Site icon Vistara News

Bandipur National Park: ಕಾಡಾನೆ ಬೆನ್ನಟ್ಟಿದ ಘಟನೆ; ಪ್ರವಾಸಿಗರಿಗೆ ಅಧಿಕಾರಿಯ ಸಲಹೆ ಇದು

bandipura

bandipura

ಬೆಂಗಳೂರು: ಬಂಡಿಪುರ ಹುಲಿ ಅಭಯಾರಣ್ಯದಲ್ಲಿ (Bandipur National Park) ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ವಿಡಿಯೊ ಇತ್ತೀಚೆಗೆ ಇಂಟರ್‌ ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು (Viral Video). ಪ್ರವಾಸಿಗರ ನಡೆ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿತ್ತು. ಜತೆಗೆ ಸಾಕಷ್ಟು ಮಂದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಈ ಬಗ್ಗೆ ಐಎಫ್ಎಸ್ ಅಧಿಕಾರಿ (Indian Forest Service) ಪರ್ವೀನ್ ಕಸ್ವಾನ್ ಧ್ವನಿ ಎತ್ತಿದ್ದು, ವನ್ಯಜೀವಿ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅಧಿಕಾರಿ ಹೇಳಿದ್ದೇನು?

ಪ್ರವಾಸಿಗರನ್ನು ಆನೆ ಬೆನ್ನಟ್ಟುವ ವಿಡಿಯೊವನ್ನು ಶೇರ್‌ ಮಾಡಿರುವ ಪರ್ವೀನ್ ಕಸ್ವಾನ್, ʼʼಈ ವ್ಯಕ್ತಿಯ ಜತೆ ಅದೃಷ್ಟ ಇದ್ದಿದ್ದರಿಂದ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಆದರೆ ಯಾವತ್ತೂ ವನ್ಯಜೀವಿಗಳಿರುವ ಪ್ರದೇಶದಲ್ಲಿ ತೆರಳುವಾಗ ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ. ವಾಹನದಿಂದ ಕೆಳಗಿಳಿಯಬೇಡಿ. ಮಾತ್ರವಲ್ಲ ವನ್ಯಜೀವಿಗಳ ಬಳಿಗೆ ತೆರಳಬೇಡಿ. ಈ ಬಗ್ಗೆ ಕೇರಳ ಸರ್ಕಾರವೂ ಎಚ್ಚರಿಕೆ ನೀಡಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲೇನಿದೆ?

ಈ ಘಟನೆ ಜನವರಿ 31ರಂದು ಕೇರಳದ ಮುತ್ತಂಗಾ ಸಮೀಪ ನಡೆದಿದೆ ಎನ್ನಲಾಗಿದೆ. ವಿಡಿಯೋ ತುಣುಕು ಸುಮಾರು 20 ಸೆಕೆಂಡ್‌ ಇದ್ದು, ಕಾಡಾನೆ ಅಟ್ಟಿಸಿಕೊಂಡು ಬರುತ್ತಿರುವಾಗ ಇಬ್ಬರು ಅದರ ಎದುರು ಓಡುತ್ತಿರುವ ದೃಶ್ಯವಿದೆ. ಇದ್ದಕ್ಕಿದ್ದಂತೆ ಹಿಂದೆ ಇದ್ದ ವ್ಯಕ್ತಿ ನೆಲಕ್ಕೆ ಬಿದ್ದು ಬಿಡುತ್ತಾನೆ. ಕೂಡಲೇ ಆನೆ ಓಡುವುದನ್ನು ನಿಲ್ಲಿಸಿ ಆ ಬಿದ್ದ ವ್ಯಕ್ತಿಗೆ ಸೊಂಡಿಲಿನಿಂದ ಹೊಡೆದು, ಎದುರು ಹೋಗಿ ಒಂದು ಸುತ್ತು ತಿರುಗಿ ಕಾಲಿನಿಂದ ಒದೆಯುತ್ತದೆ. ಆದರೆ ಆ ಒದೆ ವ್ಯಕ್ತಿಗೆ ತಾಗುವುದಿಲ್ಲ. ಆತ ತೆವಳಿಕೊಂಡು ಮರಗಳ ನಡುವೆ ಸಾಗುತ್ತಾನೆ. ಬಳಿಕ ಆನೆಗೆ ಏನನಿಸಿತೋ ಏನೋ. ಅವರತ್ತ ಬೆನ್ನು ತಿರುಗಿಸಿ ಕಾಡಿನೊಳಗೆ ಹೊರಟು ಹೋಗುತ್ತದೆ. ಅವರು ಕಾರಿನೆಡೆಗೆ ತೆರಳುತ್ತಾರೆ. ಒಂದು ವೇಳೆ ಆನೆ ರೊಚ್ಚಿಗೆದ್ದಿದ್ದರೆ ಕಥೆ ಬೇರೆಯದೇ ಆಗಿರುತ್ತಿತ್ತು.

ಈ ವಿಡಿಯೊವನ್ನು ಕತಾರ್‌ನಲ್ಲಿ ಐಟಿ ಎಂಜಿನಿಯರ್‌ ಆಗಿರುವ ಕೇರಳದ ಕನ್ನೊತುಮಾಲಾದ ಸವಾದ್‌ ಎನ್ನುವವರು ಚಿತ್ರೀಕರಿಸಿದ್ದಾರೆ. ಜನವರಿ 31ರಂದು ಕುಟುಂಬದೊಂದಿಗೆ ಊಟಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ವನ್ಯಜೀವಿಗಳಿರುವ ಪ್ರದೇಶದಲ್ಲಿ ತೆರಳುವಾಗ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ತಿಳಿಸಲು ಈ ವಿಡಿಯೊವನ್ನು ಶೇರ್‌ ಮಾಡಲಾಗಿದೆ ಎಂಬ ಕ್ಯಾಪ್ಶನ್‌ನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿತ್ತು. ಕೆಲವೇ ತಾಸಿನಲ್ಲಿ ಈ ವಿಡಿಯೊ ವೈರಲ್‌ ಆಗಿತ್ತು.

ಇದನ್ನೂ ಓದಿ: Viral Video: ಶ್ವಾನಗಳ ಗುಂಪಿನೊಂದಿಗೆ ಕಾಳಿಂಗ ಸರ್ಪದ ಏಕಾಂಗಿ ಹೋರಾಟ; ರೋಚಕ ವಿಡಿಯೊ ಇಲ್ಲಿದೆ

ಅಭಯಾರಾಣ್ಯ ಪ್ರದೇಶದಲ್ಲಿ ವಾಹನಗಳನ್ನು ಪಾರ್ಕ್‌ ಮಾಡುವುದು, ಇಳಿಯುವುದು ಇತ್ಯಾದಿ ಚಟುವಟಿಕೆ ನಿಷಿದ್ಧ. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಹೆದ್ದಾರಿಯ ಉದ್ದಕ್ಕೂ ಸ್ಥಾಪಿಸಲಾಗುತ್ತದೆ. ಹೀಗಿದ್ದೂ ಈ ಎಲ್ಲ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಈ ಘಟನೆಗೆ ಕಾರಣ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹಲವರು ಉದ್ಧಟತನ ತೋರಿದ ಪ್ರವಾಸಿಗರ ನಡೆಯನ್ನು ಟೀಕಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version