ಕೋಲ್ಕೊತಾ: ಇಡೀ ದೇಶದಲ್ಲಿ ರಾಜ್ಯಪಾಲರು ಸರಕಾರಿ ವಿಶ್ವ ವಿದ್ಯಾಲಯಗಳಿಗೆ ರಾಜ್ಯಪಾಲರುಗಳೇ ಕುಲಾಧಿಪತಿ. ಆದರೆ, ಪಶ್ಚಿಮ ಬಂಗಾಳದಲ್ಲಿ ಈ ನಿಯಮವನ್ನು ಮುರಿದು ಮುಖ್ಯಮಂತ್ರಿಗಳೇ ಕುಲಾಧಿಪತಿಗಳಾಗಿ ಕಾರ್ಯಭಾರ ನಡೆಸುವ ಹೊಸ ನಿಯಮವನ್ನು ಜಾರಿಗೆ ತರಲು ಸಿಎಂ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಇದರ ಭಾಗವಾಗಿ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಈ ಸಂಬಂಧ ವಿಧೇಯಕವನ್ನು ಮಂಡಿಸಲಾಗಿದ್ದು, 182 ಮಂದಿ ಇದರ ಪರವಾಗಿ ಮತ ಹಾಕಿದರೆ, ಪ್ರತಿಪಕ್ಷಕ್ಕೆ ಸೇರಿದ 40 ಮಂದಿ ವಿರೋಧಿಸಿದರು.
ಮಮತಾ ಬ್ಯಾನರ್ಜಿ ಸರಕಾರದ ಈ ತೀರ್ಮಾನ ಭಾರಿ ಚರ್ಚೆಗೆ ಕಾರಣವಾಗಿದ್ದು, ರಾಜ್ಯ ಸರಕಾರವೊಂದು ಬಹುಮತದ ಆಧಾರದಲ್ಲಿ ಈ ರೀತಿಯ ತೀರ್ಮಾನ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಕೇಳಿಬಂದಿದೆ. ಬಿಜೆಪಿ ಕೂಡಾ ಈ ಪ್ರಶ್ನೆಯನ್ನು ಮುಂದಿಟ್ಟಿದ್ದು, ಶಿಕ್ಷಣ ಎನ್ನುವುದು ರಾಜ್ಯ ಮತ್ತು ಕೇಂದ್ರಗಳ ಸಮವರ್ತಿ ಪಟ್ಟಿಗೆ ಬರುವುದರಿಂದ ಕೇಂದ್ರ ಸರಕಾರವನ್ನು ಕೇಳದೆ ರಾಜ್ಯಪಾಲರು ವಿಧೇಯಕಕ್ಕೆ ಅನುಮತಿ ನೀಡಲಾರರು ಎಂದು ಅಭಿಪ್ರಾಯಪಟ್ಟಿದೆ.
ಏಳು ಶಾಸಕರ ಅಮಾನತು
ಅದಕ್ಕಿಂತ ಮೊದಲು ಬಿಜೆಪಿಯ ಕೆಲವು ಶಾಸಕರು ಸದನದ ಹೊರಗಡೆ ಪ್ರತಿಭಟನೆ ನಡೆಸಿದರು. ಬಳಿಕ ಶಿಸ್ತುಕ್ರಮವಾಗಿ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಏಳು ಶಾಸಕರನ್ನು ಕಲಾಪದಲ್ಲಿ ಭಾಗವಹಿಸುವುದರಿಂದ ನಿರ್ಬಂಧಿಸಲಾಯಿತು.
ʻʻಸರಕಾರ ಈ ವಿಧೇಯಕವನ್ನು ಹೇಗೆ ಅಂಗೀಕರಿಸುತ್ತದೆ ಎಂದು ನಾವೂ ನೋಡುತ್ತೇವೆ. ಈಗ ನಾವು ಹೊರಗೆ ಕುಳಿತಿರಬಹುದು. ಸದನದಲ್ಲಿ ಚರ್ಚೆಗೆ ಬಂದಾಗ ಅದರ ಮಾನ್ಯತೆಯನ್ನು ಪ್ರಶ್ನೆ ಮಾಡುತ್ತೇವೆ. ಒಂದೊಮ್ಮೆ ಟಿಎಂಸಿ ಸರಕಾರ ತನ್ನ ಬಹುಮತದ ಆಧಾರದಲ್ಲಿ ವಿಧೇಯಕವನ್ನು ಅಂಗೀಕರಿಸಿದರೂ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ಕೊಡುವುದಿಲ್ಲ. ಯಾಕೆಂದರೆ, ಶಿಕ್ಷಣ ಎನ್ನುವುದು ಕೇಂದ್ರ ಮತ್ತು ರಾಜ್ಯಗಳ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ,ʼʼ ಎಂದು ಸುವೇಂದು ಅಧಿಕಾರಿ ಹೇಳಿದರು.
ಸುಗ್ರೀವಾಜ್ಞೆ ದಾರಿ
ಒಂದೊಮ್ಮೆ ಕುಲಾಧಿಪತಿ ಸ್ಥಾನವನ್ನು ಸಿಎಂಗೆ ವಹಿಸಿದರೆ ಈ ರೀತಿ ಮಾಡುವ ಮೊದಲ ರಾಜ್ಯವಾಗಲಿದೆ ಪಶ್ಚಿಮ ಬಂಗಾಳ. ಒಂದೊಮ್ಮೆ ರಾಜ್ಯಪಾಲರು ಈ ವಿಧೇಯಕವನ್ನು ಧಿಕ್ಕರಿಸಿದರೆ ಸರಕಾರ ಸುಗ್ರೀವಾಜ್ಞೆಯ ಮೂಲಕ ಅದನ್ನು ಜಾರಿಗೊಳಿಸಲು ಪ್ರಯತ್ನಿಸಲಿದೆ ಎನ್ನಲಾಗಿದೆ. ಆದರೆ, ಇದಕ್ಕೂ ಒಪ್ಪಿಗೆ ನೀಡಬೇಕಾದವರು ರಾಜ್ಯಪಾಲರೆ.
ತಮಿಳುನಾಡು, ಗುಜರಾತ್‌ನಲ್ಲಿ
ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಸರಕಾರಿ ವಿವಿಗಳಿಗೆ ಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ಸರಕಾರವೇ ವಹಿಸಿಕೊಳ್ಳುವ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಗುಜರಾತ್‌ನಲ್ಲಿ 2015ರಲ್ಲಿ ಮತ್ತು ತಮಿಳುನಾಡಿನಲ್ಲಿ ಈ ವರ್ಷ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಇಲ್ಲಿ ಕುಲಾಧಿಪತಿ ರಾಜ್ಯಪಾಲರೇ ಅಗಿರುತ್ತಾರೆ.
ಹಗರಣ ಮುಚ್ಚಿ ಹಾಕುವ ತಂತ್ರವೇ?
ಈ ನಡುವೆ ರಾಜ್ಯಪಾಲ ಜಗದೀಪ್ ಧನಕರ್ ಅವರು ಇದು ನೇಮಕಾತಿ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನಡೆಸುತ್ತಿರುವ ತಂತ್ರ ಇದು ಎಂದು ವ್ಯಾಖ್ಯಾನಿಸಿದ್ದಾರೆ. ಎಲ್ಲ ಹಗರಣಗಳ ತಾಯಿಯಂತಿರುವ ಈ ವಿವಾದದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋಲ್ಕೊತಾ ಹೈಕೋರ್ಟ್ ಆದೇಶ ನೀಡಿದೆ. ʻʻರಾಜ್ಯ ಸರಕಾರ ಈ ವಿಧೇಯಕವನ್ನು ಅಷ್ಟು ಸುಲಭದಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ. ಯಾರೇ ಕುಲಾಧಿಪತಿ ಆದರೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ ಹಾಕಿದರೂ ಆ ಫೈಲು ನನ್ನ ಬಳಿಗೇ ಬರಬೇಕುʼʼ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ| ಕೇಸರಿ ಪಡೆ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿ: ಬಿಜೆಪಿಯೇತರ ಸಿಎಂಗಳಿಗೆ ದೀದಿ ಪತ್ರ