Site icon Vistara News

Balidan Diwas: ಸ್ಮರಣೆ: ಇಂದು ಬಲಿದಾನ ದಿನ, ಇತಿಹಾಸದ ಕೆಂಪು ಅಧ್ಯಾಯ

balidan diwas

: ಮಯೂರಲಕ್ಷ್ಮೀ

ಮಾರ್ಚ್ 23, ಸ್ವಾತಂತ್ರ್ಯ ಸಂಗ್ರಾಮ ಎಂಬ ಯಜ್ಞದಲ್ಲಿ ಸಮಿತ್ತುಗಳಾಗಿ ತಮ್ಮನ್ನು ಅರ್ಪಿಸಿಕೊಂಡು ದೇಶಕ್ಕಾಗಿ ಬಲಿದಾನಿಗಳಾದ ಮೂವರು ಕ್ರಾಂತಿಕಾರಿಗಳ ಮರೆಯಲಾಗದ ದಿನ. ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟ ಮೂವರು ಕ್ರಾಂತಿಕಾರಿಗಳ ತ್ಯಾಗ ಮತ್ತು ಬಲಿದಾನಗಳ ಮರೆಯಲಾಗದ ದಿನ ಮಾರ್ಚ್ 23, 1931.

ಕ್ರಾಂತಿಕಾರಿ ಹೋರಾಟಕ್ಕೆ ಹೊಸ ಭಾಷ್ಯ ಬರೆದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅಂದು ಪ್ರಾಣತ್ಯಾಗ ಮಾಡಿದ ಬಲಿದಾನಿಗಳು. ಕಾನೂನು ವ್ಯವಸ್ಥೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಾರತೀಯರನ್ನು ಸದೆಬಡಿಯುತ್ತಿದ್ದ ಬ್ರಿಟಿಷರ ವಿರುದ್ಧ ಅವರದು ದಿಟ್ಟ ಹೋರಾಟ. ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಆರ್ಮಿ ಎನ್ನುವ ಸಂಘಟನೆಯಲ್ಲಿ ಅವರೊಂದಿಗೆ ಚಂದ್ರಶೇಖರ್ ಆಜಾದ್‌ ಮುಂತಾದ ಅನೇಕ ಯುವಕರಿದ್ದರು.

ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರು ವರ್ತಕರ ಮತ್ತು ರೈತಾಪಿಗಳನ್ನು ಸುಂಕದ ನೆಪದಲ್ಲಿ ಲೂಟಿಮಾಡಿದ್ದರು. ಬ್ರಿಟಿಷರ ವಿರುದ್ಧ ಸಮರ ಸಾರಿದ್ದ ಕ್ರಾಂತಿಕಾರಿಗಳು ಕಾಕೋರಿಗೆ ಖಜಾನೆಯನ್ನು ಹೊತ್ತೊಯ್ಯುತ್ತಿದ್ದ ರೈಲಿನಿಂದ ಖಜಾನೆಯನ್ನು ಕ್ರಾಂತಿಕಾರಿಗಳು ಕಸಿದುಕೊಂಡಿದ್ದರು. ಬ್ರಿಟಿಷ್ ಸರ್ಕಾರ ಅವರನ್ನು ಸದೆಬಡಿಯಲು ಮುಂದಾಗಿತ್ತು. ಹಿರಿಯ ನೇತಾರ ಲಾಲಾ ಲಜಪತ್ ರಾಯ್ ಅವರು ಸೈಮನ್ ಕಮಿಷನ್ ವಿರೋಧಿಸಿ ಶಾಂತಿಯುತ ಮೆರವಣಿಗೆಯಲ್ಲಿ ತೊಡಗಿದ್ದಾಗ ಪೋಲೀಸ್ ಅಧಿಕಾರಿ ಪೋಲೀಸ್ ಅಧಿಕಾರಿ ಸ್ಯಾಂಡರ್ಸ್ ಲಾಲಾಜಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ. ಪರಿಣಾಮವಾಗಿ ಲಾಲಾಜಿ ದುರ್ಮರಣಕ್ಕೆ ಈಡಾಗಿದ್ದರು.

ಭಗತ್ ಸಿಂಗ್, ಸುಖದೇವ್, ರಾಜಗುರು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸಂಘಟನೆಯಲ್ಲಿ ಚಂದ್ರಶೇಖರ್ ಆಜಾದ್ ಮುಂತಾದ ನವಯುವಕರೊಂದಿಗೆ ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಕ್ರಾಂತಿಕಾರಿಗಳು ಒಗ್ಗೂಡಿ ಕಾಕೋರಿಗೆ ಖಜಾನೆಯನ್ನು ಹೊತ್ತೊಯ್ಯುತ್ತಿದ್ದ ರೈಲಿನಿಂದ ಖಜಾನೆಯ ವಶದೊಂದಿಗೆ ಬ್ರಿಟಿಷರಿಗೆ ಎಚ್ಚರಿಕೆ ನೀಡಿದ್ದರು. ಬ್ರಿಟಿಷ್ ಸರ್ಕಾರ ಅವರನ್ನು ಸದೆಬಡಿಯಲು ಮುಂದಾಗಿತ್ತು. ಕ್ರೋಧಗೊಂಡ ಭಗತ್ ಮತ್ತವರ ಸಹಚರರು ಸ್ಯಾಂಡರ್ಸ್‍ನನ್ನು ಮುಗಿಸಲು ನಿರ್ಧರಿಸಿದರು.

17 ಡೆಸೆಂಬರ್, 1928ರಂದು ಲಾಹೋರ್‌ನ ಡಿಏವಿ ಕಾಲೇಜೆದುರು ಪೋಲೀಸ್ ಮುಖ್ಯ ಕಚೇರಿಯಲ್ಲಿ ಎಂದಿನಂತೆ ತನ್ನ ಮೋಟಾರು ಬೈಕನ್ನು ನಿಲ್ಲಿಸಲು ಅನುವಾದ. ಹೊರಗೆ ಅವನು ಬಂದ ಸೂಚನೆಯನ್ನು ಚಂದ್ರಶೇಖರ್ ಆಜಾದ್ ಕೊಡುತ್ತಲೇ ಭಗತನೊಂದಿಗೆ ರಾಜಗುರು ಹೊರಗೆ ಕಾದಿದ್ದು ಸ್ಯಾಂಡರ್ಸ್ ಹೊರ ಬರುತ್ತಲೇ ಮೊದಲು ಸುಖದೇವ್ ಬಂದೂಕಿನಿಂದ ಗುಂಡು ಹಾರಿಸಿದ. ನಂತರ ಭಗತ್ ಗುಂಡು ಹಾರಿಸಿದಾಗ ಸ್ಯಾಂಡರ್ಸ್ ರಕ್ತದ ಮಡುವಲ್ಲಿ ಬಿದ್ದ. ಕೂಡಲೇ ಅವರು ಅಲ್ಲಿಂದ ತಪ್ಪಿಸಿಕೊಂಡು ಹೊರಟರು.

ವೇಷ ಬದಲಿಸಿಕೊಂಡು ಭಗತ್ ಮತ್ತು ರಾಜಗುರು ಲಾಹೋರಿನಿಂದ ಹೊರಟರು. ರೈಲಿನಲ್ಲಿ ಲಾಹೋರಿನಿಂದ ಮೊದಲು ಲಖನೌ ನಂತರ ಹೌರಾ ತಲುಪಿದರು. ಬ್ರಿಟಿಷರ ಕೈಗೆ ಸಿಗದೆ ರಹಸ್ಯವಾಗಿ ಮತ್ತೆ ಬಾಂಬ್ ತಯಾರಿಯನ್ನು ರಹಸ್ಯವಾಗಿ ನಡೆಸುತ್ತಾ ಮುಂದಿನ ಕಾರ್ಯಾಚರಣೆಗೆ ಸಿದ್ಧರಾದರು. “ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ”ಯಲ್ಲಿ ಪ್ರವಾಸಿಗರು ಕುಳಿತಿದ್ದ ಸ್ಥಳದಲ್ಲಿದ್ದ ಭಗತ್ ಮತ್ತು ಭಗವತಿ ಚರಣ್ ಅಸೆಂಬ್ಲಿ ಹಾಲ್‍ನಲ್ಲಿ ಪೂರ್ವಯೋಜಿತದಂತೆ ಸರಿಯಾದ ಸಮಯಕ್ಕೆ ಬಾಂಬ್ ಸ್ಫೋಟಿಸಿದರು. ಸ್ಫೋಟದಿಂದ ಯಾವ ಸಾವು ನೋವುಗಳಾಗಲಿಲ್ಲ, ಒಂದಿಬ್ಬರು ಗಾಯಗೊಂಡರಷ್ಟೇ!

ಅವರ ಉದ್ದೇಶ ಬ್ರಿಟಿಷ್ ಆಳ್ವಿಕೆ, ಕಾನೂನು ಮತ್ತು ಭಾರತದಲ್ಲಿನ ಸಮಾಜಿಕ-ರಾಜಕೀಯ ವ್ಯವಸ್ಥೆಗಳ ಕುರಿತು ಪ್ರತಿರೋಧ ಅವರ ಗುರಿಯಾಗಿತ್ತು. ಅವರು ಯಾವುದೇ ಪ್ರತಿರೋಧವನ್ನೂ ವ್ಯಕ್ತಪಡಿಸದೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಅವರಿಬ್ಬರನ್ನು ಬ್ರಿಟಿಷರು ಬಂಧಿಸಿ ಲಾಹೋರ್ ಜೈಲಿನಲ್ಲಿರಿಸಿದರು. ಅದೇ ಸಮಯದಲ್ಲಿ ಸಂಘಟನೆಯ ಸುಖದೇವ್ ಮತ್ತು ರಾಜಗುರುವನ್ನೂ ಬಂಧಿಸಿದರು. ಸ್ಯಾಂಡರ್ಸ್ ಕೊಲೆ ಮತ್ತು ಲಾಹೋರ್ ಕಾನೂನು ವಿರೋಧಿ ಕಾರ್ಯಾಚರಣೆಯ ಆಪಾದನೆ ಅವರ ಮೇಲಿತ್ತು.

ಬಂಧನದಲ್ಲಿದ್ದ ಭಗತ್ ಹಾಗೂ ಸಂಗಡಿಗರ ವಿಚಾರಣೆ ಆರಂಭವಾಯ್ತು. ತನ್ನ ಪರವಾಗಿ ತಾನೇ ವಾದಿಸಲು ಭಗತ್ ನಿರ್ಧರಿಸಿದರು. ಸೆರೆಯಲ್ಲಿದ್ದ ಭಾರತೀಯ ಕೈದಿಗಳನ್ನು ಅಮಾನುಷವಾಗಿ ಬ್ರಿಟಿಷರು ನಡೆಸಿಕೊಳ್ಳುತ್ತಿದ್ದ ರೀತಿಯನ್ನೂ ಕಂಡು ಕ್ರೋಧಗೊಂಡ ಅವರು ಉಪವಾಸ ಕೈಗೊಂಡರು. ಆಹಾರ ಸೇವಿಸಲು ನಿರಾಕರಿಸಿದಾಗ ಬಲವಂತವಾಗಿ ಪೈಪುಗಳ ಮೂಲಕ ಆಹಾರವನ್ನು ತುರುಕುವ ಪ್ರಯತ್ನ ನಡೆಯಿತು, ಕುಡಿಯಲು ನೀರನ್ನೂ ಕೊಡದೆ ಚಿತ್ರಹಿಂಸೆ ಕೊಟ್ಟರು. ಸೆರೆಮನೆಯಲ್ಲಿಯೇ ಅವರನ್ನು ಪತ್ರಕರ್ತರು ಸಂಪರ್ಕಿಸಿ ಸಮಾಲೋಚನೆಯನ್ನೂ ನಡೆಸುತ್ತಿದ್ದರು.

ಇದನ್ನೂ ಓದಿ: ಸ್ಮರಣೆ: ಕನ್ನಡದ ಶ್ರೇಷ್ಠ ದಾರ್ಶನಿಕ ಡಿ.ವಿ. ಗುಂಡಪ್ಪ

ಅನೇಕ ದಿನಗಳ ವಿಚಾರಣೆಗಳ ನಂತರ ಭಗತ್ ವಾದಗಳೆಲ್ಲವೂ ತಿರಸ್ಕೃತಗೊಂಡವು. ಭಗತ್ ಸಿಂಗ್, ರಾಜ್‍ಗುರು ಮತ್ತು ಸುಖದೇವ್ ಅವರನ್ನು 23 ಮಾರ್ಚ್ 1931ರಂದು ನೇಣುಕಂಬಕ್ಕೇರಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿತು. 1931 ಮಾರ್ಚ್ 24, ಮುಂಜಾನೆ ಅವರನ್ನು ಗಲ್ಲಿಗೇರಿಸಬೇಕೆಂದು ನ್ಯಾಯಾಲಯ ಆದೇಶ ಕೊಟ್ಟರೂ ತಮ್ಮ ನಾಯಕರ ಮರಣದಿಂದ ದೇಶಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಹೆದರಿದ ಬ್ರಿಟಿಷ್ ಆಡಳಿತ ಮಾರ್ಚ್ 23 ಸಂಜೆ ಅವರ ಗಲ್ಲುಶಿಕ್ಷೆಯೆಂದು ಮೂವರಿಗೂ ತಿಳಿಸಿ ಕೊನೆಯ ವಿಧಿಗಳನ್ನು ಪೂರೈಸಲು ಮುಂದಾಯಿತು.

ಜೈಲಿನ ಅಧಿಕಾರಿಯ ವಿಚಾರ ತಿಳಿಸಿದಾಗ ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತಚಿತ್ತರಾಗಿ ಶುಚಿರ್ಭೂತರಾಗಿ ಧ್ಯಾನ ಮಾಡಿದರು.‌ ಸಂಜೆ 7 ಗಂಟೆಗೆ ತಮ್ಮನ್ನು ನೇಣಿಗೇರಿಸಬಂದವರಿಗೆ ಮುಟ್ಟಲು ಅವಕಾಶ ಕೊಡದೆ ತಾವೇ ಮರದ ಸ್ಟೂಲನ್ನು ಏರಿದರು. “ಇನ್‌ಕ್ವಿಲಾಬ್ ಜಿಂದಾಬಾದ್” ಎಂದು ಕೊನೆಯ ಬಾರಿ ಘೋಷಣೆ ಮೊಳಗಿಸಿದರು. ಅದು ಸ್ತಬ್ಧವಾಗಿದ್ದ ಸೆರೆಮನೆಯ ಗೋಡೆಗೋಡೆಗಳಲ್ಲಿ ಪ್ರತಿಧ್ವನಿಸಿತು. ಹೆಪ್ಪುಗಟ್ಟಿದ ಮೌನದ ನಂತರ ಕೇಳಬಂತು ಭಗತ್ ಸಿಂಗ್ ಹಾಡಿದ ಕವಿತೆಯ ಸಾಲುಗಳನ್ನು ಕೇಳಿ ಸೆರೆಮನೆಯ ಬಂಧಿಗಳು ದುಖಗೊಂಡರು.

ಮೊದಲು ಭಗತ್, ನಂತರ ಕ್ರಮವಾಗಿ ಸುಖದೇವ್ ಮತ್ತು ರಾಜಗುರು ನೇಣಿನ ಕುಣಿಕೆಗೆ ಮುತ್ತಿಟ್ಟು ಭಾರತಾಂಬೆಗೆ ನಮಿಸಿ ಕುಣಿಕೆಯನ್ನು ಕತ್ತಿಗೆ ಹಾರವಾಗಿಸಿ ತಾವೇ ಬಿಗಿದುಕೊಂಡರು. ಸರಿಯಾಗಿ 23 ನಿಮಿಷಗಳ ಬಳಿಕ ಅವರ ಆತ್ಮಗಳು ಅನಂತದಲ್ಲಿ ಲೀನವಾದವು. ಅವರ ತ್ಯಾಗ ಬಲಿದಾನ ಇತಿಹಾಸದ ಪುಟಗಳಲ್ಲಿರುವ ಸುವರ್ಣಾಕ್ಷರಗಳ ಅಧ್ಯಾಯ.

ಇದನ್ನೂ ಓದಿ: ಸ್ಮರಣೆ: ವಿಶ್ವಮಾನ್ಯ ಕವಿ, ವಿದ್ವಾಂಸ ಎ.ಕೆ ರಾಮಾನುಜನ್ ನೆನಪು

Exit mobile version