Site icon Vistara News

Bharat Jodo Nyay Yatra: ಬಂಗಾಳದಲ್ಲಿ ರಾಹುಲ್‌ ಗಾಂಧಿ ಸಂಚರಿಸುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ

bharath jodo

bharath jodo

ಕೋಲ್ಕತ್ತಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು (Bharat Jodo Nyay Yatra) ಬಿಹಾರದಿಂದ ಮತ್ತೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ. ಜನವರಿ 31ರಂದು ಮಧ್ಯಾಹ್ನ ಉತ್ತರ ಬಂಗಾಳದ ಮಾಲ್ಡಾದಲ್ಲಿ ರಾಹುಲ್ ಗಾಂಧಿ ಅವರಿದ್ದ ವಾಹನದ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಯಾತ್ರೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಲಾಭಾ ಸೇತುವೆಯಲ್ಲಿ ಸಾವಿರಾರು ಮಂದಿ ಜಮಾಯಿಸಿದರು. ಈ ವೇಳೆ ರಾಹುಲ್‌ ಗಾಂಧಿ ಸಂಚರಿಸುತ್ತಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಕಿಟಿಕಿಯ ಗಾಜಿಗೆ ಹಾನಿಯಾಗಿದೆ. ಅದೃಷ್ಟವಶಾತ್‌ ರಾಹುಲ್ ಗಾಂಧಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಾಂಗ್ರೆಸ್‌ ನಾಯಕರಿಂದ ವಾಗ್ದಾಳಿ

ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಇದನ್ನು ಭದ್ರತಾ ಲೋಪ ಎಂದು ಕರೆದಿದ್ದಾರೆ. “ನಮ್ಮ ಕಾರಿನ ಗಾಜಿಗೆ ಹಾನಿಯಾಗಿದೆ ಎನ್ನುವ ಕಾರಣಕ್ಕೆ ಯಾತ್ರೆಯನ್ನು ನಿಲ್ಲಿಸುವುದಿಲ್ಲ. ಇಂಡಿಯಾ ಮೈತ್ರಿ ಕೂಟ ಈ ಘಟನೆಗಳಿಂದ ವಿಚಲಿತವಾಗುವುದಿಲ್ಲ. ಇಂಡಿಯಾ ಒಕ್ಕೂಟವನ್ನು ಬಲಪಡಿಸುವುದು ನನ್ನ ಗುರಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವುದನ್ನು ಮತ್ತೋಮ್ಮೆ ನೆನಪಿಸುತ್ತೇನೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಕಲ್ಲು ತೂರಾಟದಿಂದ ವಾಹನದ ಹಿಂಭಾಗದ ಗಾಜು ಒಡೆದಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ತಿಳಿಸಿದ್ದಾರೆ. “ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ಚೌಧರಿ ಹೇಳಿದ್ದಾರೆ.

ಯಾತ್ರೆಯು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪ್ರವೇಶಿಸಿದ ದಿನದಿಂದ ತೊಂದರೆಗಳನ್ನು ಎದುರಿಸುತ್ತಿದೆ. ಕಳೆದ ವಾರ ಕೂಚ್ ಬೆಹಾರ್ ಪಟ್ಟಣದಲ್ಲಿ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸುವ ಪೋಸ್ಟರ್‌ ಮತ್ತು ಬ್ಯಾನರ್‌ಗಳನ್ನು ಹರಿದು ಹಾಕಲಾಗಿತ್ತು. ರಾಜ್ಯ ಅತಿಥಿ ಗೃಹದಲ್ಲಿ ರಾಹುಲ್ ಗಾಂಧಿಗೆ ಆತಿಥ್ಯ ನೀಡಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್‌ ಮುಖಂಡರು ದೂರಿದ್ದಾರೆ.

ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಉದ್ವಿಗ್ನತೆಯ ಮಧ್ಯೆ ಈ ಬೆಳವಣಿಗೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೆಲವು ದಿನಗಳ ಹಿಂದೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದರು.

ರಾಹುಲ್‌ ಗಾಂಧಿ ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಮಣಿಪುರದಿಂದ ಆರಂಭವಾಗಿದ್ದು, ಈಗ ಪಶ್ಚಿಮ ಬಂಗಾಳ ತಲುಪಿದೆ. ಪಶ್ಚಿಮ ಬಂಗಾಳದಲ್ಲೂ ನ್ಯಾಯ ಯಾತ್ರೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ರಾಜ್ಯದ ಹಲವೆಡೆ ಸಾರ್ವಜನಿಕ ಸಭೆ, ಯಾತ್ರೆ ಕೈಗೊಳ್ಳಲು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ. ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. 

ಇದನ್ನೂ ಓದಿ: Bharat Jodo Nyay Yatra: ಬಿಹಾರ ಪ್ರವೇಶಿಸಿದ ಭಾರತ್ ಜೋಡೋ ನ್ಯಾಯ್ ಯಾತ್ರೆ

Exit mobile version