Site icon Vistara News

Bhagat Singh Birthday: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಜ್ವಾಲೆ ಭಗತ್ ಸಿಂಗ್

bhagat singh birthday

:: ಮಯೂರಲಕ್ಷ್ಮೀ

ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಸೋತು ಸೊರಗಿದ್ದ ಭಾರತೀಯರಿಗೆ ಹಲವು ಉತ್ಸಾಹೀ ಕ್ರಾಂತಿಕಾರಿ ಯುವಕರು ಭರವಸೆ ಮೂಡಿಸಿದರು. ಅವರ ಧ್ಯೇಯ ಸ್ವತಂತ್ರ ಭಾರತ ಮತ್ತು ಸಂಪೂರ್ಣ ಸ್ವರಾಜ್ಯದ ಪರಿಕಲ್ಪನೆ. ತಮ್ಮದೇ ಕಾನೂನುಗಳಿಂದ ಭಾರತೀಯರ ಮೇಲೆ ದೌರ್ಜನ್ಯವೆಸಗುತ್ತಿದ್ದ ಬ್ರಿಟಿಷರಿಗೆ ತಕ್ಕ ಉತ್ತರ ನೀಡಲು ಅವರು ಸಿದ್ಧವಾದರು. ಸಂಗ್ರಾಮದ ಕ್ರಾಂತಿಯ ಕಿಡಿ ಬೃಹತ್ ಜ್ವಾಲೆಯಾಗಲು ಕಾರಣ ಯುವ ನಾಯಕ ಸರ್ದಾರ್ ಭಗತ್ ಸಿಂಗ್ (Bhagat singh).

28 ಸೆಪ್ಟೆಂಬರ್, 1907ರಂದು ಪಂಜಾಬಿನ ಲ್ಯಾಲಾಪುರ್ ಜಿಲ್ಲೆಯ “ಬಾಂಗಾ” ಎಂಬ ಹಳ್ಳಿಯಲ್ಲಿ ಸಿಖ್ ಸರ್ದಾರ್ ಪರಿವಾರದಲ್ಲಿ ಜನಿಸಿದವರು ಭಗತ್ ಸಿಂಗ್. ಅವರ ಹಿರಿಯರು ಭಾರತದ “ಗದಾರ್” ಪಕ್ಷದಲ್ಲಿ ಕ್ರಾಂತಿಕಾರೀ ಹೋರಾಟಗಾರರಾಗಿದ್ದರು. ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ. ಭಗತ್ ತಂದೆ ಕಿಶನ್ ಸಿಂಗ್ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಕಿಶನ್ ಸಿಂಗ್ ಸಹೋದರ ಸ್ವರ್ಣ ಸಿಂಗ್‍ರವರು ಬ್ರಿಟಿಷರಿಂದ ಸೆರೆಮನೆಯಲ್ಲಿ ಮೃತಪಟ್ಟಿದ್ದರು.

ಬಾಲ್ಯದಿಂದಲೇ ದೇಶಭಕ್ತರಾಗಿದ್ದ ಭಗತ್ ಆಂಗ್ಲರ ಶಿಕ್ಷಣವನ್ನು ತಿರಸ್ಕರಿಸಿ ಆರ್ಯ ಸಮಾಜದ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಪಡೆದು ಲಾಲಾ ಲಜಪತ್ ರಾಯರ ಕಾಲೇಜಿನ ವಿದ್ಯಾರ್ಥಿಯಾದರು. ನಾಟಕ ಪ್ರಾತ್ಯಕ್ಷಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ, ಅತ್ಯುತ್ತಮ ವಾಗ್ಮಿಯಾಗಿದ್ದರು. ನೂರಾರು ಸ್ವಾತಂತ್ರ್ಯ ಗೀತೆಗಳನ್ನೂ ರಚಿಸಿ ಹಾಡುತ್ತಿದ್ದರು. ಗಾಂಧೀಜಿಯವರೊಂದಿಗೆ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಸ್ಫೂರ್ತಿ ಪಡೆದರು. ಸಂಘಟನೆಯನ್ನು ಬಲಿಷ್ಠಗೊಳಿಸಲು ಮುಂದೆ ಸ್ವಗೃಹವನ್ನೂ ತೊರೆದು ಕ್ರಾಂತಿಕಾರಿಗಳ ಹೆಚ್.ಎಸ್.ಆರ್.ಏ ಸಂಘಟನೆಯನ್ನು ಸೇರಿದರು.

ಸೈಮನ್ ಕಮಿಷನ್ ಆಗಮನವನ್ನು ಪ್ರತಿಭಟಿಸುತ್ತಿದ್ದ ಲಾಲಾ ಲಜಪತ್ ರಾಯ್ ಅವರ ಮೇಲೆ ಬ್ರಿಟಿಷ್ ಪೋಲೀಸರು ಹಲ್ಲೆ ಮಾಡಿದರು. ಮಾರಣಾಂತಿಕ ಪ್ರಹಾರದಿಂದ ಲಾಲಾರವರು ಅಸು ನೀಗಿದರು. ತಮ್ಮ ನಾಯಕರನ್ನು ಕಳೆದುಕೊಂಡ ಭಗತ್ ಮತ್ತು ಸ್ನೇಹಿತರು ಬ್ರಿಟಿಷರನ್ನು ಅಂತ್ಯಗೊಳಿಸುವ ಪ್ರತಿಜ್ಞೆ ಮಾಡಿದರು.

ಭಗತ್ ಸಿಂಗ್ ಆಜಾದ್, ರಾಜಗುರು, ಸುಖದೇವ್ ಮತ್ತು ಸ್ನೇಹಿತರು ಪೋಲೀಸ್ ಆಫೀಸರ್ ಸ್ಯಾಂಡರ್ಸ್‍ನನ್ನು ಅಂತ್ಯಗೊಳಿಸುವ ಯೋಜನೆ ಹೂಡಿದರು. ಡಿಸೆಂಬರ್ 17, 1928ರಂದು ಲಾಹೋರಿನ ಡಿ.ಏ.ವಿ ಕಾಲೇಜಿನ ಆವರಣದಲ್ಲಿ ಸ್ಯಾಂಡರ್ಸ್ ಎಂದಿನಂತೆ ಮೋಟಾರ್ ಬೈಕಿನಲ್ಲಿ ಬಂದಿಳಿದ. ರಾಜಗುರು ರಿವಾಲ್ವರಿನಿಂದ ಗುಂಡು ಹಾರಿಸಿದ ಕೂಡಲೇ ಭಗತ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಸ್ಯಾಂಡರ್ಸ್ ತಲೆಗೆ ಗುಂಡು ಹಾರಿಸಿದರು. ಗುರಿ ತಪ್ಪಲಿಲ್ಲ. ಕ್ಷಣದಲ್ಲೇ ಸ್ಯಾಂಡರ್ಸ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದ. ಕ್ರಾಂತಿಕಾರಿಗಳ ಸೇನೆಯ ಮೊದಲ ಗೆಲುವಾಗಿತ್ತು. ತಮ್ಮ ಯೋಜನೆಗಳು ನೆರವೇರುವವರೆಗೂ ಅವರು ಪೋಲೀಸರ ಕಣ್ಣು ತಪ್ಪಿಸಿ ವೇಷ ಮರೆಸಿಕೊಂಡು ಓಡಾಡತೊಡಗಿದರು. ರಹಸ್ಯವಾಗಿ ನಡೆಯುತ್ತಿದ್ದ ಬಾಂಬ್ ತಯಾರಿ ಯಶಸ್ವಿಯಾಯಿತು.

ಏಪ್ರಿಲ್ 8, 1929. ಸೆಂಟ್ರಲ್ ಅಸೆಂಬ್ಲಿ ಹಾಲ್‍ನಲ್ಲಿ ಸರಕಾರದ ಮುಂದಿನ ನಿರ್ಧಾರಗಳನ್ನು ಕುರಿತು ಅಧಿವೇಶನ ನಡೆಯುತ್ತಿತ್ತು. ಭಗತ್ ಮತ್ತು ಸ್ನೇಹಿತ ಬ್ರತುಕೇಶ್ವರದತ್ ಸಂಸತ್ ತಲುಪಿ ವೀಕ್ಷಕರ ಆಸನಗಳಲ್ಲಿ ಕುಳಿತಿದ್ದರು. ಭಾಷಣ ಮುಕ್ತಾಯವಾದೊಡನೆ ಸ್ಪೀಕರ್ ಕುಳಿತಿದ್ದ ಸ್ಥಾನದ ಹಿಂದಿನ ಗೋಡೆಯ ಮೇಲೆ ಸರಿಯಾಗಿ ಗುರಿಯಿಟ್ಟು ಬಾಂಬ್ ಎಸೆದರು. ಬೃಹತ್ ಸ್ಫೋಟವಾದರೂ ಯಾವುದೇ ಸಾವು-ನೋವುಗಳಾಗಲಿಲ್ಲ. “ಇನ್‍ಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಯೊಂದಿಗೆ ಅವರು ಶರಣಾದರು. ಕೂಡಲೇ ಪೋಲೀಸರು ಅವರನ್ನು ಬಂಧಿಸಿದರು. ಅವರನ್ನು ಸೆಂಟ್ರಲ್ ಜೈಲಿನಲ್ಲಿರಿಸಿದರು.

ಭಗತ್ ಜೈಲಿನಲ್ಲಿದ್ದೇ ನೂರಾರು ಕ್ರಾಂತಿಕಾರಿ ಲೇಖನಗಳನ್ನು ಕವನಗಳನ್ನು ಬರೆದರು. ಸೆರೆಯಲ್ಲಿದ್ದ ಭಾರತೀಯ ಕೈದಿಗಳನ್ನು ಅಮಾನುಷವಾಗಿ ಬ್ರಿಟಿಷರು ನಡೆಸಿಕೊಳ್ಳುತ್ತಿದ್ದ ರೀತಿಯನ್ನೂ ಕಂಡು ಕ್ರೋಧಗೊಂಡರು. ಸ್ನೇಹಿತ ಯತೀಂದ್ರನಾಥ್ ಚಿತ್ರಹಿಂಸೆ ಮತ್ತು ಉಪವಾಸದ ಪರಿಣಾಮವಾಗಿ ಸೆರೆಯಲ್ಲಿ ಮೃತರಾದರು. ಭಗತ್ ಸಿಂಗ್ ಮತ್ತವನ ಸಹಚರರು ಆಹಾರವನ್ನು ಸ್ವೀಕರಿಸದೆ ಸತ್ಯಾಗ್ರಹ ಮಾಡಿದರು. ಬ್ರಿಟಿಸರು ಸುಖದೇವ್ ಮತ್ತು ಇತರ ಕ್ರಾಂತಿಕಾರಿಗಳನ್ನೂ ಬಂಧಿಸಿ ಲಾಹೋರಿನ ಜೈಲಿನಲ್ಲಿಟ್ಟರು.

ವೈಸ್‍ರಾಯ್ ನೇತೃತ್ವದಲ್ಲಿ ವಿಚಾರಣೆಗಾಗಿ ವಿಶೇಷ ಟ್ರಿಬ್ಯುನಲ್ ನೇಮಿಸಲಾಯಿತು. ಭಗತ್ ಮತ್ತು ಸ್ನೇಹಿತ ಬತುಕೇಶ್ವರ ದತ್ತರ ವಿಚಾರಣೆ 7 ಮೇ, 1929ರಂದು ಆರಂಭವಾಯ್ತು. ತನ್ನ ಪರವಾಗಿ ತಾನೇ ವಾದಿಸಿದ ಭಗತ್ ವಿಚಾರಸರಣಗೆ ಎಲ್ಲರೂ ಬೆರಗಾದರು. ಬ್ರಿಟಿಷರ ದೌರ್ಜನ್ಯಗಳನ್ನೂ ಕಾನೂನುಗಳನ್ನು ವಿರೋಧಿಸಿದ ಭಗತ್ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಸಾರಿದರು. ಎಲ್ಲಾ ಪತ್ರಿಕೆಗಳಲ್ಲೂ ಭಗತ್ ಸಿಂಗ್ ಮಾತುಗಳು ಸುದ್ದಿಯಾಗತೊಡಗಿದವು. ಎಲ್ಲೆಡೆ ದೇಶದ ನೆಚ್ಚಿನ ಯುವಶಕ್ತಿಯ ಸಂಕೇತ ಭಗತ್ ಸಿಂಗ್ ಗುಣಗಾನ! ವಾದ-ಪ್ರತಿವಾದಗಳು ಮೇ 7ರಿಂದ ಆರಂಭವಾಗಿ ಅಕ್ಟೋಬರ್ 7ರವರೆಗೂ ಮುಂದುವರೆಯಿತು. ಭಗತ್ ವಾದಗಳೆಲ್ಲವೂ ತಿರಸ್ಕೃತಗೊಂಡವು. 400 ಪುಟಗಳನ್ನು ಹೊತ್ತಿದ್ದ ಟ್ರಿಬ್ಯುನಲ್ ವರದಿ ಸಿದ್ಧವಾಗಿತ್ತು. ಸ್ಯಾಂಡರ್ಸ್ ಕೊಲೆ ಮತ್ತು ಲಾಹೋರ್ ಕಾನೂನು ವಿರೋಧಿ ಕಾರ್ಯಾಚರಣೆಯ ಆಪಾದನೆ ಹೇರಲಾಗಿತ್ತು.

ಅನೇಕ ದಿನಗಳ ವಿಚಾರಣೆಗಳ ನಂತರ ಭಗತ್ ಸಿಂಗ್, ರಾಜ್‍ಗುರು ಮತ್ತು ಸುಖದೇವ್ ಅವರನ್ನು 24 ಮಾರ್ಚ್ 1931ರಂದು ಗಲ್ಲುಶಿಕ್ಷೆ ಎಂದು ತೀರ್ಪು ಬಂದಿತು. ತೀರ್ಪನ್ನು ಆಲಿಸಿದ ಭಗತ್ ಹೆದರಲಿಲ್ಲ. ಭಾರತಮಾತೆಗಾಗಿ ತನ್ನ ತ್ಯಾಗ ಮುಂದಿನ ಕ್ರಾಂತಿಯ ಸಂಕೇತವಾಗಲಿ ಎಂದರು.

ಅವಧಿಗೆ ಒಂದು ದಿನ ಹಿಂದೆ ಅಂದರೆ ಮಾರ್ಚ್ 23ರಂದೇ ಅವರನ್ನು ನೇಣುಗಂಬಕ್ಕೆ ಕರೆದೊಯ್ದರು. ಸಾಯುವ ಮುನ್ನ ಕೊನೆಯ ಆಸೆಯಂತೆ “ಇನ್‍ಕ್ವಿಲಾಬ್ ಜಿಂದಾಬಾದ್” ಎಂದು ಘೋಷಣೆ ಕೂಗಿ ನಗುನಗುತ್ತಾ ನೇಣುಗಂಬವನ್ನೇರಿದರು. ಸ್ವತ: ತಾನೇ ಕುಣಿಕೆಯನ್ನು ತನ್ನ ಕತ್ತಿಗೆ ಬಿಗಿದುಕೊಂಡು ಸ್ನೇಹಿತರೊಂದಿಗೆ ಬಲಿದಾನಿಯಾದ ಭಗತ್ ಸಿಂಗ್ ಭಾರತಮಾತೆಯ ಹೆಮ್ಮೆಯ ಪುತ್ರ.

ಇದನ್ನೂ ಓದಿ: ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ

Exit mobile version