Site icon Vistara News

Bharat Jodo Nyay Yatra: ಬಿಹಾರ ಪ್ರವೇಶಿಸಿದ ಭಾರತ್ ಜೋಡೋ ನ್ಯಾಯ್ ಯಾತ್ರೆ

Bharat Jodo Nyay Yatra enter bihar today

ಪಾಟ್ನಾ, ಬಿಹಾರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು (Bharat Jodo Nyay Yatra) ಸೋಮವಾರ ಬಿಹಾರ (Bihar) ಪ್ರವೇಶಿಸಿದ್ದು, ಮೂರು ದಿನಗಳಲ್ಲಿ ಈ ರಾಜ್ಯದಲ್ಲಿ ಮುಂದುವರಿಯಲಿದೆ. ಕಾಂಗ್ರೆಸ್ ಪಕ್ಷವು (Congress party) ಪ್ರಾಬಲ್ಯ ಹೊಂದಿರುವ ಬಿಹಾರದ ಕಿಶನ್‌ಗಂಜ್ ಮೂಲಕ ಯಾತ್ರೆಯು ಬಿಹಾರ ಪ್ರವೇಶಿಸಿದೆ. ಮಹಾ ಮೈತ್ರಿಯನ್ನು (Grand alliance) ತೊರೆದು ಬಿಜೆಪಿ ಜತೆ ನಿತೀಶ್ ಕುಮಾರ್ (Nitish Kumar) ಅವರು ಹೊಸ ಸರ್ಕಾರ ರಚಿಸಿದ ಮಾರನೇ ದಿನವೇ ಕಾಂಗ್ರೆಸ್ ಯಾತ್ರೆ ಬಿಹಾರದಲ್ಲಿ ದಾಂಗುಡಿ ಇಡುತ್ತಿದೆ. ವಿಶೇಷ ಎಂದರೆ, 2020ರ ವಿಧಾನಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿ ಅವರು ಇದೇ ಮೊದಲ ಬಾರಿಗೆ ಬಿಹಾರಕ್ಕೆ ಆಗಮಿಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಅವರು, ಗಾಂಧಿಯವರು ಮಂಗಳವಾರ ಕಿಶನ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ನಂತರ ಪಕ್ಕದ ಜಿಲ್ಲೆಯಾದ ಪುರ್ನಿಯಾದಲ್ಲಿ ದೊಡ್ಡ ರ್ಯಾಲಿಯನ್ನು ಮತ್ತು ಒಂದು ದಿನದ ನಂತರ ಕತಿಹಾರ್‌ನಲ್ಲಿ ಇನ್ನೊಂದು ಸಭೆಯನ್ನು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರ ಪ್ರಕಾರ, ಬಿಹಾರದಲ್ಲಿ ಪಕ್ಷದ ಮೈತ್ರಿಕೂಟದ ಪಾಲುದಾರರಾದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಮತ್ತು ಸಿಪಿಐ(ಎಂಎಲ್)-ಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರನ್ನು ಪುರ್ನಿಯಾದಲ್ಲಿ ರ್ಯಾಲಿಗೆ ಆಹ್ವಾನಿಸಲಾಗಿದೆ. ವಿಶೇಷ ಎಂದರೆ, ನಿತೀಶ್ ಕುಮಾರ್ ಅವರಿಗೂ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಅವರು ಆಹ್ವಾನ ನೀಡಿತ್ತು ಮತ್ತು ಅವರು ಆಮಂತ್ರಣವನ್ನು ಸ್ವೀಕರಿಸಿದ್ದರು. ಆದರೆ, ಬದಲಾದ ರಾಜಕಾರಣದಲ್ಲೀಗ ಅವರು ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಜತೆಗಿದ್ದಾರೆ. ಹಾಗಾಗಿ, ಅವರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಭಾರತ್‌ ಜೋಡೋ ನ್ಯಾಯ ಯಾತ್ರೆಗೂ ದೇಣಿಗೆ ಕೊಡಿ ಎಂದ ಕಾಂಗ್ರೆಸ್;‌ ವಿಶೇಷ ಆಫರ್‌

ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜನರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿರುವ ಕಾಂಗ್ರೆಸ್‌ (Congress) ಈಗ ರಾಹುಲ್‌ ಗಾಂಧಿ ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಗೂ (Bharat Jodo Nyay Yatra) ದೇಣಿಗೆ ಕೊಡಿ ಎಂದು ಮನವಿ ಮಾಡಿದೆ. ಈ ಕುರಿತು ಕಾಂಗ್ರೆಸ್‌ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಹೆಚ್ಚು ಹಣ ಕೊಟ್ಟವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಹಿ ಮಾಡಿರುವ ಟಿ-ಶರ್ಟ್‌ ಉಡುಗೊರೆ ಸಿಗಲಿದೆ ಎಂದು ಹೇಳಿದ್ದಾರೆ.

“ಸುಮಾರು 6,700 ಕಿಲೋಮೀಟರ್‌ವರೆಗೆ ಭಾರತ್‌ ಜೋಡೋ ನ್ಯಾಯ ಯಾತ್ರೆ ನಡೆಯಲಿದೆ. ಯಾತ್ರೆಯ ಒಂದು ಕಿಲೋಮೀಟರ್‌ಗೆ ತಲಾ 70 ಪೈಸೆ ದೇಣಿಗೆ ನೀಡುವವರಿಗೆ ಅಂದರೆ, 670 ರೂ. ದೇಣಿಗೆ ನೀಡುವವರಿಗೆ ರಾಹುಲ್‌ ಗಾಂಧಿ ಅವರು ಸಹಿ ಮಾಡಿರುವ ಟಿ-ಶರ್ಟ್‌ ಸಿಗಲಿದೆ. ಇನ್ನು 67 ರೂ. ದೇಣಿಗೆ ನೀಡಿದರೆ ರಾಹುಲ್‌ ಗಾಂಧಿ ಅವರು ಸಹಿ ಮಾಡಿರುವ ಪತ್ರ ಸಿಗಲಿದೆ” ಎಂದು ಕಾಂಗ್ರೆಸ್‌ ತಿಳಿಸಿದೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಆರಂಭಿಸಿದ ಒಂದೇ ದಿನದಲ್ಲಿ ಸುಮಾರು 2 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ರಾಹುಲ್‌ ಗಾಂಧಿ ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಮಣಿಪುರದಿಂದ ಆರಂಭವಾಗಿದ್ದು, ಈಗ ಪಶ್ಚಿಮ ಬಂಗಾಳ ತಲುಪಿದೆ. ಪಶ್ಚಿಮ ಬಂಗಾಳದಲ್ಲೂ ನ್ಯಾಯ ಯಾತ್ರೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ರಾಜ್ಯದ ಹಲವೆಡೆ ಸಾರ್ವಜನಿಕ ಸಭೆ, ಯಾತ್ರೆ ಕೈಗೊಳ್ಳಲು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ. ಮಮತಾ ಬ್ಯಾನರ್ಜಿ ಅವರು ಈಗಾಗಲೇ ಇಂಡಿಯಾ ಒಕ್ಕೂಟದಿಂದ ಹೊರಬಂದಿದ್ದಾರೆ.

ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಮಣಿಪುರದ ಜತೆಗೆ, ಯಾತ್ರೆಯು ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (ಎರಡು ದಿನಗಳಲ್ಲಿ 257 ಕಿಮೀ), ಅರುಣಾಚಲ ಪ್ರದೇಶ (55 ಕಿ.ಮೀ. ಒಂದು ದಿನ), ಮೇಘಾಲಯ (ಒಂದು ದಿನದಲ್ಲಿ ಐದು ಕಿಮೀ) ಮತ್ತು ಅಸ್ಸಾಂ (ಎಂಟು ದಿನಗಳಲ್ಲಿ 833 ಕಿಮೀ)ಗಳನ್ನು ಕವರ್ ಮಾಡಲಿದೆ.

ಬಳಿಕ ಭಾರತ್ ಜೋಡೋ ನ್ಯಾಯ ಯಾತ್ರೆಯು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆಯಲಿದೆ. ಒಟ್ಟು100 ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಯಾತ್ರೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Bharat Jodo Nyay Yatra: ಟಿಎಂಸಿ ಜತೆಗಿನ ಗೊಂದಲದ ನಡುವೆ ಬಂಗಾಳ ತಲುಪಿದ ರಾಹುಲ್‌ ಗಾಂಧಿ

Exit mobile version