿಯಿಸಿದ ವಿಎಚ್‌ಪಿ ಮುಖ್ಯಸ್ಥರು, “ಇದು ಪಕ್ಷದೊಳಗೆ ಭಿನ್ನಾಭಿಪ್ರಾಯ ಇದೆ ಎಂದು ತೋರುತ್ತದೆ. ಈ ಹಿಂದೆ ಸೋನಿಯಾ ಗಾಂಧಿಯವರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬ ವರದಿಗಳು ಬಂದಿದ್ದವು. ಆದರೆ ಅಲ್ಪಸಂಖ್ಯಾತ ಸಮುದಾಯದ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ನಿರ್ಧಾರವನ್ನು ಬದಲಾಯಿಸಿರಬಹುದು ಎಂದು ತೋರುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಎಂದ ಕೈ ನಾಯಕರನ್ನು ಟಾರ್ಗೆಟ್ ಮಾಡಿದ ಬಿಜೆಪಿ ಐಟಿ ಸೆಲ್!

Exit mobile version