ನವ ದೆಹಲಿ: ಆದಾಯ ತೆರಿಗೆ ಇಲಾಖೆಯು ಬಿಬಿಸಿಯ (British Broadcasting company -BBC) ತೆರಿಗೆ ವಂಚನೆಯನ್ನು ಬಯಲಿಗೆಳೆದಿದೆ. ಕಂಪನಿಯು 40 ಕೋಟಿ ರೂ. ಆದಾಯವನ್ನು ಮರೆ ಮಾಚಿದ್ದು, ಪರಿಷ್ಕೃತ ಐಟಿ ರಿಟರ್ನ್ ಸಲ್ಲಿಸಬೇಕು ಎಂದು ಸೂಚಿಸಿದೆ. ಭಾರತದಲ್ಲಿ ತೆರಿಗೆ ವಂಚಿಸಿರುವ ಹಾಗೂ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವನ್ನು ಬಿಬಿಸಿ ಎದುರಿಸುತ್ತಿದೆ.
ವಸ್ತುನಿಷ್ಠ ಮಾಹಿತಿ ಮತ್ತು ಪುರಾವೆಗಳನ್ನು ಆಧರಿಸಿ ಬಿಬಿಸಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಬಿಬಿಸಿಗೆ ಔಪಚಾರಿಕವಾಗಿ ತಿಳಿಸಲಾಗಿದೆ. ಆದರೆ ಕಂಪನಿ ಇನ್ನೂ ತನ್ನ ಪ್ರಕ್ರಿಯೆಗಳನ್ನು ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ದಿಲ್ಲಿಯಲ್ಲಿ ಬಿಬಿಸಿಯ ಕಚೇರಿಯಲ್ಲಿ ಈ ವರ್ಷ ಐಟಿ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದರು.
ಬಿಬಿಸಿ ಆದಾಯ ತೆರಿಗೆ ಇಲಾಖೆಗೆ ಇ-ಮೇಲ್ ಮೂಲಕ ನೀಡಿರುವ ತಪ್ಪೊಪ್ಪಿಗೆಯೊಂದರಲ್ಲಿ, ಅಘೋಷಿತ ಆದಾಯದ ಬಗ್ಗೆ ಪ್ರಸ್ತಾಪಿಸಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಅದನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಅವಕಾಶ ಸಿಕ್ಕಂತಾಗಿದೆ. ಆದರೆ ಅದಕ್ಕೂ ಮುನ್ನ ಬಿಬಿಸಿ ಪರಿಷ್ಕೃತ ಐಟಿ ರಿಟರ್ನ್ ಸಲ್ಲಿಸಬೇಕಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಬಿಬಿಸಿ, 40 ಕೋಟಿ ರೂ. ಆದಾಯವನ್ನು ಘೋಷಿಸದಿರುವ ಬಗ್ಗೆ ಇ-ಮೇಲ್‌ನಲ್ಲಿ ಪ್ರಸ್ತಾಪಿಸಿದೆ. ಆದರೆ ಇ-ಮೇಲ್‌ಗೆ ಕಾನೂನು ಮಾನ್ಯತೆ ಇರುವುದಿಲ್ಲ. ಬಿಬಿಸಿ ಪರಿಷ್ಕೃತ ಐಟಿ ರಿಟರ್ನ್ ಸಲ್ಲಿಸಬೇಕಾಗಿದೆ ಎಂದು ಸಿಬಿಡಿಟಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಯಾವುದೇ ದೇಶಿ ಅಥವಾ ವಿದೇಶಿ ಮಾಧ್ಯಮಕ್ಕೆ ಬೇರೆ ಕಾನೂನು ಇಲ್ಲ. ಆದ್ದರಿಂದ ಬಿಬಿಸಿ ಕಾನೂನು ಪ್ರಕ್ರಿಯೆಯನ್ನು ಎದುರಿಸಲೇಬೇಕು. ವಿಷಯ ತಾರ್ಕಿಕ ಅಂತ್ಯಕ್ಕೆ ಬಂದ ಬಳಿಕ ಇಲಾಖೆ ಕ್ರಮ ಜರುಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಆದಾಯ ತೆರಿಗೆ ಇಲಾಖೆಯ ಕ್ರಮ ಸರ್ಕಾರದ ಫಿತೂರಿಯ ಭಾಗವಾಗಿದೆ. ಗುಜರಾತ್ (ಗೋಧ್ರಾ) ದಂಗೆಯ ಕುರಿತ ಸಾಕ್ಷ್ಯ ಚಿತ್ರ ಪ್ರಸಾರದ ಬಳಿಕ ಸರ್ಕಾರ ತನ್ನ ವಿರುದ್ಧ ಫಿತೂರಿ ನಡೆಸಿದೆ ಎಂದು ಬಿಬಿಸಿ ಆರೋಪಿಸಿತ್ತು.
ಕಳೆದ ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆಯ ತಂಡವು ದಿಲ್ಲಿ ಮತ್ತು ಮುಂಬಯಿನಲ್ಲಿ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿತ್ತು. ತೆರಿಗೆ ವಂಚನೆ ಬಗ್ಗೆ ಐಟಿ ಇಲಾಖೆ ತನ್ನ ತನಿಖೆ ಮುಂದುವರಿಸಿದೆ. ಎಲ್ಲ ತನಿಖೆಗೆ ಸಹಕರಿಸುತ್ತಿರುವುದಾಗಿ ಬಿಬಿಸಿ ಹೇಳಿದೆ.
ಇನ್ನೂ ಇದೆ: BBC documentary: ಮೋದಿ ಕುರಿತ ಸಾಕ್ಷ್ಯಚಿತ್ರಕ್ಕಾಗಿ ಬಿಬಿಸಿಗೆ ದಿಲ್ಲಿ ಹೈಕೋರ್ಟ್ ಮಾನನಷ್ಟ ಮೊಕದ್ದಮೆ ನೋಟಿಸ್