ನವದೆಹಲಿ: ಬ್ರಿಟನ್‌ನಲ್ಲಿ (UK) ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆಯೇ ಭಾರತದಲ್ಲಿಯೂ ಕೋವಿಶೀಲ್ಡ್ ಲಸಿಕೆ ಸೈಡ್ ಎಫೆಕ್ಟ್‌ಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೊವ್ಯಾಕ್ಸಿನ್ (Covaxin) ಅತ್ಯಂತ ಸುರಕ್ಷಿತವಾಗಿ ತಯಾರಿಸಲಾದ ಲಸಿಕೆಯಾಗಿದೆ ಎಂಬುದಾಗಿ ಭಾರತದ ಲಸಿಕಾ ತಯಾರಿಕಾ ಕಂಪನಿಯಾದ ಭಾರತ್ ಬಯೋಟೆಕ್ (Bharat Biotech) ಪ್ರಕಟಣೆ ತಿಳಿಸಿದೆ.
“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ” ಎಂಬುದಾಗಿ ಭಾರತ್ ಬಯೋಟೆಕ್ ಕಂಪನಿಯು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
Bharat Biotech announcement – COVAXIN was developed with a single-minded focus on safety first, followed by efficacy! pic.twitter.com/1c9iwemcf3
— karthik gopinath(மோடியின் குடும்பம் ) (@karthikgnath) May 2, 2024
“ಕೊವ್ಯಾಕ್ಸನ್ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು, ರಕ್ತ ಹೆಪ್ಪುಗಟ್ಟುವುದು, ಥ್ರಂಬೊಸಿಟೋಪೇನಿಯಾ, ಪೆರಿಕಾರ್ಡಿಟಿಸ್ ಹಾಗೂ ಮೈಯೋಕಾರ್ಡಿಟಿಸ್ ಸೇರಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಹಾಗಾಗಿ, ಕೊವ್ಯಾಕ್ಸಿನ್ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ” ಎಂದು ಮಾಹಿತಿ ನೀಡಿದೆ.
ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಮಂದಿ ಪಡೆದಿದ್ದಾರೆ. ಈಗ ಅಮೆರಿಕದಲ್ಲಿ ಅಡ್ಡಪರಿಣಾಮದ ಕುರಿತು ಕಂಪನಿಯೇ ಒಪ್ಪಿಕೊಂಡಿರುವುದರಿಂದ ಭಾರತದಲ್ಲೂ ಈ ಕುರಿತು ಅಧ್ಯಯನ ನಡೆಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ: CoWIN Certificates: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್; ಕೇಂದ್ರ ಹೇಳೋದೇನು?