Site icon Vistara News

5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್‌ ಕ್ರಾಂತಿ? ಏನಿದರ ಅನುಕೂಲ?

benefits of 5G internet Service In India

ನವ ದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು (ಅ.೧) ನಡೆದ ಇಂಡಿಯಾ ಮೊಬೈಲ್​ ಕಾಂಗ್ರೆಸ್​​ನಲ್ಲಿ ಪ್ರಧಾನಿ ಮೋದಿ 5ಜಿ (5G Technology) ಸೇವೆಗೆ ಚಾಲನೆ ನೀಡುವ ಮೂಲಕ ಭಾರತದಲ್ಲಿ ಇಂಟರ್‌ನೆಟ್‌ ಮಹಾ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಆಗಸ್ಟ್​ 15ರಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ನರೇಂದ್ರ ಮೋದಿ 5 ಜಿ ಸೇವೆ ಪ್ರಸ್ತಾಪ ಮಾಡಿದ್ದರು. ಅಕ್ಟೋಬರ್​ ವೇಳೆಗೆ ಭಾರತದಲ್ಲಿ 5ಜಿ ಇಂಟರ್​ನೆಟ್​ ಲಭ್ಯವಾಗಲಿದೆ ಎಂದಿದ್ದರು. ಆ ಮಾತನ್ನು ಉಳಿಸಿಕೊಂಡಿದ್ದಾರೆ. ಇದುವರೆಗೆ ದೇಶದಲ್ಲಿ ಬಳಕೆಯಲ್ಲಿದ್ದ 4ಜಿ ಗಿಂತಲೂ 10 ಪಟ್ಟು ಹೆಚ್ಚು ವೇಗದ 5ಜಿ ಸೇವೆ ಅಧಿಕೃತವಾಗಿ ಪ್ರಾರಂಭವಾಗಿದೆ.

5ಜಿ ಸೇವೆ ಪ್ರಾರಂಭಕ್ಕೂ ಮುನ್ನ ಭಾರತದಲ್ಲಿ ಭಾರಿ ಪೂರ್ವಸಿದ್ಧತೆ ನಡೆದಿವೆ. ಇತ್ತೀಚೆಗಷ್ಟೇ 5ಜಿ ಸ್ಪೆಕ್ಟ್ರಮ್‌ ಹರಾಜು ನಡೆದಿತ್ತು. 51,236 ಮೆಗಾ ಹರ್ಟ್ಸ್‌ ತರಂಗಾಂತರಗಳನ್ನು ಟೆಲಿಕಾಂ ಕಂಪನಿಗಳಿಗೆ ಮಂಜೂರು ಮಾಡಲಾಗಿತ್ತು. 1,50,173 ಕೋಟಿ ರೂ. ಆದಾಯವನ್ನು ಸರ್ಕಾರ ಗಳಿಸಿತ್ತು. ಇಂದು ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ಕೊಟ್ಟ ನಂತರ ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ವಾಣಿಜ್ಯೋದ್ದೇಶಕ್ಕೆ ಬಿಡುಗಡೆಗೊಳಿಸಲಿವೆ. ರಿಲಯನ್ಸ್‌ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌, ಅಕ್ಟೋಬರ್‌ನಲ್ಲಿ 5ಜಿ ಸೇವೆಗೆ ಚಾಲನೆ ನೀಡುವುದಾಗಿ ಘೋಷಿಸಿದ್ದು, ದೀಪಾವಳಿ ವೇಳೆಗೆ ಪ್ರಮುಖ ಮೆಟ್ರೊ ನಗರಗಳಲ್ಲಿ ಜನತೆಗೂ 5ಜಿ ಸೇವೆ ಲಭಿಸಲಿದೆ.

5 ಜಿ ಉಪಯೋಗಗಳೇನು?
ಇಂಟರ್‌ನೆಟ್‌ ವೇಗ ಸಿಕ್ಕಾಪಟೆ ಹೆಚ್ಚುತ್ತದೆ. 4ಜಿಗೆ ಹೋಲಿಸಿದರೆ 5ಜಿಯಲ್ಲಿ ಇಂಟರ್‌ನೆಟ್‌ ವೇಗ ಹತ್ತು ಪಟ್ಟು ಹೆಚ್ಚು ಇರುತ್ತದೆ.ಇದರಿಂದಾಗಿ ಬಳಕೆದಾರರು ಹಲವು ತಂತ್ರಜ್ಞಾನಗಳ ಅನುಕೂಲಗಳನ್ನು ಪಡೆಯಬಹುದು. 2015ರಲ್ಲಿ ಭಾರತದಲ್ಲಿ 53 ಕೋಟಿ ಇದ್ದ ಇಂಟರ್​ನೆಟ್​ ಬಳಕೆದಾರರ ನೆಲೆ 2021ರಲ್ಲಿ 83 ಕೋಟಿಯನ್ನುದಾಟಿದೆ. ಕೇವಲ 6 ವರ್ಷಗಳ ತ್ವರಿತ ಬದಲಾವಣೆ ಆಗಿದ್ದು ಗಮನಾರ್ಹ. 2018-2021ರ ಅವಧಿಯಲ್ಲಿ ಭಾರತದಲ್ಲಿ ಸರಾಸರಿ ಇಂಟರ್‌ನೆಟ್‌ ಬಳಕೆ ಮಾಸಿಕ 1.24 ಜಿಬಿಯಿಂದ 14.1 ಜಿಬಿಗೆ ಏರಿಕೆಯಾಗಿದೆ. ಭಾರತ ಈಗ ಅತ್ಯಂತ ಅಗ್ಗದ ದರದಲ್ಲಿ ಹೆಚ್ಚು ಡೇಟಾ ಒದಗಿಸುತ್ತದೆ. ಇದೀಗ 5ಜಿ ಬಂದ ಬಳಿಕ ನೆಟ್‌ ಬಳಕೆ ಮತ್ತಷ್ಟು ಹೆಚ್ಚಬಹುದು. ನಮ್ಮ ವೃತ್ತಿ, ಉದ್ಯೋಗ, ವೈಯಕ್ತಿಕ ಜೀವನದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲುದು. ಇಂಡಸ್ಟ್ರಿಯ ಸಮಗ್ರ ಡಿಜಿಟಲೀಕರಣವನ್ನು ಕಾಣಬಹುದು.

ಯಾವುದೇ ದೇಶದ ಎಕಾನಮಿ ಸುಧಾರಿಸಿದರೆ, ಬಡತನ ನಿವಾರಣೆಯ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರ್ಥಿಕ ಚಟುವಟಿಕೆ ಅಭಿವೃದ್ಧಿಯಾದಾಗ ಸರಕಾರಕ್ಕೆ ತೆರಿಗೆ ಆದಾಯ ಹೆಚ್ಚುತ್ತದೆ. ರಸ್ತೆ, ರೈಲು, ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯಗಳಿಗೆ ಹೆಚ್ಚು ಹೂಡಿಕೆ ಮಾಡುತ್ತದೆ. ಇದು ಮತ್ತಷ್ಟು ಖಾಸಗಿ ಬಂಡವಾಳ ಹೂಡಿಕೆಯನ್ನೂ ಆಕರ್ಷಿಸುತ್ತದೆ. ದೇಶ-ವಿದೇಶಗಳ ಕಂಪನಿಗಳು ಇನ್ವೆಸ್ಟ್‌ ಮಾಡುತ್ತವೆ. ಆಗ ಉಂಟಾಗುವ ಉದ್ಯೋಗ ಸೃಷ್ಟಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಎಲ್ಲಕ್ಕಿಂತ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇಂಥ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಗೆ 5G ಅಗತ್ಯ ಎನ್ನುತ್ತಾರೆ ತಜ್ಞರು.

ಅನನುಕೂಲಗಳೇನು?
5ಜಿ ಸೇವೆಯು ಎಲ್ಲ ಕಡೆಗಳಲ್ಲಿ ಲಭ್ಯವಿಲ್ಲ. ಸದ್ಯಕ್ಕೆ ನಗರಗಳಲ್ಲಿ ಮಾತ್ರ ಹೆಚ್ಚಾಗಿ ಸಿಗಬಹುದು. ಆದ್ದರಿಂದ ಲಭ್ಯ ಇರುವ ಕಡೆಗಳಲ್ಲಿ ಮಾತ್ರ ಬಳಸಬಹುದು. ಗ್ರಾಮೀಣ ಭಾಗದಲ್ಲಿ 4ಜಿಯನ್ನೇ ಬಳಸಬೇಕಾಗುತ್ತದೆ. ಎತ್ತರದ ಕಟ್ಟಡ, ಮರಗಳು ಇರುವ ಕಡೆಗಳಲ್ಲಿ 5ಜಿ ನೆಟ್‌ ವರ್ಕ್‌ಗೆ ಅಡೆತಡೆಗಳು ಉಂಟಾಗಬಹುದು. ಮಳೆ ಕೂಡ ೫ಜಿ ಕವರೇಜ್‌ಗೆ ಅಡ್ಡಿಪಡಿಸಬಹುದು. 5ಜಿ ಬಳಕೆಯಿಂದ ಸ್ಮಾರ್ಟ್ ಫೋನ್ ಬ್ಯಾಟರಿ ಮೇಲೆ ತೊಂದರೆಯಾಗದಂತೆ ಉತ್ಪಾದಕರು ನಿಗಾ ವಹಿಸಬೇಕಾಗುತ್ತದೆ.ಹಾಗೇ ಮೊಬೈಲ್​ ಬಿಲ್​ ದರದಲ್ಲೂ ಶೇ.20ರಷ್ಟು ಏರಿಕೆಯಾಗಬಹುದು.

3ಜಿ, 4ಜಿ ಕತೆ ಏನು?
5ಜಿ ಸೇವೆ ಬಂದಾಕ್ಷಣ ಈಗಿರುವ 3ಜಿ, 4ಜಿ ಕೊನೆಯಾಗುವುದಿಲ್ಲ. ಇನ್ನೂ 10ವರ್ಷಗಳ ಕಾಲ 4ಜಿ ಇದ್ದೇ ಇರುತ್ತದೆ. 3 ಜಿ ಅದಕ್ಕಿಂತ ಮೊದಲು ಮುಕ್ತಾಯವಾಗಬಹುದಾದರೂ ಏಕಾಏಕಿ ಅದನ್ನು ನಿಲ್ಲಿಸುವುದಿಲ್ಲ. 5ಜಿ ಬಂದಾಕ್ಷಣ ನಿಮ್ಮ ಸ್ಮಾರ್ಟ್​ಫೋನ್​ ಕೂಡ ಬೇರೆ ಮಾಡಬೇಕೆಂದೇನೂ ಇಲ್ಲ.

5 ಜಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಈ ೫ಜಿ ನೆಟ್‌ವರ್ಕ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. 5ಜಿ ನೆಟ್‌ವರ್ಕ್‌ನಲ್ಲಿ ಒಂದು ಮೊಬೈಲ್‌ ನೆಟ್‌ ವರ್ಕ್‌ ಅನ್ನು ಸೆಲ್‌ಗಳಾಗಿ (cell) ವಿಭಜಿಸಲಾಗುತ್ತದೆ. ಪ್ರತಿಯೊಂದು ಫೋನ್‌ ಕೂಡ ಒಂದು ಸೆಲ್‌ ಜತೆ ಸಂಪರ್ಕ ವನ್ನು ಹೊಂದಿರುತ್ತದೆ ಮತ್ತು ಪ್ರತಿಯೊಂದು ಸೆಲ್‌ ಕೂಡ ಒಂದು ಸೆಲ್‌ ಟವರ್‌ ( cell tower) ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸೆಲ್‌ ಟವರ್‌, ವೈರ್‌ಲೆಸ್‌ ಟ್ರಾನ್ಸಿವರ್‌ ಬೇಸ್‌ ಸ್ಟೇಶನ್‌ ಆಗಿರುತ್ತದೆ. ಈ ಬೇಸ್‌ ಸ್ಟೇಶನ್‌ ತನ್ನ ಸೆಲ್‌ನಲ್ಲಿರುವ ಎಲ್ಲ ಸಕ್ರಿಯ ಫೋನ್‌ಗಳಿಗೆ ವೈರ್‌ಲೆಸ್‌ ಸಂಪರ್ಕವನ್ನು ಒದಗಿಸುತ್ತದೆ. ವ್ಯಕ್ತಿಯೊಬ್ಬ ಕರೆ ಮಾಡುವಾಗ ರೇಡಿಯೊ ತರಂಗಳು ಸಮೀಪದ ಸೆಲ್‌ ಟವರ್‌ ಮೂಲಕ ಸಾಗಿ ವರ್ಗಾವಣೆಯಾಗುತ್ತದೆ.

೫ಜಿ ನೆಟ್‌ವರ್ಕ್‌ ತನ್ನ ವೈರ್‌ಲೆಸ್‌ ಡೇಟಾವನ್ನು ವರ್ಗಾಯಿಸಲು ಬಹುತೇಕ ೪ಜಿ ಮತ್ತು ೪ಜಿ ಎಲ್‌ಟಿಇ (long-term evolution network) ನೆಟ್‌ವರ್ಕ್‌ ಅನ್ನು ಅವಲಂಬಿಸಿದೆ. ಆದರೆ ೩ಜಿ-೪ಜಿಗೆ ಹೋಲಿಸಿದರೆ ಇದರ ವೇಗವು ಹೆಚ್ಚು. ಟೆಲಿಕಾಂ ಕಂಪನಿಗಳು ೫ಜಿಗೆ ಮಾತ್ರ ಮೀಸಲಾಗಿರುವ ನೆಟ್‌ವರ್ಕ್‌ ಅನ್ನು ಅಭಿವೃದ್ಧಿಪಡಿಸಲು ಕಾರ್ಯಪ್ರವೃತ್ತವಾಗಿವೆ.

ಮಿಲ್ಲಿಮೀಟರ್‌ ವೇವ್ಸ್‌ (Millimeter waves) : ಮಿಲ್ಲಿಮೀಟರ್‌ ವೇವ್ಸ್‌ ಅಥವಾ ಹೈ-ಫ್ರೀಕ್ವೆನ್ಸಿ ರೇಡಿಯೋ ತರಂಗಗಳು ಮೊಬೈಲ್‌ ಫೋನ್‌ಗಳಿಗೆ ಗಿಗಾಬೈಟ್‌ಗೂ ಹೆಚ್ಚಿನ ಸ್ಪೀಡ್‌ ಅನ್ನು ಕಡಿಮೆ ಅವಧಿಯಲ್ಲಿ ನೀಡುತ್ತದೆ. ಬೀಮ್‌ಫೋರ್ಮಿಂಗ್‌ (Beamforming) ಟ್ರಾಫಿಕ್‌ ಸಿಗ್ನಲಿಂಗ್‌ ಸಿಸ್ಟಮ್‌, ಸೆಲ್ಯುಲಾರ್‌ ಬೇಸ್‌ ಸ್ಟೇಶನ್‌ಗಳಿಗೆ ವೈರ್‌ಲೆಸ್‌ ಸಿಗ್ನಲ್‌ಗಳನ್ನು ವೈಯಕ್ತಿಕ ಮೊಬೈಲ್‌ ಫೋನ್‌ಗಳಿಗೆ ವರ್ಗಾಯಿಸಲು ನೆರವಾಗುತ್ತದೆ. MIMO (multiple input, multiple output) ವ್ಯವಸ್ಥೆಯಲ್ಲಿ ವೈರ್‌ಲೆಸ್‌ ಡೇಟಾವನ್ನು ಹೆಚ್ಚಿನ ಕೆಪಾಸಿಟಿಯಲ್ಲಿ ವರ್ಗಾಯಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಬೇಕು 8 ಲಕ್ಷ ಮೊಬೈಲ್​ ಗೋಪುರಗಳು
೫ಜಿ ನೆಟ್‌ ವರ್ಕ್‌ ಅನ್ನು ದೇಶವ್ಯಾಪಿ ಸುಗಮವಾಗಿ ಜಾರಿಗೊಳಿಸಲು ಟೆಲಿಕಾಂ ಮೂಲ ಸೌಕರ್ಯ ಅಭಿವೃದ್ಧಿಯೂ ಅನಿವಾರ್ಯ. ಪ್ರಸ್ತುತ ಭಾರತದಲ್ಲಿ ೭ ಲಕ್ಷ ಟೆಲಿಕಾಂ ಟವರ್‌ಗಳಿವೆ. ಇದು ಜಗತ್ತಿನಲ್ಲಿಯೇ ಹೆಚ್ಚು. ಹೀಗಿದ್ದರೂ ಸಾಕಾಗುತ್ತಿಲ್ಲ. ತಜ್ಞರ ಪ್ರಕಾರ ೫ಜಿ ನೆಟ್‌ ವರ್ಕ್‌ ಎಲ್ಲ ಕಡೆ ಸುಗಮವಾಗಿ ಜಾರಿಯಾಗುವ ವೇಳೆಗೆ ಟೆಲಿಕಾಂ ಟವರ್‌ಗಳ ಸಂಖ್ಯೆ ಇಮ್ಮಡಿಯಾಗಲಿದೆ! ಅಂದರೆ ೨೦೨೩-೨೪ರ ವೇಳೆಗೆ ಟವರ್‌ಗಳ ಸಂಖ್ಯೆ ೧೫ ಲಕ್ಷ ಮೀರಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಮುಂದಿನ ೨ ವರ್ಷಗಳಲ್ಲಿ ಹೊಸತಾಗಿ ೮ ಲಕ್ಷ ಟೆಲಿಕಾಂ ಗೋಪುರಗಳ ಅಳವಡಿಕೆಗೆ ಅನುಮತಿ ನೀಡಿದೆ. ಪ್ರಧಾನಮಂತ್ರಿಯವರ ಕಚೇರಿ (ಪಿಎಂಒ) ಜತೆಗೆ ಈ ಸಂಬಂಧ ಚರ್ಚಿಸಲಾಗಿದೆ.

ಟೆಲಿಕಾಂ ಗೋಪುರಗಳ ಫೈಬರೀಕರಣ (fiberisation) ಕೂಡ ನಡೆಯಬೇಕಿದೆ. ಸದ್ಯಕ್ಕೆ ೩೦% ಮಾತ್ರ ಫೈಬರೀಕರಣವಾಗಿದೆ. ೫ಜಿಯ ಸುಗಮ ಜಾರಿಗೆ ಇದನ್ನು ೮೦% ತನಕ ಏರಿಸಬೇಕು. ಟೆಲಿಕಾಂ ಗೋಪುರಗಳನ್ನು ಆಪ್ಟಿಕಲ್‌ ಫೈಬರ್‌ ಮೂಲಕ ಪರಸ್ಪರ ಸಂಪರ್ಕಿಸುವ ಕೆಲಸಕ್ಕೆ ಫೈಬರೀಕರಣ ಎನ್ನುತ್ತಾರೆ.

ಇದನ್ನೂ ಓದಿ: ವಿಸ್ತಾರ 5G Info | ರಿಲಯನ್ಸ್‌ 5ಜಿ ಸ್ಮಾರ್ಟ್‌ಫೋನ್‌ 8-12 ಸಾವಿರ ರೂ.ಗೆ ಲಭಿಸುವ ನಿರೀಕ್ಷೆ
ವಿಸ್ತಾರ 5G Info | ನಿಮ್ಮ ನೆಚ್ಚಿನ ಸಿನಿಮಾ ಡೌನ್‌ಲೋಡ್‌ಗೆ 4ಜಿಗೆ 40 ನಿಮಿಷವಾದರೆ, 5ಜಿಗೆ 35 ಸೆಕೆಂಡ್‌ ಸಾಕು!
ವಿಸ್ತಾರ 5G Info| 5G ಎಂದರೆ ಸ್ಪೀಡ್‌ ಮಾತ್ರವಲ್ಲ, ಪ್ರಯೋಜನ ಸಾರ್ವತ್ರಿಕ

Exit mobile version