ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ (Domestic Market) ಬಾಸ್ಮತಿ ಅಕ್ಕಿಯ (Basmati Rice) ದರದಲ್ಲಿ ಶೇ.5ರಿಂದ 10ರಷ್ಟು ಕಡಿಮೆಯಾಗಿದೆ. ಕೆಂಪು ಸಮುದ್ರದಲ್ಲಿ (Red Sea) ವ್ಯಾಪಾರಿ ಹಡುಗಗಳ ಮೇಲೆ ಬಂಡುಕೋರರು ದಾಳಿ ನಡೆಸುತ್ತಿರುವುದರಿಂದ (attacks on merchant ships) ಅಕ್ಕಿ ರಫ್ತಿನಲ್ಲಿ ಕಡಿತವಾಗಿದೆ. ಅದರ ಪರಿಣಾಮವೇ ದೇಶಿ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ದರ ಇಳಿಕೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯೆಮನ್ನ ಹೌತಿಗಳ ದಾಳಿಯು ಸೂಯೆಜ್ ಕಾಲುವೆ ಮಾರ್ಗವನ್ನು ತಪ್ಪಿಸಲು ಪರ್ಯಾಯ ಹಡಗು ಮಾರ್ಗಗಳನ್ನು ಪ್ರೇರೇಪಿಸಿದೆ. ಇದು ರಷ್ಯಾ ಮತ್ತು ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆ ಆಮದಿನ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿಯೇ ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆಯು ಈ ಕಾರಣದಿಂದಾಗಿ 3-4 ಪ್ರತಿಶತದಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಯ ದರವು ಪ್ರತಿ ಟನ್ಗೆ 30 ಡಾಲರ್ ಏರಿಕೆಯಾಗಿದೆ. ಅಂದರೆ ಕಳೆದ ಒಂದು ವಾರದಿಂದ ಒಂದು ಟನ್ ಸೂರ್ಯಕಾಂತಿಯ ಬೆಲೆ 940 ಡಾಲರ್ ಇದೆ.
ಯೆಮೆನ್ಗೆ ಸರಕು ಸಾಗಣೆ ಶುಲ್ಕವು ಮೊದಲು ಪ್ರತಿ ಕಂಟೇನರ್ಗೆ 850 ಡಾಲರ್ ಇಥ್ತು. ಅದು ಈಗ ದಾಳಿಯ ನಂತರ 2,400 ಡಾಲರ್ಗೆ ಏರಿಕೆಯಾಗಿದೆ. ಅದೇ ರೀತಿ, ಜೆಡ್ಡಾಕ್ಕೆ ಸರಕು ಸಾಗಣೆ ದರಗಳು ಪ್ರತಿ ಕಂಟೇನರ್ಗೆ 300 ಡಾಲರ್ನಿಂದ 1,500 ಡಾಲರ್ಗೆ ಏರಿಕೆಯಾಗಿದೆ. ಡರ್ಬನ್ನ ದರವು ಪ್ರತಿ ಕಂಟೇನರ್ಗೆ 700 ಡಾಲರ್ಗೆ ಹೆಚ್ಚಿದೆ.
ಈ ಸರಕು ಸಾಗಣೆ ಹೆಚ್ಚಳದಿಂದಾಗಿ, ಖರೀದಿದಾರರು ಈ ಬಾರಿ ಸರಕುಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಈಗ ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಯ ಬೆಲೆ ಕುಸಿದಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಸೇಟಿಯಾ ಹೇಳಿದ್ದಾರೆ. ಭಾರತವು ಪ್ರತಿ ವರ್ಷ ಸುಮಾರು ನಾಲ್ಕರಿಂದ ನಾಲ್ಕುವರೆ ದಶಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತದೆ. ಈ ಪೈಕಿ ಗಲ್ಪ್ ರಾಷ್ಟ್ರಗಳೇ ಶೇ.80ರಷ್ಟು ಅಕ್ಕಿ ಆಮದು ಮಾಡಿಕೊಳ್ಳುತ್ತವೆ.
ಈ ಸುದ್ದಿಯನ್ನೂ ಓದಿ: Non-Basmati White Rice Export : ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಭಾರತ ನಿಷೇಧ