5 G
5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್ ಕ್ರಾಂತಿ? ಏನಿದರ ಅನುಕೂಲ?
ಭಾರತದಲ್ಲಿ 5 ಜಿ ಸೇವೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ದೀಪಾವಳಿ ಹೊತ್ತಿಗೆ ಜನಸಾಮಾನ್ಯರಿಗೂ ಇದು ಲಭ್ಯ ಆಗಲಿದೆ. ಆದರೆ ಈಗ ಬಳಕೆಯಲ್ಲಿರುವ 4ಜಿ ಮತ್ತು 3ಜಿ ಏನಾಗಲಿದೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ನವ ದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು (ಅ.೧) ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರಧಾನಿ ಮೋದಿ 5ಜಿ (5G Technology) ಸೇವೆಗೆ ಚಾಲನೆ ನೀಡುವ ಮೂಲಕ ಭಾರತದಲ್ಲಿ ಇಂಟರ್‌ನೆಟ್ ಮಹಾ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ನರೇಂದ್ರ ಮೋದಿ 5 ಜಿ ಸೇವೆ ಪ್ರಸ್ತಾಪ ಮಾಡಿದ್ದರು. ಅಕ್ಟೋಬರ್ ವೇಳೆಗೆ ಭಾರತದಲ್ಲಿ 5ಜಿ ಇಂಟರ್ನೆಟ್ ಲಭ್ಯವಾಗಲಿದೆ ಎಂದಿದ್ದರು. ಆ ಮಾತನ್ನು ಉಳಿಸಿಕೊಂಡಿದ್ದಾರೆ. ಇದುವರೆಗೆ ದೇಶದಲ್ಲಿ ಬಳಕೆಯಲ್ಲಿದ್ದ 4ಜಿ ಗಿಂತಲೂ 10 ಪಟ್ಟು ಹೆಚ್ಚು ವೇಗದ 5ಜಿ ಸೇವೆ ಅಧಿಕೃತವಾಗಿ ಪ್ರಾರಂಭವಾಗಿದೆ.
5ಜಿ ಸೇವೆ ಪ್ರಾರಂಭಕ್ಕೂ ಮುನ್ನ ಭಾರತದಲ್ಲಿ ಭಾರಿ ಪೂರ್ವಸಿದ್ಧತೆ ನಡೆದಿವೆ. ಇತ್ತೀಚೆಗಷ್ಟೇ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿತ್ತು. 51,236 ಮೆಗಾ ಹರ್ಟ್ಸ್ ತರಂಗಾಂತರಗಳನ್ನು ಟೆಲಿಕಾಂ ಕಂಪನಿಗಳಿಗೆ ಮಂಜೂರು ಮಾಡಲಾಗಿತ್ತು. 1,50,173 ಕೋಟಿ ರೂ. ಆದಾಯವನ್ನು ಸರ್ಕಾರ ಗಳಿಸಿತ್ತು. ಇಂದು ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ಕೊಟ್ಟ ನಂತರ ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ವಾಣಿಜ್ಯೋದ್ದೇಶಕ್ಕೆ ಬಿಡುಗಡೆಗೊಳಿಸಲಿವೆ. ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್, ಅಕ್ಟೋಬರ್‌ನಲ್ಲಿ 5ಜಿ ಸೇವೆಗೆ ಚಾಲನೆ ನೀಡುವುದಾಗಿ ಘೋಷಿಸಿದ್ದು, ದೀಪಾವಳಿ ವೇಳೆಗೆ ಪ್ರಮುಖ ಮೆಟ್ರೊ ನಗರಗಳಲ್ಲಿ ಜನತೆಗೂ 5ಜಿ ಸೇವೆ ಲಭಿಸಲಿದೆ.
5 ಜಿ ಉಪಯೋಗಗಳೇನು?
ಇಂಟರ್‌ನೆಟ್ ವೇಗ ಸಿಕ್ಕಾಪಟೆ ಹೆಚ್ಚುತ್ತದೆ. 4ಜಿಗೆ ಹೋಲಿಸಿದರೆ 5ಜಿಯಲ್ಲಿ ಇಂಟರ್‌ನೆಟ್ ವೇಗ ಹತ್ತು ಪಟ್ಟು ಹೆಚ್ಚು ಇರುತ್ತದೆ.ಇದರಿಂದಾಗಿ ಬಳಕೆದಾರರು ಹಲವು ತಂತ್ರಜ್ಞಾನಗಳ ಅನುಕೂಲಗಳನ್ನು ಪಡೆಯಬಹುದು. 2015ರಲ್ಲಿ ಭಾರತದಲ್ಲಿ 53 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ನೆಲೆ 2021ರಲ್ಲಿ 83 ಕೋಟಿಯನ್ನುದಾಟಿದೆ. ಕೇವಲ 6 ವರ್ಷಗಳ ತ್ವರಿತ ಬದಲಾವಣೆ ಆಗಿದ್ದು ಗಮನಾರ್ಹ. 2018-2021ರ ಅವಧಿಯಲ್ಲಿ ಭಾರತದಲ್ಲಿ ಸರಾಸರಿ ಇಂಟರ್‌ನೆಟ್ ಬಳಕೆ ಮಾಸಿಕ 1.24 ಜಿಬಿಯಿಂದ 14.1 ಜಿಬಿಗೆ ಏರಿಕೆಯಾಗಿದೆ. ಭಾರತ ಈಗ ಅತ್ಯಂತ ಅಗ್ಗದ ದರದಲ್ಲಿ ಹೆಚ್ಚು ಡೇಟಾ ಒದಗಿಸುತ್ತದೆ. ಇದೀಗ 5ಜಿ ಬಂದ ಬಳಿಕ ನೆಟ್ ಬಳಕೆ ಮತ್ತಷ್ಟು ಹೆಚ್ಚಬಹುದು. ನಮ್ಮ ವೃತ್ತಿ, ಉದ್ಯೋಗ, ವೈಯಕ್ತಿಕ ಜೀವನದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲುದು. ಇಂಡಸ್ಟ್ರಿಯ ಸಮಗ್ರ ಡಿಜಿಟಲೀಕರಣವನ್ನು ಕಾಣಬಹುದು.
ಯಾವುದೇ ದೇಶದ ಎಕಾನಮಿ ಸುಧಾರಿಸಿದರೆ, ಬಡತನ ನಿವಾರಣೆಯ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರ್ಥಿಕ ಚಟುವಟಿಕೆ ಅಭಿವೃದ್ಧಿಯಾದಾಗ ಸರಕಾರಕ್ಕೆ ತೆರಿಗೆ ಆದಾಯ ಹೆಚ್ಚುತ್ತದೆ. ರಸ್ತೆ, ರೈಲು, ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯಗಳಿಗೆ ಹೆಚ್ಚು ಹೂಡಿಕೆ ಮಾಡುತ್ತದೆ. ಇದು ಮತ್ತಷ್ಟು ಖಾಸಗಿ ಬಂಡವಾಳ ಹೂಡಿಕೆಯನ್ನೂ ಆಕರ್ಷಿಸುತ್ತದೆ. ದೇಶ-ವಿದೇಶಗಳ ಕಂಪನಿಗಳು ಇನ್ವೆಸ್ಟ್ ಮಾಡುತ್ತವೆ. ಆಗ ಉಂಟಾಗುವ ಉದ್ಯೋಗ ಸೃಷ್ಟಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಎಲ್ಲಕ್ಕಿಂತ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇಂಥ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಗೆ 5G ಅಗತ್ಯ ಎನ್ನುತ್ತಾರೆ ತಜ್ಞರು.
ಅನನುಕೂಲಗಳೇನು?
5ಜಿ ಸೇವೆಯು ಎಲ್ಲ ಕಡೆಗಳಲ್ಲಿ ಲಭ್ಯವಿಲ್ಲ. ಸದ್ಯಕ್ಕೆ ನಗರಗಳಲ್ಲಿ ಮಾತ್ರ ಹೆಚ್ಚಾಗಿ ಸಿಗಬಹುದು. ಆದ್ದರಿಂದ ಲಭ್ಯ ಇರುವ ಕಡೆಗಳಲ್ಲಿ ಮಾತ್ರ ಬಳಸಬಹುದು. ಗ್ರಾಮೀಣ ಭಾಗದಲ್ಲಿ 4ಜಿಯನ್ನೇ ಬಳಸಬೇಕಾಗುತ್ತದೆ. ಎತ್ತರದ ಕಟ್ಟಡ, ಮರಗಳು ಇರುವ ಕಡೆಗಳಲ್ಲಿ 5ಜಿ ನೆಟ್ ವರ್ಕ್‌ಗೆ ಅಡೆತಡೆಗಳು ಉಂಟಾಗಬಹುದು. ಮಳೆ ಕೂಡ ೫ಜಿ ಕವರೇಜ್‌ಗೆ ಅಡ್ಡಿಪಡಿಸಬಹುದು. 5ಜಿ ಬಳಕೆಯಿಂದ ಸ್ಮಾರ್ಟ್ ಫೋನ್ ಬ್ಯಾಟರಿ ಮೇಲೆ ತೊಂದರೆಯಾಗದಂತೆ ಉತ್ಪಾದಕರು ನಿಗಾ ವಹಿಸಬೇಕಾಗುತ್ತದೆ.ಹಾಗೇ ಮೊಬೈಲ್ ಬಿಲ್ ದರದಲ್ಲೂ ಶೇ.20ರಷ್ಟು ಏರಿಕೆಯಾಗಬಹುದು.
3ಜಿ, 4ಜಿ ಕತೆ ಏನು?
5ಜಿ ಸೇವೆ ಬಂದಾಕ್ಷಣ ಈಗಿರುವ 3ಜಿ, 4ಜಿ ಕೊನೆಯಾಗುವುದಿಲ್ಲ. ಇನ್ನೂ 10ವರ್ಷಗಳ ಕಾಲ 4ಜಿ ಇದ್ದೇ ಇರುತ್ತದೆ. 3 ಜಿ ಅದಕ್ಕಿಂತ ಮೊದಲು ಮುಕ್ತಾಯವಾಗಬಹುದಾದರೂ ಏಕಾಏಕಿ ಅದನ್ನು ನಿಲ್ಲಿಸುವುದಿಲ್ಲ. 5ಜಿ ಬಂದಾಕ್ಷಣ ನಿಮ್ಮ ಸ್ಮಾರ್ಟ್‌ಫೋನ್ ಕೂಡ ಬೇರೆ ಮಾಡಬೇಕೆಂದೇನೂ ಇಲ್ಲ.
5 ಜಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಈ ೫ಜಿ ನೆಟ್‌ವರ್ಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. 5ಜಿ ನೆಟ್‌ವರ್ಕ್‌ನಲ್ಲಿ ಒಂದು ಮೊಬೈಲ್ ನೆಟ್ ವರ್ಕ್ ಅನ್ನು ಸೆಲ್‌ಗಳಾಗಿ (cell) ವಿಭಜಿಸಲಾಗುತ್ತದೆ. ಪ್ರತಿಯೊಂದು ಫೋನ್ ಕೂಡ ಒಂದು ಸೆಲ್ ಜತೆ ಸಂಪರ್ಕ ವನ್ನು ಹೊಂದಿರುತ್ತದೆ ಮತ್ತು ಪ್ರತಿಯೊಂದು ಸೆಲ್ ಕೂಡ ಒಂದು ಸೆಲ್ ಟವರ್ ( cell tower) ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸೆಲ್ ಟವರ್, ವೈರ್‌ಲೆಸ್ ಟ್ರಾನ್ಸಿವರ್ ಬೇಸ್ ಸ್ಟೇಶನ್ ಆಗಿರುತ್ತದೆ. ಈ ಬೇಸ್ ಸ್ಟೇಶನ್ ತನ್ನ ಸೆಲ್‌ನಲ್ಲಿರುವ ಎಲ್ಲ ಸಕ್ರಿಯ ಫೋನ್‌ಗಳಿಗೆ ವೈರ್‌ಲೆಸ್ ಸಂಪರ್ಕವನ್ನು ಒದಗಿಸುತ್ತದೆ. ವ್ಯಕ್ತಿಯೊಬ್ಬ ಕರೆ ಮಾಡುವಾಗ ರೇಡಿಯೊ ತರಂಗಳು ಸಮೀಪದ ಸೆಲ್ ಟವರ್ ಮೂಲಕ ಸಾಗಿ ವರ್ಗಾವಣೆಯಾಗುತ್ತದೆ.
೫ಜಿ ನೆಟ್‌ವರ್ಕ್ ತನ್ನ ವೈರ್‌ಲೆಸ್ ಡೇಟಾವನ್ನು ವರ್ಗಾಯಿಸಲು ಬಹುತೇಕ ೪ಜಿ ಮತ್ತು ೪ಜಿ ಎಲ್‌ಟಿಇ (long-term evolution network) ನೆಟ್‌ವರ್ಕ್ ಅನ್ನು ಅವಲಂಬಿಸಿದೆ. ಆದರೆ ೩ಜಿ-೪ಜಿಗೆ ಹೋಲಿಸಿದರೆ ಇದರ ವೇಗವು ಹೆಚ್ಚು. ಟೆಲಿಕಾಂ ಕಂಪನಿಗಳು ೫ಜಿಗೆ ಮಾತ್ರ ಮೀಸಲಾಗಿರುವ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಲು ಕಾರ್ಯಪ್ರವೃತ್ತವಾಗಿವೆ.
ಮಿಲ್ಲಿಮೀಟರ್ ವೇವ್ಸ್ (Millimeter waves) : ಮಿಲ್ಲಿಮೀಟರ್ ವೇವ್ಸ್ ಅಥವಾ ಹೈ-ಫ್ರೀಕ್ವೆನ್ಸಿ ರೇಡಿಯೋ ತರಂಗಗಳು ಮೊಬೈಲ್ ಫೋನ್‌ಗಳಿಗೆ ಗಿಗಾಬೈಟ್‌ಗೂ ಹೆಚ್ಚಿನ ಸ್ಪೀಡ್ ಅನ್ನು ಕಡಿಮೆ ಅವಧಿಯಲ್ಲಿ ನೀಡುತ್ತದೆ. ಬೀಮ್‌ಫೋರ್ಮಿಂಗ್ (Beamforming) ಟ್ರಾಫಿಕ್ ಸಿಗ್ನಲಿಂಗ್ ಸಿಸ್ಟಮ್, ಸೆಲ್ಯುಲಾರ್ ಬೇಸ್ ಸ್ಟೇಶನ್‌ಗಳಿಗೆ ವೈರ್‌ಲೆಸ್ ಸಿಗ್ನಲ್‌ಗಳನ್ನು ವೈಯಕ್ತಿಕ ಮೊಬೈಲ್ ಫೋನ್‌ಗಳಿಗೆ ವರ್ಗಾಯಿಸಲು ನೆರವಾಗುತ್ತದೆ. MIMO (multiple input, multiple output) ವ್ಯವಸ್ಥೆಯಲ್ಲಿ ವೈರ್‌ಲೆಸ್ ಡೇಟಾವನ್ನು ಹೆಚ್ಚಿನ ಕೆಪಾಸಿಟಿಯಲ್ಲಿ ವರ್ಗಾಯಿಸಲು ಸಾಧ್ಯವಾಗುತ್ತದೆ.
ಭಾರತದಲ್ಲಿ ಬೇಕು 8 ಲಕ್ಷ ಮೊಬೈಲ್ ಗೋಪುರಗಳು
೫ಜಿ ನೆಟ್ ವರ್ಕ್ ಅನ್ನು ದೇಶವ್ಯಾಪಿ ಸುಗಮವಾಗಿ ಜಾರಿಗೊಳಿಸಲು ಟೆಲಿಕಾಂ ಮೂಲ ಸೌಕರ್ಯ ಅಭಿವೃದ್ಧಿಯೂ ಅನಿವಾರ್ಯ. ಪ್ರಸ್ತುತ ಭಾರತದಲ್ಲಿ ೭ ಲಕ್ಷ ಟೆಲಿಕಾಂ ಟವರ್‌ಗಳಿವೆ. ಇದು ಜಗತ್ತಿನಲ್ಲಿಯೇ ಹೆಚ್ಚು. ಹೀಗಿದ್ದರೂ ಸಾಕಾಗುತ್ತಿಲ್ಲ. ತಜ್ಞರ ಪ್ರಕಾರ ೫ಜಿ ನೆಟ್ ವರ್ಕ್ ಎಲ್ಲ ಕಡೆ ಸುಗಮವಾಗಿ ಜಾರಿಯಾಗುವ ವೇಳೆಗೆ ಟೆಲಿಕಾಂ ಟವರ್‌ಗಳ ಸಂಖ್ಯೆ ಇಮ್ಮಡಿಯಾಗಲಿದೆ! ಅಂದರೆ ೨೦೨೩-೨೪ರ ವೇಳೆಗೆ ಟವರ್‌ಗಳ ಸಂಖ್ಯೆ ೧೫ ಲಕ್ಷ ಮೀರಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಮುಂದಿನ ೨ ವರ್ಷಗಳಲ್ಲಿ ಹೊಸತಾಗಿ ೮ ಲಕ್ಷ ಟೆಲಿಕಾಂ ಗೋಪುರಗಳ ಅಳವಡಿಕೆಗೆ ಅನುಮತಿ ನೀಡಿದೆ. ಪ್ರಧಾನಮಂತ್ರಿಯವರ ಕಚೇರಿ (ಪಿಎಂಒ) ಜತೆಗೆ ಈ ಸಂಬಂಧ ಚರ್ಚಿಸಲಾಗಿದೆ.
ಟೆಲಿಕಾಂ ಗೋಪುರಗಳ ಫೈಬರೀಕರಣ (fiberisation) ಕೂಡ ನಡೆಯಬೇಕಿದೆ. ಸದ್ಯಕ್ಕೆ ೩೦% ಮಾತ್ರ ಫೈಬರೀಕರಣವಾಗಿದೆ. ೫ಜಿಯ ಸುಗಮ ಜಾರಿಗೆ ಇದನ್ನು ೮೦% ತನಕ ಏರಿಸಬೇಕು. ಟೆಲಿಕಾಂ ಗೋಪುರಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಪರಸ್ಪರ ಸಂಪರ್ಕಿಸುವ ಕೆಲಸಕ್ಕೆ ಫೈಬರೀಕರಣ ಎನ್ನುತ್ತಾರೆ.
ಇದನ್ನೂ ಓದಿ: ವಿಸ್ತಾರ 5G Info | ರಿಲಯನ್ಸ್ 5ಜಿ ಸ್ಮಾರ್ಟ್‌ಫೋನ್ 8-12 ಸಾವಿರ ರೂ.ಗೆ ಲಭಿಸುವ ನಿರೀಕ್ಷೆ
ವಿಸ್ತಾರ 5G Info | ನಿಮ್ಮ ನೆಚ್ಚಿನ ಸಿನಿಮಾ ಡೌನ್‌ಲೋಡ್‌ಗೆ 4ಜಿಗೆ 40 ನಿಮಿಷವಾದರೆ, 5ಜಿಗೆ 35 ಸೆಕೆಂಡ್ ಸಾಕು!
ವಿಸ್ತಾರ 5G Info| 5G ಎಂದರೆ ಸ್ಪೀಡ್ ಮಾತ್ರವಲ್ಲ, ಪ್ರಯೋಜನ ಸಾರ್ವತ್ರಿಕ
5 G
BSNL 5G : ಗ್ರಾಹಕರಿಗೆ ಸಿಹಿ ಸುದ್ದಿ, ವರ್ಷಾಂತ್ಯಕ್ಕೆ ದೇಶಾದ್ಯಂತ ಸಿಗಲಿದೆ ಬಿಎಸ್ಸೆನ್ನೆಲ್ 5ಜಿ
ನವ ದೆಹಲಿ: ಬಿಎಸ್ಸೆನ್ನೆಲ್‌ನ (BSNL 5G) 4ಜಿ ನೆಟ್ ವರ್ಕ್ 2023ರ ವರ್ಷಾಂತ್ಯದ ವೇಳೆಗೆ 5ಜಿಗೆ ಮೇಲ್ದರ್ಜೆಗೇರಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. (BSNL 5G) ಕಂಪನಿಯು ಪಂಜಾಬ್-ಫಿರೋಜ್‌ಪುರ್, ಪಠಾಣ್ ಕೋಟ್ ಮತ್ತು ಅಮೃತ್‌ಸರದಲ್ಲಿ 200 ಟವರ್‌ಗಳ ಸ್ಥಳಗಳಲ್ಲಿ 4ಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯಲಿದೆ. ಬಳಿಕ ದಿನಕ್ಕೆ 200 ಸೈಟ್ಸ್‌ಗಳ ಲೆಕ್ಕದಲ್ಲಿ 4ಜಿ ನೆಟ್ ವರ್ಕ್ ವಿಸ್ತರಣೆಯಾಗಲಿದೆ. ಹಾಗೂ ನವೆಂಬರ್-ಡಿಸೆಂಬರ್ ವೇಳೆಗೆ 5ಜಿಗೆ ಅಪ್‌ಗ್ರೇಡ್ ಆಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬಿಎಸ್ಸೆನ್ನೆಲ್ ಈಗಾಗಲೇ ಟಿಸಿಎಸ್ ಮತ್ತು ಐಟಿಐ ಲಿಮಿಟೆಡ್ ಜತೆಗೆ 4ಜಿ ನೆಟ್ ವರ್ಕ್ ಅಳವಡಿಕೆಗೆ ಸಂಬಂಧಿಸಿ 19,000 ಕೋಟಿ ರೂ.ಗಳ ಖರೀದಿ ಆರ್ಡರ್‌ಗೆ ಮುಂಗಡವನ್ನು ನೀಡಿದೆ (advance purchase order) ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬಿಎಸ್ಸೆನ್ನೆಲ್ ನೆಟ್ ವರ್ಕ್ ಆರಂಭದಲ್ಲಿ 4ಜಿಯಲ್ಲಿ ಇರಲಿದೆ. ಬಳಿಕ ನವೆಂಬರ್-ಡಿಸೆಂಬರ್ ವೇಳೆಗೆ ಸಾಫ್ಟ್‌ವೇರ್‌ನಲ್ಲಿ ಸಣ್ಣ ಬದಲಾವಣೆಯೊಂದಿಗೆ 5ಜಿಗೆ ಅಪ್‌ಡೇಟ್ ಆಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.
ಅಮೆರಿಕಕ್ಕೆ ಭಾರತದ ಟೆಲಿಕಾಂ ತಂತ್ರಜ್ಞಾನ ರಫ್ತು:
ಭಾರತದ ಟೆಲಿಕಾಂ ತಂತ್ರಜ್ಞಾನವನ್ನು ಅಮೆರಿಕಕ್ಕೂ ಈಗ ರಫ್ತು ಮಾಡಲಾಗುತ್ತಿದೆ. 18 ದೇಶಗಳು ಭಾರತದ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ಅಳವಡಿಸಲು ಉತ್ಸುಕವಾಗಿವೆ. ದೇಶ ದೂರಸಂಪರ್ಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇದನ್ನೂ ಓದಿ: BSNL OTT : ಬಿಎಸ್ಸೆನ್ನೆಲ್‌ನಿಂದ OTT ಸೇವೆ ಸಿನಿಮಾಪ್ಲಸ್ ಆರಂಭ
5 G
Jio True 5G | ಜಿಯೋದಿಂದ ಹೊಸ ವರ್ಷದ ಕೊಡುಗೆ; ಮೈಸೂರಿನಲ್ಲಿ ಟ್ರೂ 5ಜಿ ಸೇವೆ ಪ್ರಾರಂಭ
ದೇಶದ ವಿವಿಧ ನಗರಗಳಲ್ಲಿ 5ಜಿ ಸೇವಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇದೀಗ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆಯನ್ನು ಆರಂಭಿಸಿದೆ.
ಮೈಸೂರು: ರಿಲಯನ್ಸ್ ಜಿಯೋ ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ (Jio True 5G) ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.
ಬುಧವಾರದಿಂದಲೇ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.
“ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ. “ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ | Jio True 5G | ಮಹಾಕಾಲ ಮಹಾಲೋಕ, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಸೇವೆ
5 G
5G Service Launch | ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ಲಭ್ಯ ಇದೆಯಾ?
ಭಾರತದಲ್ಲಿ 5ಜಿ ಸೇವೆಗೆ (5G Service Launch) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಈ ಸೇವೆ ದೊರೆಯಲಿದೆ.
ನವ ದೆಹಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ಆರಂಭವಾಗಿರುವ ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನಲ್ಲಿ 5G ಸೇವೆ(5G Service Launch)ಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್ ಬಟನ್ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು. ಏತನ್ಮಧ್ಯೆ, ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲೂ 5ಜಿ ಸೇವೆ ದೊರೆಯಲಿದೆ. ಈ ಮೊದಲು ಬೆಂಗಳೂರು ಆರಂಭದಲ್ಲಿ ಈ ಸೇವೆ ದೊರೆಯುವಿುದಿಲ್ಲ ಎಂದು ಹೇಳಲಾಗುತ್ತಿತ್ತು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಬೆಂಗಳೂರು ಸೇರಿದಂತೆ ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಗೆ ಸಿಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲ ಕಡೆ 5ಜಿ ಸೇವ ದೊರೆಯಲಿದೆ. ಸದ್ಯಕ್ಕೆ ಬೆಂಗಳೂರು, ಚಂಡೀಗಢ, ಅಹ್ಮದಾಬಾದ್, ಗಾಂಧಿನಗರ, ಗುರುಗ್ರಾಮ್, ಹೈದ್ರಾಬಾದ್, ಜಾಮನಗರ್, ಚೆನ್ನೈ, ದಿಲ್ಲಿ, ಕೋಲ್ಕೊತಾ, ಮುಂಬೈ, ಪುಣೆ ಮತ್ತು ಲಖನೌ ನಗರಗಲ್ಲಿ 5ಜಿ ಸೇವೆ ದೊರೆಯಲಿದೆ.
ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಕಂಪನಿಗಳು ಈ 5ಜಿ ಸೇವೆಯನ್ನು ಒದಗಿಸಲಿವೆ. ಈಗಾಗಲೇ ಈ ಬಗ್ಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈ ಕಂಪನಿಗಳು ಮಾಡಿಕೊಂಡಿವೆ.
ಹೊಸ ಯುಗ ಆರಂಭ- ಮೋದಿ
5ಜಿ ಸಂಪರ್ಕದೊಂದಿಗೆ, ದೇಶದಲ್ಲಿ ಆಧುನಿಕತೆಯ ಹೊಸ ಯುಗವೊಂದು ಆರಂಭವಾಗಲಿದೆ. ಯುವಜನತೆಗೆ ನೂತನ ಅವಕಾಶಗಳು ತೆರೆದುಕೊಳ್ಳಲಿವೆ. ಶಕ್ತಿದೇವತೆಯನ್ನು ಪೂಜಿಸುವ ನವರಾತ್ರಿಯ ಶುಭಪರ್ವದ ಸಂದರ್ಭದಲ್ಲಿ ಶಕ್ತಿಯ ಇನ್ನೊಂದು ಮಾಧ್ಯಮವೆನಿಸಿದ 5G ದೇಶದ ಜನತೆಗೆ ಅರ್ಪಿಸುವುದಕ್ಕೆ ನನಗೆ ಆನಂದವೆನಿಸುತ್ತದೆ. ಇದೊಂದು ಐತಿಹಾಸಿಕ ದಿನ, ಕ್ಷಣ. ಭಾರತದ ಇದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ಜಗತ್ತಿಗೇ ಮಾದರಿಯನ್ನು ಕಲ್ಪಿಸಲಿದೆ ಎಂದು ನರೇಂದ್ರ ಮೋದಿ ಅವರು 5ಜಿ ಸೇವೆಯನ್ನು ಉದ್ಘಾಟಿಸಿ ಹೇಳಿದರು.
ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್ ಒದಗಿಸಿದಂತೆ ವಿದ್ಯುತ್ ಅವಲಂಬಿಸಿ ಮಾಡಬಹುದಾದ ಕೆಲಸಗಳು ಹಾಗೂ ಉಪಕರಣಗಳ ಮಾರುಕಟ್ಟೆಯೂ ವರ್ಧಿಸಿತು. ಹಾಗೆಯೇ 5G ಅವಂಬಿಸಿಯೂ ಜೀವನಶೈಲಿಯಲ್ಲಿ ದೊಡ್ಡ ಮಾರ್ಪಾಡು ಆಗಲಿದೆ. 5G ಎಂದರೆ ಕೇವಲ ಮನರಂಜನೆಯ ಹೆಚ್ಚಳ ಮಾತ್ರ ಆಗುವುದಿಲ್ಲ. ಅದು ಬಡವರೂ ಸೇರಿದಂತೆ ಎಲ್ಲ ವಲಯದ ಜೀವನವನ್ನು ಸುಧಾರಿಸಲಿದೆ. ನಾವು ನೇರ ಪಾವತಿ ಕಾರ್ಯಕ್ರಮವನ್ನು ಆರಂಭಿಸಿದಾಗ ತುಂಬಾ ಮಂದಿ ಅದರ ಪರಿಣಾಮಕಾರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜಗತ್ತಿನ ಬೇರೆ ಬೇರೆ ಮುಂದುವರಿದ ದೇಶಗಳು ಕೂಡ ಇದನ್ನು ಒದಗಿಸುವಲ್ಲಿ ಸೋತಿದ್ದವು. ಆದರೆ ಭಾರತ ಅದನ್ನು ಒಂದೇ ಕ್ಲಿಕ್‌ನಲ್ಲಿ ಸಾಧಿಸಬಹುದು ಎಂಬುದನ್ನು ತೋರಿಸಿತು. 5G ವಿಷಯದಲ್ಲೂ ಹೀಗೇ ಆಗಲಿದೆ ಎಂದರು.
ಇಂದು ನಾವು ಆತ್ಮನಿರ್ಭರ ಭಾರತ, ಡಿಜಿಟಲ್ ಭಾರತ ಆಗಿದ್ದೇವೆ. ಸರ್ಕಾರ ಸರಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು ಎಂದು ತೋರಿಸಿದ್ದೇವೆ. ಇದೇ 2G ನಿಯತ್ತಿಗೂ 5G ನಿಯತ್ತಿಗೂ ಇರುವ ವ್ಯತ್ಯಾಸ ಎಂದು ಪ್ರಧಾನಿ ಯುಪಿಎ ಸರ್ಕಾರದ ʻ2G ಹಗರಣʼಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ | 5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್ ಕ್ರಾಂತಿ? ಏನಿದರ ಅನುಕೂಲ?
5 G
5G Services launch | 2023ರ ಡಿಸೆಂಬರ್ ಒಳಗೆ ಪ್ರತಿ ಗ್ರಾಮಕ್ಕೂ 5G ಸೇವೆ: ಮುಖೇಶ್ ಅಂಬಾನಿ
2023ರ ಡಿಸೆಂಬರ್ ಒಳಗೆ ದೇಶದ ಪ್ರತಿ ಗ್ರಾಮವನ್ನೂ 5G ಮೂಲಕ ತಲುಪಲಿದ್ದೇವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಚೇರ್‌ಮನ್ ಮುಖೇಶ್ ಅಂಬಾನಿ ಹೇಳಿದ್ದಾರೆ.
ನವ ದೆಹಲಿ: 5G ನಾಯಕತ್ವಕ್ಕೆ ನಾವು ಸಜ್ಜಾಗಿದ್ದೇವೆ. 2023ರ ಡಿಸೆಂಬರ್ ಒಳಗೆ ದೇಶದ ಪ್ರತಿ ಗ್ರಾಮವನ್ನೂ 5G ಸೇವೆ ತಲುಪಲಿದೆ ಎಂದು ರಿಲಯನ್ಸ್ ಜಿಯೊ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. 5G ಸೇವೆಗಳ ಉದ್ಘಾಟನೆ ಸಂದರ್ಭದಲ್ಲಿ ಅವರು ಈ ಮುನ್ನೋಟ ನೀಡಿದರು.
5Gಗೆ ಚಾಲನೆ ನೀಡುತ್ತಿರುವುದು ತುಂಬಾ ಹೆಮ್ಮೆಯ ಕ್ಷಣ. 5G ಎಂಬುದು ಮುಂದಿನ ಪೀಳಿಗೆಯ ಸಂಪರ್ಕ ತಂತ್ರಜ್ಞಾನ ಎಂಬುದಕ್ಕಿಂತಲೂ ಹೆಚ್ಚಿನದು. ನನ್ನ ಅಭಿಪ್ರಾಯದಲ್ಲಿ ಇದು ಕೃತಕ ಬುದ್ಧಿಮತ್ತೆ, ವಸ್ತುಗಳ ಇಂಟರ್ನೆಟ್, ರೊಬೊಟಿಕ್ಸ್, ಬ್ಲಾಕ್‌ಚೈನ್ ಮತ್ತು ಮೆಟಾವರ್ಸ್‌ನಂತಹ 21ನೇ ಶತಮಾನದ ಇತರ ತಂತ್ರಜ್ಞಾನಗಳ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡುವ ಅಡಿಪಾಯದ ತಂತ್ರಜ್ಞಾನ. ಇದಕ್ಕಾಗಿ ಟೆಲಿಕಾಂ ವಲಯದಲ್ಲಿ ನಾಯಕತ್ವವನ್ನು ವಹಿಸಲು ನಾವು ಸಿದ್ಧರಿದ್ದೇವೆ. 5G ಡಿಜಿಟಲ್ ಕಾಮಧೇನು ಇದ್ದಂತೆ. ನಾವು ತಡವಾಗಿ ಆರಂಭಿಸಿರಬಹುದು, ಆದರೆ ಎಲ್ಲರಿಗಿಂತ ಮೊದಲು ಮುಗಿಸಲಿದ್ದೇವೆ. ಭಾರತೀಯ ಟೆಲಿಕಾಂ ಸಮಾವೇಶ ಮುಂದಿನ ದಿನಗಳಲ್ಲಿ ಏಷ್ಯಾದ ಟೆಲಿಕಾಂ ಕಾಂಗ್ರೆಸ್ ಅಥವಾ ಜಾಗತಿಕ ಟೆಲಿಕಾಂ ಕಾಂಗ್ರೆಸ್ ಎನಿಸಲಿದೆ ಎಂದು ಮುಖೇಶ್ ಅಂಬಾನಿ ನುಡಿದರು.
ಇಂದು ಭಾರತೀಯ ಟೆಲಿಕಾಂ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವ ಕ್ಷಣ. ಇದು ಡಿಜಿಟಲ್ ಇಂಡಿಯಾದ ಮಹಾದ್ವಾರವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತೀವ್ರ ವೇಗದ ಡಿಜಿಟಲ್ ಸೇವೆಗಳನ್ನು ತಲುಪಿಸುವ ವಿಧಾನವಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇದೊಂದು ಮಹತ್ವದ ದಿನ. ಹೊಸ ಯುಗ ಪ್ರಾರಂಭವಾಗಲಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆರಂಭವಾಗುತ್ತಿರುವ ಈ ಸೇವೆ ದೇಶದಲ್ಲಿ ಹೊಸ ಜಾಗೃತಿ ಉಂಟುಮಾಡಲಿದ್ದು, ಜನರಿಗೆ ಹಲವಾರು ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಏರ್‌ಟೆಲ್‌ನ ಸುನಿಲ್ ಭಾರ್ತಿ ಮಿತ್ತಲ್ ಹೇಳಿದರು. ದೇಶದ 130 ಕೋಟಿ ಭಾರತೀಯರ ಹಾಗೂ ಸಾವಿರಾರು ಉದ್ಯಮಿಗಳು ಡಿಜಿಟಲ್ ಕನಸನ್ನು ಸಾಕಾರ ಮಾಡಲು ಟೆಲಿಕಾಂ ಉದ್ಯಮ ಸಜ್ಜಾಗಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್ (ವೊಡಾಫೋನ್)ನ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಹೇಳಿದರು.
ಇದನ್ನೂ ಓದಿ | 5G Services Launch | ದೇಶದಲ್ಲಿ ಅಂತರ್ಜಾಲದ ಹೊಸ ಯುಗ: ಸೇವೆ ಉದ್ಘಾಟಿಸಿ ಮೋದಿ ಭರವಸೆ
-
ವಿದೇಶ11 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಸುವಚನ20 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
PSI Scam : ಪಿಎಸ್‌ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ಅಂಕಣ11 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ9 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಕರ್ನಾಟಕ4 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema7 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಕರ್ನಾಟಕ15 hours ago
BJP-JDS Alliance: ಬಿಜೆಪಿ- ಜೆಡಿಎಸ್ ಮೈತ್ರಿ; ಮುಸ್ಲಿಂ ನಾಯಕರು ಜೆಡಿಎಸ್ಗೆ ಗುಡ್ಬೈ?