ಮುಂಬೈ: ವಾಸಿಸಲು ಮನೆ ಇರದವರು, ತಿನ್ನಲು ಅನ್ನವಿರದವರು, ದುಡಿಯಲು ಆಗದವರು, ಜೇಬಲ್ಲಿ ನಯಾಪೈಸೆ ಇರದವರು ಭಿಕ್ಷುಕರಾಗುತ್ತಾರೆ. ಜೀವನದಲ್ಲಿ ಏಳಿಗೆ ಹೊಂದದೆ, ಭಿಕ್ಷೆ ಮಾಡಿದರೆ ಮಾತ್ರ ಅವರ ತುತ್ತಿನ ಚೀಲ ತುಂಬುತ್ತದೆ. ಹಾಗಾಗಿಯೇ, ಭಿಕ್ಷುಕ ಹಾಗೂ ಬಡತನ ಸಮಾನಾರ್ಥಕ ಪದಗಳು ಎಂದರೆ ತಪ್ಪಾಗಲಾರದು. ಆದರೆ, ಈ ಎಲ್ಲ ಮಾತುಗಳಿಗೆ ಅಪವಾದ ಎಂಬಂತೆ, ಮುಂಬೈನಲ್ಲಿ ಭಿಕ್ಷೆ ಬೇಡಿಕೊಂಡಿದ್ದ ವ್ಯಕ್ತಿಯೊಬ್ಬರು ಭಿಕ್ಷೆ ಬೇಡಿಕೊಂಡೇ ಕೋಟ್ಯಧೀಶರಾಗಿದ್ದಾರೆ. ಹಾಗೆಯೇ, ಇವರು ಜಗತ್ತಿನಲ್ಲೇ ಶ್ರೀಮಂತ ಭಿಕ್ಷುಕ (Richest Beggar) ಎಂಬ ಖ್ಯಾತಿ ಗಳಿಸಿದ್ದಾರೆ.
ಹೌದು, ಭರತ್ ಜೈನ್ ಎಂಬ ಭಿಕ್ಷುಕ ಮುಂಬೈನಲ್ಲಿ ತುಂಬ ಫೇಮಸ್. ಇವರು ಶ್ರೀಮಂತ ಭಿಕ್ಷುಕ ಎಂದು ಯಾವಾಗ ಖ್ಯಾತಿಯಾದರೋ, ಈಗ ಅವರು ದೇಶಾದ್ಯಂತ ಖ್ಯಾತಿಯಾಗಿದ್ದಾರೆ. ವಿಶ್ವದಲ್ಲೇ ಸಿರಿವಂತ ಭಿಕ್ಷುಕ ಎಂಬ ಪಟ್ಟವೂ ಅವರಿಗಿದೆ. ಛತ್ರಪತಿ ಶಿವಾಜಿ ಟರ್ಮಿನಸ್ ಹಾಗೂ ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡಿಕೊಂಡೇ ಇವರು ಕೋಟ್ಯಧೀಶರಾಗಿರುವುದು, ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿರುವುದು ಅಚ್ಚರಿ ಮೂಡಿಸಿದೆ. ಹಾಗಾಗಿ, ಇವರ ಕತೆಯು ಇಂಟರೆಸ್ಟಿಂಗ್ ಎನಿಸಿದೆ.
ಭರತ್ ಜೈನ್ ಆದಾಯ ಎಷ್ಟು?
ಭರತ್ ಜೈನ್ ಅವರು ಭಿಕ್ಷೆ ಬೇಡಿಕೊಂಡೇ ಮಾಸಿಕ 60-75 ಸಾವಿರ ರೂಪಾಯಿ ಗಳಿಸುತ್ತಾರೆ. ಇವರು ಥಾಣೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದು, ಮಾಸಿಕ 30 ಸಾವಿರ ರೂಪಾಯಿ ಬಾಡಿಗೆ ಸಿಗುತ್ತದೆ. ಕೋಟ್ಯಂತರ ರೂಪಾಯಿ ಗಳಿಸಿದರೂ ಅವರು ನಿತ್ಯ 10-12 ತಾಸು ಭಿಕ್ಷೆ ಬೇಡುತ್ತಾರೆ. ಕರುಣಾಮಯಿಗಳು ಕೊಡುವ ಚಿಲ್ಲರೆ ಹಣದಿಂದಲೇ ಅವರಿಗೆ ನಿತ್ಯ ಸರಾಸರಿ ಎರಡು ಸಾವಿರ ರೂಪಾಯಿ ಸಿಗುತ್ತದೆ. ಇದೇ ಇವರನ್ನು ಸಿರಿವಂತನನ್ನಾಗಿ ಮಾಡಿದೆ.
ಇವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು?
ಭರತ್ ಜೈನ್ ಅವರು ಭಿಕ್ಷೆ ಬೇಡಿದರೂ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಮುಂಬೈನಲ್ಲಿ ಇವರದ್ದು 2 ಬೆಡ್ ರೂಮ್ ಇರುವ ಫ್ಲ್ಯಾಟ್ ಇದೆ. ಇದರ ಬೆಲೆಯೇ 1.2 ಕೋಟಿ ರೂಪಾಯಿ ಇದೆ. ಪರೇಲ್‌ನಲ್ಲಿ ಒಂದು ಡುಪ್ಲೆಕ್ಸ್ ಮನೆ ಕಟ್ಟಿದ್ದಾರೆ. ಭರತ್ ಜೈನ್ ಅವರ ಪತ್ನಿಯು ಸ್ಟೇಷನರಿ ಅಂಗಡಿ ನೋಡಿಕೊಳ್ಳುತ್ತಿದ್ದಾರೆ. ಭರತ್ ಜೈನ್ ಅವರು ಓದಲು ಸಾಧ್ಯವಾಗದ ಕಾರಣ ತಮ್ಮ ಇಬ್ಬರು ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಸೇರಿಸಿದ್ದಾರೆ. ಅಂದಹಾಗೆ, ನಗದು ಸೇರಿ ಇವರ ಒಟ್ಟು ಆಸ್ತಿಯ ಮೌಲ್ಯ 7.5 ಕೋಟಿ ರೂಪಾಯಿ ಇದೆ.