Site icon Vistara News

Bharat Jodo Nyay Yatra: ಟಿಎಂಸಿ ಜತೆಗಿನ ಗೊಂದಲದ ನಡುವೆ ಬಂಗಾಳ ತಲುಪಿದ ರಾಹುಲ್‌ ಗಾಂಧಿ

bharath jodo

bharath jodo

ಕೋಲ್ಕತ್ತಾ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರಂಭಿಸಿರುವ ʼಭಾರತ್ ಜೋಡೋ ನ್ಯಾಯ್ ಯಾತ್ರೆ’ (Bharat Jodo Nayay Yatra) ಇಂದು (ಜನವರಿ 25) ಪಶ್ಚಿಮ ಬಂಗಾಳಕ್ಕೆ ತಲುಪಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ (Trinamool Congress) ನಾಯಕಿ ಮಮತಾ ಬ್ಯಾನರ್ಜಿ (Mamata Banerjee)  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಇಲ್ಲ ಎಂದು ಮಹತ್ವ ದ ನಿರ್ಧಾರ ಘೋಷಿಸಿದ ಒಂದು ದಿನದ ಬಳಿಕ ಈ ಯಾತ್ರೆ ರಾಜ್ಯಕ್ಕೆ ಪ್ರವೇಶಿಸಿದೆ.

ಎರಡೂ ಕಡೆಗಳ ನಡುವೆ ಯಾವುದೇ ಮಾತುಕತೆ ನಡೆಯದಿದ್ದರೂ “ಸೀಟು ಹಂಚಿಕೆಯ ಮಾತುಕತೆಗಳು ನಡೆಯುತ್ತಿವೆ” ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯು ಮಮತಾ ಬ್ಯಾನರ್ಜಿ ಅವರನ್ನು ಕೆರಳಿಸಿದ್ದು, ಅವರು ಮೈತ್ರಿಯಿಂದ ದೂರ ಸರಿಯಲು ಕಾರಣ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಈ ಸಂಘರ್ಷವು ವಿಪಕ್ಷ ಒಕ್ಕೂಟ ಇಂಡಿಯಾ (Indian National Developmental Inclusive Alliance)ದ ಭವಿಷ್ಯವನ್ನು ಡೋಲಾಯಮಾನವಾಗಿಸಿದೆ.

ಭರ್ಜರಿ ಸ್ವಾಗತ

ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ರಾಹುಲ್ ಗಾಂಧಿ ಅವರನ್ನು ರಾಜ್ಯಕ್ಕೆ ಸ್ವಾಗತಿಸಿದರು. ಕಾಂಗ್ರೆಸ್‌ನ ಈ ಯಾತ್ರೆ ಪಶ್ಚಿಮ ಬಂಗಾಳದಲ್ಲಿ ಜನವರಿ 26 ಮತ್ತು 27ರಂದು ಎರಡು ದಿನ ಸಂಚರಿಸಲಿದೆ. ವಿಧಾನಸಭಾ ಚುನಾವಣೆ ಪ್ರಯುಕ್ತ 2021ರ ಏಪ್ರಿಲ್-ಮೇಯಲ್ಲಿ ಇಲ್ಲಿ ಪ್ರಚಾರ ಮಾಡಿದ ನಂತರ ರಾಹುಲ್ ಗಾಂಧಿ ಸುಮಾರು 3 ವರ್ಷಗಳ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನುವುದು ವಿಶೇಷ. ಅಲ್ಲದೆ ಟಿಎಂಸಿ ಮತ್ತು ಕಾಂಗ್ರೆಸ್‌ ಮಧ್ಯೆ ಸಂಬಂಧ ಹಳಸಿರುವುದು ಕೂಡ ಈ ಯಾತ್ರೆಯ ಮಹತ್ವವನ್ನು ಹೆಚ್ಚಿಸಿದೆ. ಜನವರಿ 29ರಂದು ಬಿಹಾರಕ್ಕೆ ತಲುಪುವ ಮೊದಲ ಈ ಯಾತ್ರೆ ಜಲ್ಪೈಗುರಿ, ಅಲಿಪುರ್ದುವಾರ್, ಉತ್ತರ ದಿನಾಜ್ಪುರ ಮತ್ತು ಡಾರ್ಜಿಲಿಂಗ್‌ನಲ್ಲಿ ಸಂಚರಿಸಲಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ ಎಡಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ. ಇತ್ತ ಈ ಬಗ್ಗೆ ಬುಧವಾರ (ಜನವರಿ 24) ಮಮತಾ ಬ್ಯಾನರ್ಜಿ ಮಾತನಾಡಿ, ʼʼನಮ್ಮ ರಾಜ್ಯದಲ್ಲಿ ನಡೆಸುತ್ತಿರುವ ರ‍್ಯಾಲಿಯ ಬಗ್ಗೆ ನಮಗೇ ಗೊತ್ತಿಲ್ಲ. ನಾನು ಕೂಡ ಇಂಡಿಯಾ ಮೈತ್ರಿ ಕೂಟದಲ್ಲಿದ್ದರೂ ಮಾಹಿತಿ ನೀಡಿಲ್ಲ. ಆದ್ದರಿಂದ ಇನ್ನು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದರು.

ಈ ಯಾತ್ರೆಯು ಜನವರಿ 31ರಂದು ಮಾಲ್ಡಾ ಮೂಲಕ ಪಶ್ಚಿಮ ಬಂಗಾಳವನ್ನು ಮತ್ತೆ ಪ್ರವೇಶಿಸಲಿದ್ದು, ಫೆಬ್ರವರಿ 1ರಂದು ರಾಜ್ಯವನ್ನು ತೊರೆಯುವ ಮೊದಲು ಮುರ್ಷಿದಾಬಾದ್ ಅನ್ನು ಕ್ರಮಿಸಲಿದೆ. ಮಾಲ್ಡಾ ಮತ್ತು ಮುರ್ಷಿದಾಬಾದ್ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದೆ.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಸೀಟು ಹಂಚಿಕೆ ಇಲ್ಲ ಎಂದ ಟಿಎಂಸಿ

ಟಿಎಂಸಿ ಇಲ್ಲದ ಮೈತ್ರಿಕೂಟ ಊಹಿಸಲು ಸಾಧ್ಯವಿಲ್ಲ ಎಂದ ಜೈರಾಮ್

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ ಕೆಲವೇ ನಿಮಿಷಗಳ ಬಳಿಕ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ʼʼತೃಣಮೂಲ ಕಾಂಗ್ರೆಸ್ ಹೊರತಪಡಿಸಿ ಇಂಡಿಯಾ ಕೂಟವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲʼʼ ಎಂದು ಹೇಳಿರುವುದು ಕೂಡ ಗಮನ ಸೆಳೆದಿತ್ತು. ಆದರೆ ಅದಾದ ಬಳಿಕ ಮಾತನಾಡಿದ್ದ ರಾಜ್ಯ ಕಾಂಗ್ರೆಸ್‌ ವಕ್ತಾರ ಸುಮನ್ ರಾಯ್ ಚೌಧರಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಒಮ್ಮೆ ದ್ರೋಹಿ ಯಾವಾಗಲೂ ದ್ರೋಹಿಯಾಗಿರುತ್ತಾನೆ. ತಮ್ಮ ರಾಜಕೀಯ ಜೀವನದಲ್ಲಿ ಅವರು ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿಗೆ ದ್ರೋಹ ಬಗೆದಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು. ಹೀಗಾಗಿ ಸದ್ಯದ ಈ ರಾಜಕೀಯ ಬೆಳವಣಿಗೆ ಕುತೂಹಲ ಕೆರಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version