Site icon Vistara News

Bangladesh Protest: ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಹಿಂದೆ ಬೇರೆ ದೇಶಗಳ ಕೈವಾಡವಿದೆಯೇ?; ರಾಹುಲ್‌ ಗಾಂಧಿ ಪ್ರಶ್ನೆ

Bangladesh Protest

ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು (Bangladesh Protest), ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಶೇಖ್‌ ಹಸೀನಾ (Sheik Hasina) ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯಲ್ಲಿ ಅವಲೋಕಿಸಲು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅವರು ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು, ʼʼಕಳೆದ ಕೆಲವು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳಲ್ಲಿ ವಿದೇಶಿ ಶಕ್ತಿಗಳು ವಿಶೇಷವಾಗಿ ಪಾಕಿಸ್ತಾನದ ಕೈವಾಡ ಇರಬಹುದೆ?ʼʼ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಈ ಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಪ್ರತಿಬಿಂಬಿಸಲು ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ನಿರಂತರವಾಗಿ ಫೋಟೊ ಹಂಚಿಕೊಳ್ಳುತ್ತಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಹೇಳಿದೆ.

ಸರ್ಕಾರದ ಕಾರ್ಯ ತಂತ್ರವೇನು?

ಢಾಕಾದಲ್ಲಿನ ಅಧಿಕಾರ ಹಸ್ತಾಂತರದ ರಾಜತಾಂತ್ರಿಕ ಪರಿಣಾಮಗಳನ್ನು ಎದುರಿಸುವಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಲ್ಪಾವಧಿ ಮತ್ತು ದೀರ್ಘಕಾಲೀನ ಕಾರ್ಯತಂತ್ರವೇನು ? ಎಂದೂ ರಾಹುಲ್ ಗಾಂಧಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಜೈಶಂಕರ್‌, ʼʼಸದ್ಯ ಬಾಂಗ್ಲಾದೇಶದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದ್ದು, ಈಗಲೇ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲಿನ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದುʼʼ ಎಂದು ತಿಳಿಸಿದರು.

ಬಾಂಗ್ಲಾದೇಶದಲ್ಲಿ ನಡೆದ ನಾಟಕೀಯ ತಿರುವನ್ನು ಮೊದಲೇ ಊಹಿಸಲಾಗಿತ್ತೆ ? ಎಂಬ ರಾಹುಲ್‌ ಗಾಂಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್‌, ʼʼಭಾರತವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿತ್ತುʼʼ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ನಾಯಕರು ನೆರೆ ದೇಶದ ಈ ಬಿಕ್ಕಟ್ಟನ್ನು ನಿಭಾಯಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಲಿದೆ ಎಂದು ಭರವಸೆ ನೀಡಿದರು.

ಸಭೆಯ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಾಹಿತಿ ನೀಡಿದ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಪ್ರತಿಪಕ್ಷಗಳ ಸರ್ವಾನುಮತದ ಬೆಂಬಲವನ್ನು ಶ್ಲಾಘಿಸಿದರು. “ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಸತ್ತಿನಲ್ಲಿ ಆಯೋಜಿಸಿದ್ದ ಸರ್ವಪಕ್ಷ ಸಭೆಯಲ್ಲಿ ವಿವರಿಸಿದ್ದೇನೆ. ಬಳಿಕ ಈ ವಿಚಾರದಲ್ಲಿ ಬೆಂಬಲ ನೀಡುವುದಾಗಿ ಎಲ್ಲ ಪಕ್ಷಗಳ ಮುಖಂಡರು ತಿಳಿಸಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ಪರಿಸ್ಥಿತಿಯ ಅವಲೋಕನ

ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಜೈಶಂಕರ್‌, ʼʼಪ್ರಸ್ತುತ ದೆಹಲಿಯಲ್ಲಿರುವ ಶೇಖ್ ಹಸೀನಾ ಅವರು ಚೇತರಿಸಿಕೊಳ್ಳಲಿ. ಅವರಿಗಾಗಿ ಸ್ವಲ್ಪ ಸಮಯಾವಕಾಶ ನೀಡೋಣ. ಬಳಿಕ ಮುಂದಿನ ಕ್ರಮದ ಬಗ್ಗೆ ಕೇಂದ್ರ ಅವರೊಂದಿಗೆ ಸಮಾಲೋಚನೆ ನಡೆಸಲಿದೆ. ಸರ್ಕಾರ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಜತೆಗೆ ಬಾಂಗ್ಲಾದೇಶದ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಶೇಖ್ ಹಸೀನಾ ಭಾರತಕ್ಕೆ ಬಂದ ನಂತರ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆʼʼ ಎಂದು ತಿಳಿಸಿದರು.

ಇದನ್ನೂ ಓದಿ: Bangladesh Protest: ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ; ಮತ್ತೊಂದು ಕಿಡಿ ಹೊತ್ತಿಸಿದ ಕಂಗನಾ ರಣಾವತ್

Exit mobile version