Site icon Vistara News

Lending Rate: ಬ್ಯಾಂಕ್‌ ಆಫ್‌ ಬರೋಡಾ ಬಡ್ಡಿದರ ಹೆಚ್ಚಳ; ಸಾಲಗಾರರಿಗೆ ಇಎಂಐ ಇನ್ನಷ್ಟು ಭಾರ

Lending Rate

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆಯೇ ರೆಪೋ ದರ (Repo Rate) ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿ (Monetary Policy Committee)ಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಗಾಗಿ, ಸಾಲಗಾರರಿಗೆ ಇಎಂಐ ಹೊರೆಯಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಬ್ಯಾಂಕ್‌ ಆಫ್ ಬರೋಡಾ (‌Bank Of Baroda) ಈಗ ಬಡ್ಡಿದರ (Lending Rate) ಏರಿಕೆ ಮಾಡಿದ್ದು, ಆ ಬ್ಯಾಂಕ್‌ನಲ್ಲಿ ಸಾಲ ಪಡೆದವರಿಗೆ ಇಎಂಐ ಹೊರೆಯಾಗುವುದು ನಿಶ್ಚಿತವಾಗಿದೆ.

ಹೌದು, ಬ್ಯಾಂಕ್‌ ಆಫ್‌ ಬರೋಡಾ ಈಗ ಬಡ್ಡಿದರವನ್ನು 5 ಮೂಲಾಂಕ (Basic Points) ಏರಿಕೆ ಮಾಡಿದೆ. ಆಗಸ್ಟ್‌ 12ರಿಂದಲೇ ನೂತನ ಬಡ್ಡಿದರವು ಜಾರಿಗೆ ಬರಲಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾ ತಿಳಿಸಿದೆ. 3 ತಿಂಗಳು, 6 ತಿಂಗಳು ಹಾಗೂ ಒಂದು ವರ್ಷದವರೆಗೆ ಸಾಲ ತೆಗೆದುಕೊಂಡವರಿಗೆ ಬಡ್ಡಿದರ ಏರಿಕೆ ಮಾಡಿರುವುದರಿಂದ ಅವರಿಗೆ ಮಾಸಿಕ ಇಎಂಐ ಜಾಸ್ತಿಯಾಗಲಿದೆ.

ಮೂರು ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಶೇ.8.45ರಿಂದ ಶೇ.8.50ಗೆ ಏರಿಕೆ ಮಾಡಿದೆ. ಹಾಗೆಯೇ, 6 ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಶೇ.8.70ರಿಂದ ಶೇ.8.75ಕ್ಕೆ, 1 ವರ್ಷದ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಶೇ.8.90ರಿಂದ ಶೇ.8.95ಕ್ಕೆ ಏರಿಕೆ ಮಾಡಲಾಗಿದೆ. ಇದು ಸಹಜವಾಗಿಯೇ ಗ್ರಾಹಕರಿಗೆ ಹೊರೆಯಾಗಲಿದೆ ಎಂಬುದಾಗಿ ತಿಳಿದುಬಂದಿದೆ.

ಸಾಮಾನ್ಯವಾಗಿ, ರೆಪೋ ರೇಟ್‌ ಆಧಾರದ ಮೇಲೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತವೆ. ಆರ್‌ಬಿಐ ರೆಪೋ ರೇಟ್‌ ಹೆಚ್ಚಳ ಮಾಡಿದಾಗ ಮಾತ್ರ ಬ್ಯಾಂಕ್‌ಗಳು ಇಂತಹ ಕ್ರಮ ತೆಗೆದುಕೊಳ್ಳುತ್ತವೆ. ಆದರೆ, ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ಆರ್‌ಬಿಐ ರೆಪೋ ದರವನ್ನು ಯಥಾಸ್ಥಿತಿ ಉಳಿಸಿಕೊಂಡು ಬಂದಿದೆ. ಇಷ್ಟಾದರೂ, ಬ್ಯಾಂಕ್‌ ಆಫ್‌ ಬರೋಡಾ ಏಕೆ ಬಡ್ಡಿದರ ಏರಿಕೆ ಮಾಡಿದೆ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ.

ಆರ್‌ಬಿಐ ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಅಂದರೆ ನಿಮ್ಮ ಇಎಂಐ ಸದ್ಯ ಏರಿಕೆ ಅಥವಾ ಇಳಿಕೆಯಾಗುವುದಿಲ್ಲ.

ಇದನ್ನೂ ಓದಿ: PF Interest: ನೌಕರರಿಗೆ ಗುಡ್‌ ನ್ಯೂಸ್;‌ ಪಿಎಫ್‌ ಬಡ್ಡಿದರ ಘೋಷಿಸಿದ ಕೇಂದ್ರ ಸರ್ಕಾರ, ಎಷ್ಟಿದೆ ನೋಡಿ

Exit mobile version