Site icon Vistara News

Azaadi Sat| ಮೂರು ಹಂತ ಯಶಸ್ವಿ, ಕೊನೆಯ ಸ್ಟೇಜ್‌ನಲ್ಲಿ ಡೇಟಾ ಲಾಸ್‌ ಅನುಭವಿಸಿದ SSLV

isro somanth

ಬೆಂಗಳೂರು: ಭಾರಿ ನಿರೀಕ್ಷೆಗಳೊಂದಿಗೆ ಯಶಸ್ವಿಯಾಗಿ ಉಡಾವಣೆಗೊಂಡಿದ್ದ ಇಸ್ರೊದ ಅತಿ ಸಣ್ಣ ಉಡಾವಣಾ ವಾಹಕ ಎಸ್‌ಎಸ್‌ಎಲ್‌ವಿ ಮೂರು ಹಂತಗಳನ್ನು ಯಶಸ್ವಿಯಾಗಿ ದಾಟಿದೆ. ಆದರೆ, ನಾಲ್ಕನೇ ಹಂತದಲ್ಲಿ ಸಣ್ಣ ಡೇಟಾ ಲಾಸ್‌ ಸಂಭವಿಸಿದೆ ಎಂದು ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ತಿಳಿಸಿದ್ದಾರೆ. ಆದರೆ, ಇದರ ಒಟ್ಟಾರೆ ಪರಿಣಾಮವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅದನ್ನು ಕೆಲವೇ ಹೊತ್ತಿನಲ್ಲಿ ತಿಳಿಸುವುದಾಗಿ ಇಸ್ರೊ ಹೇಳಿದೆ.

ದೇಶದ ೭೫ ಗ್ರಾಮೀಣ ಸರಕಾರಿ ಶಾಲೆಗಳ ೭೫೦ ಹೆಣ್ಣು ಮಕ್ಕಳು ಸೇರಿ ತಯಾರಿಸಿದ ೭೫೦ ಮಿನಿ ಮಿನಿ ಪೇಲೋಡ್‌ಗಳನ್ನು ಹೊತ್ತಿದ್ದ ಎಸ್‌ಎಸ್‌ಎಲ್‌ವಿ ಬೆಳಗ್ಗೆ ೯.೧೮ಕ್ಕೆ ಶ್ರೀಹರಿ ಕೋಟಾದಿಂದ ಉಡಾವಣೆಗೊಂಡಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಡೆದ ಈ ಉಡಾವಣೆ ಎರಡು ಕಾರಣಕ್ಕೆ ಗಮನ ಸೆಳೆದಿತ್ತು. ಇದು ಇಸ್ರೋ ಸಣ್ಣ ಉಪಗ್ರಹಗಳ ಉಡಾವಣೆಗೆಂದು ಸಿದ್ಧಪಡಿಸಿದ ಎಸ್‌ಎಸ್‌ಎಲ್‌ವಿ ವಾಹಕದ ಮೂಲಕ ನಡೆದ ಮೊದಲ ಉಡಾವಣೆಯಾಗಿತ್ತು. ಇನ್ನೊಂದು ೭೫೦ ವಿದ್ಯಾರ್ಥಿನಿಯರ ಕನಸನ್ನು ಹೊತ್ತು ಸಾಗುವ ನಿರ್ಣಾಯಕ ಕ್ಷಣ. ಉಡಾವಣೆ ಯಶಸ್ವಿಯಾದ ಸಂಭ್ರಮವನ್ನು ಇಡೀ ದೇಶ ಆಚರಿಸುತ್ತಿದ್ದಂತೆಯೇ ಇಸ್ರೋ ಅಧ್ಯಕ್ಷರು ಕೊನೆಯ ಕ್ಷಣದಲ್ಲಿ ಆದ ಸಣ್ಣ ಸಮಸ್ಯೆಯ ವಿವರವನ್ನು ನೀಡಿದ್ದಾರೆ.

ಎಸ್‌ಎಸ್‌ಎಲ್‌ವಿಯ ಮೂರು ಹಂತಗಳು ಯಶಸ್ವಿಯಾಗಿ ಬೇರ್ಪಟ್ಟಿವೆ. ನಾಲ್ಕನೇ ಹಂತದಲ್ಲಿ ಸಣ್ಣ ಸಮಸ್ಯೆ ಉಂಟಾಗಿದೆ. ಮಾಹಿತಿಯ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಪೇಲೋಡ್‌ಗಳನ್ನು ಕೊನೆಯ ಹಂತದಲ್ಲೇ ಇಡಲಾಗಿರುತ್ತದೆ. ಹೀಗಾಗಿ ಇವುಗಳ ಸ್ಥಿತಿ ಏನಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಹಿಂದಿನ ಸುದ್ದಿ |Azaadi sat| ಗಗನಕೆ ಚಿಮ್ಮಿತು ಪುಟ್ಟ SSLV, 750 ಹೆಣ್ಮಕ್ಕಳ ವೈಜ್ಞಾನಿಕ ಸಾಧನೆಯ ಕನಸನು ಹೊತ್ತು!

Exit mobile version