ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಭಾರೀ ದಂಗೆ(Bangladesh Unrest) ನಿಯಂತ್ರಣಕ್ಕೆ ಬಾರದೇ ಇರುವ ಹಿನ್ನೆಲೆ ರಾಜೀನಾಮೆ ನೀಡಿರುವ ಅಲ್ಲಿನ ಪ್ರಧಾನಿ ಶೇಖ್ ಹಸೀನಾ(Sheikh Hasina) ದೇಶವನ್ನು ತೊರೆದು ಭಾರತಕ್ಕೆ ಪಲಾಯಣ ಮಾಡಿದ್ದಾರೆ. ಇನ್ನು ಅಲ್ಲಿ ಪ್ರಧಾನಿ ಅಧಿಕೃತ ನಿವಾಸಕ್ಕೆ ನುಗ್ಗಿ ಜನ ಕೈಗೆ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇದರ ನಡುವೆ ಬಾಂಗ್ಲಾದಲ್ಲಿ ಇಂತಹ ದಂಗೆ ನಡೆಯುವ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಭಾರತದ ಜ್ಯೋತಿಷಿಯೊಬ್ಬರು ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿಯವರು ಕಳೆದ ವರ್ಷವೇ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು 2024ರ ಮೇ, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅವರ ಹತ್ಯೆಗೂ ಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು ಇಂದು ಮತ್ತೆ ಅದೇ ಟ್ವೀಟನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟನ್ನು ಕಿಣಿ ಅವರು ಮಾಡಿದ್ದಾರೆ.
ನಾನು ಈ ಹಿಂದೆಯೇ ಬಾಂಗ್ಲಾದ ಸ್ಥಿತಿಯ ಬಗ್ಗೆ ಭವಿಷ್ಯ ನುಡಿದಿದ್ದೆ. ಶೇಖ್ ಹಸೀನಾ ಅವರು 2024ರ ಆಗಸ್ಟ್‌ನಲ್ಲಿ ತೊಂದರೆ ಅನುಭವಿಸಲಿದ್ದಾರೆ ಎಂದು ಹೇಳಿದ್ದೆ. ಈ ಅವರು ತಮ್ಮದೇ ದೇಶದಿದಂ ಓಡಿ ಪಲಾಯಣ ಮಾಡಿದ್ದಾರೆಯೇ ಎಂದು ಪೋಸ್ಟ್ ಮಾಡಿದ್ದಾರೆ. ಕಿಣಿಯವರ ಪೋಸ್ಟ್ 2.6 ಮಿಲಿಯನ್‌ಗೂ ಅಧಿಕ ವ್ಯೂಸ್ ಪಡೆದುಕೊಂಡಿದ್ದು, ಅನೇಕರು ಲೈಕ್, ಶೇರ್ ಮತ್ತು ಕಮೆಂಟ್ ಮಾಡಿದ್ದಾರೆ.
I have Already predicted Sheikh Haseena will be in trouble in August 2024 ,
— Prashanth Kini (@AstroPrashanth9) August 5, 2024
Is she flee her country !!!! https://t.co/WePWMaOOkP
ಕಿಣಿಯವರ ಪೋಸ್ಟ್‌ಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಬ್ಬಾ… ಎಂಥಾ ಭವಿಷ್ಯ? ನಮ್ಮ ಭವಿಷ್ಯವನ್ನೂ ಹೇಳಿ ಎಂದು ಕೇಳಿದ್ದಾರೆ. ಮತ್ತೊರ್ವ ಬಾಂಗ್ಲಾದೇಶಕ್ಕಿಂತ ನನ್ನ ಜೀವನ ಬಹಳ ಮುಖ್ಯ. ಅದರ ಬಗ್ಗೆ ಭವಿಷ್ಯ ನುಡಿಯಿರಿ ಎಂದು ತಮಾಶೆ ಮಾಡಿದ್ದಾನೆ.
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿರುವ ಬೆನ್ನಲ್ಲೇ ಬಾಂಗ್ಲಾದೇಶ ರಾಷ್ಟ್ರಪತಿ ಮೊಹಮ್ಮದ್ ಶಹಬುದ್ದೀನ್ ಇಂದು ಸಂಸತ್ತನ್ನು ವಿಸರ್ಜಿಸಿದ್ದಾರೆ. ಮೂರು ಸೇನೆಯ ಮುಖ್ಯಸ್ಥರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಮುಖಂಡರು ಹಾಗೂ ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ ಬಳಿಕ ರಾಷ್ಟ್ರಪತಿಯವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಹೊರಹಾಕಿದ್ದಾರೆ.
ಮತ್ತೊಂದೆಡೆ ಶೇಖ್ ಹಸೀನಾ ಅವರ ಬದ್ಧ ವಿರೋಧಿ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನೂ ಇಂದು ಬಿಡುಗಡೆಗೊಳಿಸಲಾಗಿದೆ. ಜಿಯಾರನ್ನು 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿತ್ತು. ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ.