Site icon Vistara News

Earthquake: ಮಹಾರಾಷ್ಟ್ರದಲ್ಲಿ ಹತ್ತೇ ನಿಮಿಷದಲ್ಲಿ 2 ಬಾರಿ ಕಂಪಿಸಿದ ಭೂಮಿ; ಬೆಚ್ಚಿಬಿದ್ದ ಜನ

Earthquake

Back-to-back earthquakes strike Maharashtra's Hingoli district within 10 minutes

ಮುಂಬೈ: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ (Hingoli District) ಬೆಳಗ್ಗೆ ಬೆಳಗ್ಗೆಯೇ ಭೂಕಂಪ (Earthquake) ಸಂಭವಿಸಿವೆ. ಅದರಲ್ಲೂ, ಕೇವಲ 10 ನಿಮಿಷದಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು, ಜನ ಈಗಲೂ ಆತಂಕದಲ್ಲಿದ್ದಾರೆ. ಬೆಳಗಿನ ಜಾವದ ನಿದ್ದೆಯಲ್ಲಿದ್ದ ಜನರಿಗೆ ಭೂಕಂಪನಗಳ ಅನುಭವವಾಗುತ್ತಲೇ ಮನೆಯಿಂದ ಹೊರಗೆ ಬಂದರು. ಸುಮಾರು ಒಂದು ಗಂಟೆಯವರೆಗೆ ಮನೆಗಳ ಹೊರಗಡೆಯೇ ಜಮಾಯಿಸಿದ್ದರು ಎಂದು ತಿಳಿದುಬಂದಿದೆ.

ಬೆಳಗ್ಗೆ 6.08ಕ್ಕೆ ಮೊದಲ ಬಾರಿ ಕಂಪನ

“ಬೆಳಗ್ಗೆ 6.08ಕ್ಕೆ ಮೊದಲ ಬಾರಿ ಭೂಕಂಪ ಸಂಭವಿಸಿತು. ರಿಕ್ಟರ್‌ ಮಾಪನದಲ್ಲಿ 4.5 ತೀವ್ರತೆ ದಾಖಲಾಯಿತು. ಇದಾದ ಹತ್ತೇ ನಿಮಿಷದಲ್ಲಿ ಅಂದರೆ 6.19ಕ್ಕೆ ಮತ್ತೆ ಭೂಮಿ ಕಂಪಿಸಿತು. ಎರಡನೇ ಬಾರಿ ರಿಕ್ಟರ್‌ ಮಾಪನದಲ್ಲಿ 3.6 ತೀವ್ರತೆ ದಾಖಲಾಯಿತು” ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.

ಲಘು ಭೂಕಂಪ ಸಂಭವಿಸಿದ್ದರೂ ಮನೆಯಲ್ಲಿದ್ದ ಫ್ಯಾನ್‌ ಸೇರಿ ಹಲವು ವಸ್ತುಗಳು ಅಲುಗಾಡಿದ ಕಾರಣ ಜನರಲ್ಲಿ ಹೆಚ್ಚಿನ ಆತಂಕ ಮೂಡಿತ್ತು. ಆದಾಗ್ಯೂ, ಭೂಕಂಪದಿಂದ ಯಾವುದೇ ಕಟ್ಟಡಗಳಿಗೆ, ಮನುಷ್ಯರಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಮನೆಯಿಂದ ಹೊರಗೆ ಬಂದ ಜನ ಕೆಲ ಹೊತ್ತು ಹೊರಗಡೆಯೇ ಕಾಲ ಕಳೆದು, ನಂತರ ಆತಂಕದಲ್ಲಿಯೇ ಮನೆಯೊಳಗೆ ಹೋದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Ram Mandir: 2,500 ವರ್ಷಗಳಿಗೊಮ್ಮೆ ಸಂಭವಿಸುವ ಭೀಕರ ಭೂಕಂಪಕ್ಕೂ ರಾಮ ಮಂದಿರ ಜಗ್ಗಲ್ಲ!

ಚೀನಾದಲ್ಲಿ ಕೆಲ ದಿನಗಳ ಹಿಂದಷ್ಟೇ ಸಂಭವಿಸಿದ್ದ ಭೂಕಂಪದಲ್ಲಿ 100ಕ್ಕೂ ಅಧಿಕ ಜನ ಮೃತಪಟ್ಟು, ಸಾವಿರಾರು ನಾಗರಿಕರು ಗಾಯಗೊಂಡಿದ್ದರು. ಜಪಾನ್‌ನಲ್ಲೂ ಹೊಸ ವರ್ಷದ ದಿನವೇ ಭೂಕಂಪ ಸಂಭವಿಸಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಚೀನಾದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿತ್ತು. ಅಫಘಾನಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌ ಸೇರಿ ಹಲವೆಡೆ ಭೂಕಂಪ ಸಂಭವಿಸಿದರೆ, ದೆಹಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪದ ಅನುಭವವಾಗುವುದು ಸಾಮಾನ್ಯವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version