Site icon Vistara News

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

Amith Shah

ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಲೋಕಸಭೆ ಚುನಾವಣೆ (Lok Sabha Election 2024) ಮುಗಿದಿದೆ. ಬಿಜೆಪಿಯು 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಎನ್‌ಡಿಎ ಒಕ್ಕೂಟದ ಮಿತ್ರಪಕ್ಷಗಳ ಬಲದೊಂದಿಗೆ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು 2029ರ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. “2029ರಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ ಉಳಿಯಲಿದೆ” ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷಗಳು ಏನು ಮಾಡುತ್ತಾರೋ, ಏನು ಮಾಡಬೇಕು ಎಂದಿದ್ದಾರೋ ಮಾಡಲಿ. ಆದರೆ, ನಾನು ನಿಮಗೊಂದು ಭರವಸೆ ನೀಡುತ್ತೇನೆ. 2029ರ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದಾರೆ, ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಈ ಬಾರಿಯ ಒಂದೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ” ಎಂಬುದಾಗಿ ಹೇಳಿದರು.

“ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಹಾಗಾಗಿ, ಈಗಿರುವ ಪ್ರತಿಪಕ್ಷಗಳು ಮುಂದೆಯೂ ಪ್ರತಿಪಕ್ಷದಲ್ಲಿಯೇ ಕೂರಲಿವೆ” ಎಂದು ತಿಳಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕ್ಷೇತ್ರಗಳು 240ಕ್ಕೆ ಇಳಿಕೆಯಾದವು. ಆದರೂ, ಬಿಜೆಪಿಯು ಟಿಡಿಪಿ ಹಾಗೂ ಜೆಡಿಯು ಬೆಂಬಲದಿಂದ ಅಧಿಕಾರ ಹಿಡಿದಿದೆ. ಕಾಂಗ್ರೆಸ್‌ ಈ ಬಾರಿ ತನ್ನ ಕ್ಷೇತ್ರಗಳನ್ನು 99ಕ್ಕೆ ಏರಿಕೆ ಮಾಡಿಕೊಂಡಿದೆ. ಇದರಿಂದಾಗಿ ಇಂಡಿಯಾ ಒಕ್ಕೂಟದ ಬಲ ಹೆಚ್ಚಾಗಲಿದೆ.

ಇದನ್ನೂ ಓದಿ: Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Exit mobile version