ನವದೆಹಲಿ: ಒಂದೊಮ್ಮೆ ವಿಪ್ರೋ ಕಂಪನಿಯು (Wipro Company) ಎನ್ ಆರ್ ನಾರಾಯಣಮೂರ್ತಿಯನ್ನು (NR Narayana Murthy) ನೇಮಕ ಮಾಡಿಕೊಂಡಿದ್ದರೆ ಇಂದು ಇನ್ಫೋಸಿಸ್ ಕಂಪನಿಯೇ (Infosys company) ಇರುತ್ತಿರಲಿಲ್ಲ. ಹೌದು, ಇದು ನಿಜ. ಈ ವಿಷಯವನ್ನು ಸ್ವತ ನಾರಾಯಣ ಮೂರ್ತಿ ಅವರೇ ಹೇಳಿಕೊಂಡಿದ್ದಾರೆ. ನನ್ನನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೇ ವಿಪ್ರೋ ಅಜೀಮ್ ಪ್ರೇಮ್‌ಜೀ (Azim Premji) ದೊಡ್ಡ ತಪ್ಪು ಮಾಡಿದರು. ಒಂದೊಮ್ಮೆ ಅವರು ನೇಮಕ ಮಾಡಿಕೊಂಡಿದ್ದರೆ, ಪರಿಸ್ಥಿತಿಗಳು ಭಿನ್ನವಾಗಿರುತ್ತಿದ್ದವು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಹೇಳಿದ್ದಾರೆ.
ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಎನ್ ಆರ್ ನಾರಾಯಣ ಮೂರ್ತಿ ಅನೇಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನನ್ನನ್ನು ನೇಮಿಸಿಕೊಳ್ಳದಿರುವುದು ಅವರು ಮಾಡಿದ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ ಎಂದು ಅಜೀಮ್ ಒಮ್ಮೆ ಹೇಳಿದ್ದರು ಎಂದು 77 ವರ್ಷ ವಯಸ್ಸಿನ ಮೂರ್ತಿ ನೆನಪಿಸಿಕೊಂಡಿದ್ದಾರೆ. ವಿಪ್ರೋದಿಂದ ನೇಮಕಗೊಂಡಿದ್ದರೆ, ತನಗೆ ಮತ್ತು ಪ್ರೇಮ್‌ಜಿಯವರಿಗೆ ಭಿನ್ನವಾದ ಸ್ಥಿತಿಗಳು ಎದುರಾಗುತ್ತಿದ್ದವು ಎಂದು ಅವರು ಹೇಳಿದ್ದಾರೆ.
ತಮ್ಮ ಆರು ಜನರ ಸ್ನೇಹಿತರೊಂದಿಗೆ, ತಮ್ಮ ಪತ್ನಿ ನೀಡಿದ 10 ಸಾವಿರ ರೂ.ನೊಂದಿಗೆ ಎನ್ ಆರ್ ನಾರಾಯಣಮೂರ್ತಿ ಅವರು 1981ರಲ್ಲಿ ಇನ್ಫೋಸಿಸ್ ಕಂಪನಿಯನ್ನು ಶುರು ಮಾಡಿದರು. ಮೂರ್ತಿ ಅವರು ಶೂನ್ಯದಿಂದ ಮೇಲೆದ್ದು ಬಂದರೆ, ಅಜೀಮ್ ಪ್ರೇಮ್‌ಜಿ ಅವರು ತಮ್ಮ ಪೂರ್ವಿಕರಿಂದ ಬಂದಿದ್ದ ಅಡುಗೆ ಎಣ್ಣೆ ಉದ್ಯಮವನ್ನು ಮಾಹಿತಿ ತಂತ್ರಜ್ಞಾನ ವಲಯಕ್ಕೂ ವಿಸ್ತರಿಸಿ ಯಶಸ್ವಿಯಾದರು. 2014 ಜನವರಿಗೆ ಅನ್ವಯವಾಗುವಂತೆ ಇನ್ಫೋಸಿಸ್ ಕಂಪನಿಯ ಮೌಲ್ಯ 6.65 ಲಕ್ಷ ಕೋಟಿ ಇದ್ದರೆ, ಅಜೀಮ್ ಪ್ರೇಮ್‌ಜಿ ಅವರ ವಿಪ್ರೋ ಕಂಪನಿ ಮೌಲ್ಯ 2.43 ಲಕ್ಷ ಕೋಟಿ ರೂಪಾಯಿ ಇದೆ.
ಇನ್ಫೋಸಿಸ್ ಸ್ಥಾಪಕರ ಮಕ್ಕಳಿಗೆ ಪ್ರಮುಖ ಹುದ್ದೆಗಳನ್ನು ನಿರಾಕರಿಸಿ ತಪ್ಪು ಮಾಡಿದೆ
ಇನ್ಫೋಸಿಸ್‌ನಲ್ಲಿ ಕಂಪನಿಯ ಸ್ಥಾಪಕರ ಮಕ್ಕಳಿಗೆ ಆಯಕಟ್ಟಿನ ಪ್ರಮುಖ ಹುದ್ದೆಗಳನ್ನು ನಿರಾಕರಿಸಿ ನಾನು ತಪ್ಪು ಮಾಡಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಬಹಿರಂಗವಾಗಿಯೇ 2022ರಲ್ಲಿ ಹೇಳಿಕೆ ನೀಡಿ, ಚರ್ಚೆಗೆ ಕಾರಣವಾಗಿದ್ದರು. ಇನ್ಫೋಸಿಸ್‌ನಲ್ಲಿ ಕಂಪನಿಯ ಸ್ಥಾಪಕರ ಮಕ್ಕಳೇ ಪ್ರಮುಖ ಹುದ್ದೆಗಳಲ್ಲಿ ಇರಕೂಡದು ಎಂಬುದು ನನ್ನ ಹಳೆಯ ನಂಬಿಕೆ ಆಗಿತ್ತು. ಇದರಿಂದಾಗಿ ಸ್ಥಾಪಕರ ಮಕ್ಕಳು ಕಂಪನಿಯ ನಿರ್ಣಾಯಕ ಹುದ್ದೆಗಳಿಂದ ದೂರ ಉಳಿಯುವಂತಾಯಿತು. ಈಗ ಅದು ನನ್ನ ತಪ್ಪು ನಿರ್ಧಾರವಾಗಿತ್ತು ಎಂಬುದು ಮನವರಿಕೆಯಾಗಿದೆ ಎಂದು ಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್‌ಗೆ ನಾರಾಯಣ ಮೂರ್ತಿ ಸ್ಥಾಪಕರಾಗಿದ್ದರೆ, ಇತರ ಆರು ಮಂದಿ ಸಹ ಸಂಸ್ಥಾಪಕರಿದ್ದಾರೆ.
ಇನ್ಫೋಸಿಸ್ ಅತ್ಯಂತ ವೃತ್ತಿಪರವಾಗಿ ಬೆಳೆಯಬೇಕು ಎಂಬುದು ನನ್ನ ನಂಬಿಕೆಯಾಗಿತ್ತು. ಹೀಗಾಗಿ ಕಂಪನಿಯ ಸ್ಥಾಪಕರ ಮಕ್ಕಳು ಪ್ರಮುಖ ಹುದ್ದೆಗಳಲ್ಲಿ ಇರಕೂಡದು ಎಂದು ಭಾವಿಸಿದ್ದೆ. ಯಾರಾದರೂ ಅನರ್ಹ ವ್ಯಕ್ತಿಯನ್ನು ಪ್ರಮುಖ ಹುದ್ದೆಗೆ ನೇಮಿಸಬಹುದು ಎಂಬ ಕಳವಳ ಆಗ ನನ್ನಲ್ಲಿತ್ತು. ಆದರೆ ಅದು ತಪ್ಪು ಭಾವನೆ. ಯಾರೇ ಆಗಲಿ, ಪ್ರತಿಭಾವಂತರಿಗೆ ಅವಕಾಶ ನೀಡಬೇಕು. ಒಳ್ಳೆಯ ವ್ಯಕ್ತಿಗೆ ಒಳ್ಳೆಯ ಹುದ್ದೆ ಪಡೆಯುವ ಅವಕಾಶವನ್ನು ನಿರಾಕರಿಸಬಾರದು. ಪ್ರತಿಭಾವಂತ ಅಭ್ಯರ್ಥಿಯಾಗಿದ್ದರೆ, ಹುದ್ದೆ ನೀಡುವಾಗ ಆತನ ರಾಷ್ಟ್ರೀಯತೆ, ಕುಟುಂಬ ಮುಖ್ಯವಾಗುವುದಿಲ್ಲ ಎಂದು ನಾರಾಯಣ ಮೂರ್ತಿ ವಿವರಿಸಿದ್ದರು.
ಈ ಸುದ್ದಿಯನ್ನೂ ಓದಿ: Narayana Murthy: ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ!