ಲಖನೌ: ಅಭಿಮಾನಿಗಳ ಮುತ್ತಿಗೆ ಮತ್ತು ಅಷ್ಟೇ ತೀಕ್ಷ್ಣವಾದ ರಾಜಕೀಯ ಪ್ರಶ್ನೆಗಳ ನಡುವೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಕೊನೆಗೂ 27 ತಿಂಗಳ ಜೈಲುವಾಸದಿಂದ ಹೊರ ಬಂದಿದ್ದಾರೆ. ರಾಮ್ ಪುರ (ಸದರ್) ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕರಾಗಿರುವ ಅಜಂ ಖಾನ್ ವಿರುದ್ಧ ದಾಖಲಾಗಿರುವ 89ನೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.
ಖಾನ್ ಜೈಲಿನಿಂದ ಹೊರ ಬಂದಿರುವುದನ್ನು ಅವರ ಕುಟುಂಬ ಖುಷಿಯಿಂದ ಸ್ವಾಗತಿಸಿದ್ದರೆ, ಪ್ರಗತಿಶೀಲ ಸಮಾಜವಾದಿ ಲೋಹಿಯಾ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತ್ರ ಸ್ವಾಗತಿಸಲು ಬಂದಿಲ್ಲ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಈ ಶಿವಪಾಲ್ ಯಾದವ್ ಸೋದರ ಮಾವ. ಆದರೆ ರಾಜಕೀಯದಲ್ಲಿ ಇವರ ಸಂಬಂಧ ಚೆನ್ನಾಗಿಲ್ಲದ ಕಾರಣ, ಶತ್ರುವಿನ ಶತ್ರು ಮಿತ್ರ ಎಂಬಂತೆ, ಖಾನ್ ಮತ್ತು ಶಿವಪಾಲ್ ಯಾದವ್ ಮಿತ್ರರಾಗಿದ್ದಾರೆ.
ಇದನ್ನೂ ಓದಿ| ಉತ್ತರ ಪ್ರದೇಶದಲ್ಲಿ ಈ ಬಾರಿ ರಸ್ತೆಯಲ್ಲಿ ನಮಾಜ್ ನಡೆದಿಲ್ಲ: ಇತಿಹಾಸದಲ್ಲೆ ಮೊದಲು
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್, ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎಸ್.ಗೋಪಣ್ಣ ಅವರ ಪೀಠವು ಈ ಹಿಂದೆ ಅಜಂ ಖಾನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅಜಂ ಖಾನ್ ಇರುವ ಸೀತಾಪುರ ಜೈಲಿಗೆ ಗುರುವಾರ ಸಂಜೆ ಈ ಆದೇಶ ತಲುಪಿತ್ತು.
ಸೀತಾಪುರ ಜೈಲಿನಿಂದ ಬಿಡುಗಡೆಯಾದ ಅಜಂ ಖಾನ್ ನೇರವಾಗಿ ರಾಂಪುರಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಪಾಲ್ ಮತ್ತು ಖಾನ್ ಅವರ ಪುತ್ರ ಅಬ್ದುಲ್ಲಾ ಅಜಮ್ ಬಿಡುಗಡೆಯ ಬಳಿಕ ತಮ್ಮ ನಾಯಕನನ್ನು ಬರಮಾಡಿಕೊಳ್ಳಲು ಸೀತಾಪುರ ಜೈಲು ತಲುಪಿದ್ದಾರೆ. ಆದಾಗ್ಯೂ, ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅಥವಾ ಇತರ ಯಾವುದೇ ಪ್ರಮುಖ ಎಸ್‌ಪಿ ನಾಯಕರು ಗೈರುಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಮಾಜವಾದಿ ಪಕ್ಷದ ಕೆಲ ಸ್ಥಳೀಯ ಮುಖಂಡರು ಅವರನ್ನು ಸ್ವಾಗತಿಸಲು ಜೈಲಿಗೆ ಆಗಮಿಸಿದ್ದರು.
ಖಾನ್ ಬಿಡುಗಡೆಯ ನಂತರ, ಅಖಿಲೇಶ್ ಯಾದವ್ ಅವರು ಟ್ವೀಟ್‌ನಲ್ಲಿ ‘ಸುಳ್ಳಿಗೆ ಕ್ಷಣಗಳಿವೆ, ಶತಮಾನಗಳಲ್ಲ’ ಎಂದು ಹೇಳಿದ್ದಾರೆ. ಪಕ್ಷದ ನಾಯಕ ಜೈಲಿನಿಂದ ಬಿಡುಗಡೆಗೊಂಡಿರುವುದನ್ನು ಶ್ಲಾಘಿಸಿದ ಅವರು, ಜಾಮೀನು ನೀಡುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಕ್ಕೆ ಹೊಸ ಮಾನದಂಡಗಳನ್ನು ನೀಡಿದೆ ಎಂದು ಹೇಳಿದರು. ಅಖಿಲೇಶ್ ನಾಳೆ ರಾಂಪುರಕ್ಕೆ ಭೇಟಿ ನೀಡಿ ಅಜಂ ಖಾನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ನಾಯಕತ್ವದ ಬಗ್ಗೆ ಅಜಂ ಖಾನ್‌ಗೆ ತೀವ್ರ ಅತೃಪ್ತಿಯಿದೆ ಎಂಬ ಊಹಾಪೋಹಗಳಿರುವುದರಿಂದ ಈಗ ಎಲ್ಲರ ಕಣ್ಣುಗಳು ಅಜಂ ಖಾನ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮೀಕರಣದ ಮೇಲೆ ಕೇಂದ್ರೀಕೃತವಾಗಿವೆ. ಎಸ್‌ಪಿ ನಾಯಕತ್ವವು ಅಜಂ ಖಾನ್ ಅವರನ್ನು ಜೈಲಿನಲ್ಲಿ ಕೊಳೆಯಲು ಬಿಟ್ಟಿದೆ ಎಂಬ ಆರೋಪವೂ ಖಾನ್ ಅವರ ನಿಕಟವರ್ತಿಗಳಿಂದ ಇತ್ತು.
ಜೈಲಿನಲ್ಲಿರುವ ಎಸ್ಪಿ ಶಾಸಕರ ಬಿಡುಗಡೆಗೆ ಸಮಾಜವಾದಿ ಪಕ್ಷವು ಹೆಚ್ಚಿನ ಶ್ರಮ ಹಾಕುತ್ತಿಲ್ಲ ಎಂದು ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಹೇಳಿಕೆ ನೀಡಿದ್ದರು.
ಅಷ್ಟಕ್ಕೂ ಅಜಂ ಖಾನ್ ಜೈಲಿಗೆ ಹೋಗಿದ್ದೇಕೆ?
ಅಜಂ ಖಾನ್ ವಿರುದ್ಧ ಹಲವು ಕೇಸುಗಳಿದ್ದರೂ, 2017ರ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಜನ್ಮ ದಿನಾಂಕದ ಪ್ರಮಾಣಪತ್ರ ಸಲ್ಲಿಸಿದ್ದರು ಎಂಬ ಕಾರಣಕ್ಕೆ ಮೊದಲ ಬಾರಿಗೆ ಜೈಲುಪಾಲಾಗಿದ್ದರು.
iಇದನ್ನೂ ಓದಿ | ಹಿಂದಿ ಬಾರದವರು ದೇಶದಿಂದ ಹೊರ ಹೋಗಿ ಎಂದ ಉತ್ತರ ಪ್ರದೇಶ ಸಚಿವ