ಮುಂಬೈ: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬೈಜುಸ್ (BYJU’s) ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಸ್ಥಾನದಿಂದ ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರನ್ನು ಕಿತ್ತು ಹಾಕಲಾಗಿದೆ. ಈ ಕುರಿತಾದ ನಿರ್ಣಯವನ್ನು ಆಡಳಿತ ಮಂಡಳಿಯು (extraordinary general meeting) ಅಂಗೀಕರಿಸಿದೆ. ಇದರೊಂದಿಗೆ ಬೈಜುಸ್ ಕಂಪನಿಯ ನಾಯಕತ್ವದ ಬದಲಾಗಲಿದೆ. ಶುಕ್ರವಾರ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಒಪ್ಪಿಗೆಯನ್ನು ನೀಡಲಾಗಿದೆ.
ಬೈಜು ಸಂಸ್ಥಾಪಕ ಬೈಜು ರವೀಂದ್ರನ್ ಅವರು ಮತ್ತು ಅವರ ಕುಟುಂಬವು ತುರ್ತು ಸಾಮಾನ್ಯ ಸಭೆಯಲ್ಲಿ (ಇಜಿಎಂ) ಭಾಗವಹಿಸುವುದಿಲ್ಲ ಎಂದು ಷೇರುದಾರರಿಗೆ ಈ ಮೊದಲೇ ತಿಳಿಸಿದ್ದರು. ಸಿಇಒ ಸ್ಥಾನದಿಂದ ರವೀಂದ್ರನ್ ಅವರನ್ನು ಕೆಳಗಿಳಿಸುವ ಉದ್ದೇಶದಿಂದಲೇ ತುರ್ತು ಸಾಮಾನ್ಯ ಸಭೆಯ್ನು ಫೆ.23, ಶುಕ್ರವಾರ ಆಯೋಜಿಲಾಗಿತ್ತು.
ತುರ್ತು ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಷೇರುದಾರರಿಗೆ ಪತ್ರ ಬರೆದಿದ್ದ ರವೀಂದ್ರನ್ ಅವರು, ನಾನು ಅಥವಾ ಯಾವುದೇ ಇತರ ಮಂಡಳಿಯ ಸದಸ್ಯರು ಈ ಅಮಾನ್ಯ ತುರ್ತು ಸಾಮಾನ್ಯ ಸಭೆಗೆ ಹಾಜರಾಗುವುದಿಲ್ಲ ಎಂದು ನಾನು ನಿಮಗೆ ದೃಢ ಸಂಕಲ್ಪದೊಂದಿಗೆ ತಿಳಿಸುತ್ತೇನೆ. ಎಒಎ ಮತ್ತು ಎಸ್‌ಎಚ್ಎ ಅಡಿಯಲ್ಲಿ ತುರ್ತು ಸಭೆ ಕೋರಮ್‌ಗಾಗಿ ಕನಿಷ್ಠ ಒಬ್ಬ ಸಂಸ್ಥಾಪಕರ ಹಾಜರಾತಿ ಅಗತ್ಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದರರ್ಥ, ತುರ್ತು ಸಾಮಾನ್ಯ ಸಭೆ ಕರೆದರೂ ಅಗತ್ಯವಿರುವ ಕೋರಂ ಅನ್ನು ಹೊಂದಿರುವುದಿಲ್ಲ ಮತ್ತು ಅಜೆಂಡಾದಲ್ಲಿ ಚರ್ಚಿಸಲು ಅಥವಾ ಮತ ಚಲಾಯಿಸಲು ಮುಂದುವರಿಯಲು ಸಾಧ್ಯವಿಲ್ಲ. ನಿರ್ದಿಷ್ಟವಾಗಿ, ನಿಗದಿತ ಸಮಯದ ಅರ್ಧ ಗಂಟೆಯೊಳಗೆ ಯಾವುದೇ ಕೋರಂ ಇಲ್ಲದಿದ್ದರೆ ನಂತರ ಎಒಎ ಯ ಷರತ್ತು 39 (ಎ) ಮತ್ತು ಎಸ್ಎಚ್ಎ ಷರತ್ತು 4.8 (ಎ) ಅಡಿಯಲ್ಲಿ ತುರ್ತು ಸಭೆಯನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಷೇರುದಾರರು ಇಜಿಎಂ ನಡೆಸುವುದನ್ನು ತಡೆಯಲು ಬೈಜು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಆದರೆ ನ್ಯಾಯಾಲಯವು ಅಂಗೀಕರಿಸಿದ ನಿರ್ಣಯಗಳ ಅನುಷ್ಠಾನವು ಮಾರ್ಚ್ 13 ರಂದು ಅಂತಿಮ ವಿಚಾರಣೆಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.
ಬೈಜು ರವೀಂದ್ರನ್‌ಗೆ ಲುಕ್‌ಔಟ್ ನೋಟೀಸ್
₹9,362 ಕೋಟಿ ಮೊತ್ತದ ಫೆಮಾ (FEMA) ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಎಜುಕೇಶನ್ ಸ್ಟಾರ್ಟಪ್ ಬೈಜುಸ್ (BYJU’s) ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ವಿರುದ್ಧ ಲುಕ್‌ಔಟ್ ನೋಟಿಸ್ (Look out notice) ಜಾರಿ ಮಾಡಲು ಜಾರಿ ನಿರ್ದೇಶನಾಲಯ (Enforcement directorate- ED – ಇಡಿ) ವಲಸೆ ಬ್ಯೂರೋಗೆ (Bureau of Immigration) ಕೇಳಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (Foreign Exchange Management Act) ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಬೈಜೂಸ್ ಸಂಸ್ಥೆಯನ್ನು ನಡೆಸುತ್ತಿರುವ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ಹಾಗೂ ಅದರ ಮಾಲೀಕ ಬೈಜು ರವೀಂದ್ರನ್ ಅವರಿಗೆ ₹9,362.35 ಕೋಟಿ ಮೊತ್ತದ ಅಕ್ರಮ ವ್ಯವಹಾರ ಎಸಗಿದ ಕುರಿತು ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ನೀಡಿತ್ತು.
ಕಂಪನಿಯು ಕಾಯಿದೆಯನ್ನು ಉಲ್ಲಂಘಿಸಿ ಮಾಡಿದ ದೊಡ್ಡ ಮೊತ್ತದ ಸಾಗರೋತ್ತರ ಹೂಡಿಕೆಗಳ ಆರೋಪಗಳ ಆಧಾರದ ಮೇಲೆ ಇಡಿ, ಫೆಮಾ ವಿಚಾರಣೆಯನ್ನು ಪ್ರಾರಂಭಿಸಿದೆ. ಈ ಅವ್ಯವಹಾರ ಖಜಾನೆಗೆ ಸಾಕಷ್ಟು ನಷ್ಟವನ್ನು ಉಂಟುಮಾಡಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: BCCI | ಟೀಮ್ ಇಂಡಿಯಾ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ ಬೈಜುಸ್, ಎಂಪಿಎಲ್ ಸ್ಪೋರ್ಟ್ಸ್!