ಲಕ್ನೋ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯ ಯಾತ್ರೆ (Bharat Jodo Nyaya Yatra) ಫೆಬ್ರವರಿ 25ರಂದು ಉತ್ತರ ಪ್ರದೇಶದ ಆಗ್ರಾ ತಲುಪಲಿದ್ದು, ಅದರಲ್ಲಿ ಭಾಗವಹಿಸುವುದಾಗಿ ಸಮಾಜವಾದಿ ಪಾರ್ಟಿ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎಸ್‌ಪಿ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಶಮನಗೊಂಡ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಈ ತೀರ್ಮಾನ ಪ್ರಕಟಿಸಿದರು.
ಮುಜಾಫರ್ ನಗರದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, “ಶೀಘ್ರದಲ್ಲೇ ಸಂಘಟಕರು ಆಗ್ರಾದಲ್ಲಿ ನಡೆಯಲಿರುವ ಭಾರತ್ ಜೋಡೊ ನ್ಯಾಯ ಯಾತ್ರೆಯ ಮಾರ್ಗ ಮತ್ತು ಸಮಯದ ವಿವರವನ್ನು ನಮಗೆ ಕಳುಹಿಸಲಿದ್ದಾರೆ” ಎಂದು ತಿಳಿಸಿದರು. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಅಜಯ್ ರಾಯ್, ಹಿರಿಯ ಮುಖಂಡ ಪಿಎಲ್ ಪುನಿಯಾ ಮತ್ತಿತರರು ಲಕ್ನೋದ ಎಸ್‌ಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಯಾತ್ರೆಗೆ ಔಪಚಾರಿಕ ಆಹ್ವಾನ ನೀಡಿದರು.
ಯಾತ್ರೆಯಲ್ಲಿ ಕೆಲವು ಬದಲಾವಣೆ
ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಹೆಚ್ಚುವರಿಯಾಗಿ ಪಶ್ಚಿಮ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಸಲಿದ್ದಾರೆ. ಈ ಹಿಂದೆ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಮೈತ್ರಿ ಮಾತುಕತೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಪ್ರದೇಶದಲ್ಲಿ ತೆರಳದಿರಲು ನಿರ್ಧಿರಿಸತ್ತು. ಆದರೆ ಮನಸ್ಸು ಬದಲಾಯಿಸಿ ಈ ಪ್ರದೇಶಗಳಿಗೆ ತೆರಳಲು ನಿರ್ಧರಿಸಲಾಗಿದೆ. ಇದೀಗ ಯಾತ್ರೆಯು ಪಶ್ಚಿಮ ಉತ್ತರ ಪ್ರದೇಶದ ಮೊರಾದಾಬಾದ್, ಸಂಭಾಲ್, ಅಲಿಗಢ, ಹತ್ರಾಸ್ ಮತ್ತು ಆಗ್ರಾ ಪ್ರದೇಶದ ಮೂಲಕ ಹಾದುಹೋಗಲಿದೆ.
ಗೊಂದಲ ನಿವಾರಣೆ
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 63 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಹಾಗೂ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು, ಜಂಟಿಯಾಗಿ ಚುನಾವಣೆಯನ್ನು ಎದುರಿಸಲಿವೆ ಎಂದು ಫೆಬ್ರವರಿ 21ರಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾಹಿತಿ ನೀಡಿದ್ದರು.
ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಠಿ ಜತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್‌ಪುರ್, ಪ್ರಯಾಗ್‌ರಾಜ್, ಮಹಾರಾಜ್‌ಗಂಜ್, ಅಮ್ರೋಹಾ, ಝಾನ್ಸಿ, ಬುಲಂದಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ , ಬಾರಾಬಂಕಿ ಮತ್ತು ಡಿಯೋರಿಯಾ ಕೇತ್ರಗಳಲ್ಲಿ ಸ್ಪರ್ಧಿಸಲಿದೆ.
ಇದನ್ನೂ ಓದಿ: INDIA Bloc: ಉತ್ತರ ಪ್ರದೇಶದಲ್ಲಿ ಎಸ್‌ಪಿ-ಕಾಂಗ್ರೆಸ್ ಸೀಟ್ ಷೇರಿಂಗ್ ಫೈನಲ್, ಸೂತ್ರ ಹೀಗಿದೆ
ʼʼಸಮಾಜವಾದಿ ಪಕ್ಷವು ತನ್ನ ಪಾಲಿಗೆ ದೊರೆತಿರುವ ಕ್ಷೇತ್ರಗಳಲ್ಲೇ ಪ್ರಾದೇಶಿಕ ಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಿದೆ. ಕಳೆದ ತಿಂಗಳು ಎಸ್‌ಪಿಯೊಂದಿಗೆ ಏಳು ಸ್ಥಾನಗಳ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ಹೊರತಾಗಿಯೂ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆʼʼ ಎಂದು ಅಖಿಲೇಶ್ ಯಾದವ್ ತಿಳಿಸಿದ್ದರು. ʼʼಮೈತ್ರಿಯು ದೇಶಕ್ಕೆ ಒಂದು ಸಂದೇಶವಾಗಿದೆ. ಯುಪಿಯಲ್ಲಿ 80 ಲೋಕಸಭಾ ಸ್ಥಾನಗಳಿವೆ. ಉತ್ತರ ಪ್ರದೇಶದ ಸಹಾಯದಿಂದಲೇ ಭಾರತೀಯ ಜನತಾ ಪಾರ್ಟಿಯು ಕೇಂದ್ರದಲ್ಲಿಅಧಿಕಾರಕ್ಕೆ ಬಂದಿದೆ. ಅದೇ ಉತ್ತರ ಪ್ರದೇಶದಿಂದಾಗಿಯೇ ಬಿಜೆಪಿ 2024 ರಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತದೆʼʼ ಎಂದು ಅವರು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ