ನವದೆಹಲಿ: ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ (Coronavirus) ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸೋಂಕಿನ ನಿಗ್ರಹಕ್ಕೆ ನಾಲ್ಕು ಸೂತ್ರ ಪಾಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. “ಆಯಾ ರಾಜ್ಯಗಳು ಕೊರೊನಾ ತಪಾಸಣೆ, ಪತ್ತೆ, ಚಿಕಿತ್ಸೆ ಹಾಗೂ ಕ್ಷಿಪ್ರವಾಗಿ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಬೇಕು” ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ತಿಳಿಸಿದ್ದಾರೆ.
“ಕೊರೊನಾ ಮೊದಲ ಮೂರು ಅಲೆಗಳಲ್ಲಿ ಕಾರ್ಯನಿರ್ವಹಿಸಿದಂತೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಸೋಂಕಿನ ಮೇಲೆ ಹೆಚ್ಚಿನ ನಿಗಾ ಇರಿಸಬೇಕು. ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಬೇಕು. ಹಾಸಿಗೆ ಸಾಮರ್ಥ್ಯ ಇರುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ.
ಹಾಗೆಯೇ, “ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯ ವೇಳೆ ಚಿಕಿತ್ಸೆ ನೀಡುವ ಕುರಿತು ಅಣಕು ಪ್ರದರ್ಶನ ಕೈಗೊಳ್ಳಬೇಕು. ಆ ಮೂಲಕ ವೈದ್ಯಕೀಯ ಸಿಬ್ಬಂದಿಯನ್ನು ಉತ್ತಮ ಚಿಕಿತ್ಸೆ ನೀಡಲು ತಯಾರಿರುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹಬ್ಬಗಳು ಇರುವುದರಿಂದ ಹೆಚ್ಚಿನ ನಿಗಾ, ತಪಾಸಣೆ ಅಗತ್ಯ” ಎಂದು ಹೇಳಿದ್ದಾರೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಲು ಕೂಡ ಮಂಡಾವಿಯ ತೀರ್ಮಾನಿಸಿದ್ದಾರೆ.
ಇದನ್ನೂ ಓದಿ | ಚೀನಾದಲ್ಲಿ ಕೊರೊನಾ ಅಬ್ಬರ; ಬೀಜಿಂಗ್ಗೆ ಜ್ವರದ ಔಷಧ ಕಳಿಸಲು ಸಿದ್ಧ ಎಂದ ಭಾರತೀಯ ವಿದೇಶಾಂಗ ಸಚಿವಾಲಯ