Site icon Vistara News

Bharat Jodo Yatra: ಭಾರತ ಜೋಡೋ ಯಾತ್ರೆಗೆ ತೆರೆ; ಬದಲಾಯ್ತಾ ರಾಹುಲ್ ಇಮೇಜ್?

Bharat Jodo Yatra concluded, will it help to Rahul Gandhi as leader?

ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ದೇಶವನ್ನು ಒಂದುಗೂಡಿಸುವ ಧ್ಯೇಯದೊಂದಿಗೆ 2022ರ ಸೆಪ್ಟೆಂಬರ್ 7ರಂದು ಆರಂಭವಾದ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಸೋಮವಾರ(ಜ.30) ತೆರೆ ಬಿದ್ದಿದೆ. ಸುಮಾರು 3500 ಕಿ.ಮೀ. ದಾರಿಯನ್ನು 136 ದಿನಗಳ ಕಾಲ ಕ್ರಮಿಸಿಸಿದೆ. ಹಿಮಪಾತದ ಮಧ್ಯೆ ಯಾತ್ರೆಯ ರೂವಾರಿ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ(Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾತ್ರೆ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ದೇಶದ ಮೂಲಭೂತ ತತ್ವಗಳಾದ, ಉದಾರತೆ ಮತ್ತು ಜಾತ್ಯಾತೀತಗಳ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಸಿದ್ಧಾಂತದ ವಿರುದ್ಧ ಜಯ ಸಿಕ್ಕಿದೆ ಎಂಬುದು ಯಾತ್ರೆಯ ಒಟ್ಟಾರೆ ತಿರುಳು.

ಶ್ರೀನಗರದ ಶೇರ್ ಇ ಕಾಶ್ಮೀರ್ ಸ್ಟೇಡಿಯಂ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿಯಾದಿಯಾಗಿ, ಭಾರತ್ ಜೋಡೋ ಯಾತ್ರೆಯನ್ನು ಚುನಾವಣಾ ದೃಷ್ಟಿಯಿಂದ ಮಾಡಿದ್ದಲ್ಲ ಎಂದು ಹೇಳಿದ್ದಾರೆ. ಆದರೆ, ರಾಜಕಾರಣದ ಸಾಮಾನ್ಯ ಜ್ಞಾನ ಇದ್ದವರಿಗೂ ಈ ಯಾತ್ರೆಯ ಹಿಂದೆ ರಾಹುಲ್ ಗಾಂಧಿ ಇಮೇಜ್ ರಿಬಿಲ್ಡ್ ಮಾಡುವ ತಂತ್ರ, ಸತತ ಚುನಾವಣೆಗಳ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷವನ್ನು ಮುಂಬರುವ 2024ರ ಚುನಾವಣೆಗೆ ಸಜ್ಜುಗೊಳಿಸುವುದೇ ಆಗಿತ್ತು ಎಂಬುದು ಗುಟ್ಟೇನಲ್ಲ.

⭕LIVE⭕: ಭಾರತ್ ಜೋಡೋ ಯಾತ್ರೆಗೆ ತೆರೆ | Bharat Jodo Yatra | Live News

ಬದಲಾದ ರಾಹುಲ್ ವ್ಯಕ್ತಿತ್ವ

ರಾಹುಲ್ ಗಾಂಧಿ ಅವರು 2004ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು. ಅಂದಿನಿಂದ ಈತನಕವೂ ರಾಹುಲ್ ಅವರನ್ನು ಪರಿಪಕ್ವತೆ ಇಲ್ಲದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ, ನಿರಾಸಕ್ತ ರಾಜಕಾರಣಿ ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆದಿವೆ. ಈ ಆರೋಪಗಳು ಕೂಡ ತಕ್ಕಮಟ್ಟಗೆ ನಿಜವೂ ಹೌದು. ತೀರಾ ಇತ್ತೀಚಿನವರೆಗೂ ಭಾರತೀಯ ಸಂದರ್ಭಕ್ಕೆ ಒಗ್ಗುವ ರಾಜಕಾರಣದ ಗುಣಗಳನ್ನು ಅವರೆಂದಿಗೂ ಸಾರ್ವಜನಿಕವಾಗಿ ಪ್ರದರ್ಶಿಸಲಿಲ್ಲ. ಹಾಗಾಗಿ, ಅವರ ರಾಜಕೀಯ ವಿರೋಧಿಗಳಿಗೆ ಅವರೇ ಸ್ವತಃ ಟೀಕಾಸ್ತ್ರಗಳನ್ನು ಒದಗಿಸುತ್ತಾ ಬಂದರು. ಅದರಲ್ಲೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯಂತೂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಪಪ್ಪು ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಈ ಅನ್ವರ್ಥದಿಂದ ಅವರು ಹೊರ ಬರಲು ಪ್ರಯತ್ನಿಸುತ್ತಲೇ ಇದ್ದಾರೆ.

ಆದರೆ, ಭಾರತ್ ಜೋಡೋ ಯಾತ್ರೆ ಅವರಲ್ಲಿ ಬದಲಾವಣೆಗೆ ಕಾರಣವಾಗಿದೆಯಾ? ಯಾತ್ರೆಯುದ್ದಕ್ಕೂ ಅವರು ನಡೆದುಕೊಂಡ ರೀತಿಯನ್ನು ನೋಡಿದರೆ ಹೌದು ಎಂದು ಹೇಳಬಹುದು. ರಾಜಕಾರಣಿಯಾಗಿ ಅವರು ತಮ್ಮ ವ್ಯಕ್ತಿತ್ವದಲ್ಲಿ ಎಷ್ಟು ಬದಲಾವಣೆ ಮಾಡಿಕೊಂಡಿದ್ದಾರೆಂಬುದು ಮುಂದಿನ ವರ್ಷದ ಹೊತ್ತಿಗೆ ಕಾಣಲಿದೆ. ಆದರೆ, ಒಬ್ಬ ಮನುಷ್ಯನಾಗಿ, ಸಾಮೂಹಿಕ ಸ್ಪಂದನೆಗೆ ಸ್ಪಂದಿಸಬಲ್ಲ ಗುಣಗಳನ್ನು ಅವರು ಪ್ರದರ್ಶಿಸುತ್ತಾ ಬಂದಿದ್ದಾರೆ. ಯಾತ್ರೆಯುದ್ಧಕ್ಕೂ ನಾನಾ ವರ್ಗದ ಜನರನ್ನುಭೇಟಿಯಾಗುವ ಮೂಲಕ, ಅವರ ಕಷ್ಟು ಸುಖಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಅವರು ತಮ್ಮನ್ನು ತಾವು ಹೊಸ ರಾಹುಲ್ ಗಾಂಧಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಮತ್ತು ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷವಾಗಲೀ, ಅದರ ನಾಯಕರಾಗಲೀ ಎಷ್ಟೇ ನಿರಾಕರಿಸಿದರೂ ಭಾರತ್ ಜೋಡೋ ಯಾತ್ರೆಯು Rebuild Rahul Gandhi Brand ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯ ಬಲಿಷ್ಠ ನಾಯಕ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕನೊಬ್ಬನಿದ್ದಾನೆ ಎಂಬುದನ್ನು ತೋರಿಸುವ ಪ್ರಯತ್ನವಂತೂ ಹೌದು. ಜತೆಗೆ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಈಗನಿಂದಲೇ ಕಾಂಗ್ರೆಸ್ ಸಜ್ಜುಗೊಳಿಸುವ ಪ್ರಯತ್ನವೂ ಹೌದು

ಕಾಂಗ್ರೆಸ್ ಪಕ್ಷಕ್ಕೆ ಲಾಭ ಆಗುತ್ತಾ?

ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತಾ ಎಂಬ ಪ್ರಶ್ನೆ ಸಾಕಷ್ಟು ಜನರು ಕೇಳುತ್ತಿದ್ದಾರೆ. ಆದರೆ, ಈ ಪ್ರಶ್ನೆಗೆ ಉತ್ತರ ಕಷ್ಟ. ಯಾಕೆಂದರೆ, ಜನರ ಮನಸ್ಸು ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಚುನಾವಣೆ ಇನ್ನಾರು ತಿಂಗಳು ಇರುವಾಗ ಜನಾಭಿಪ್ರಾಯ ಬದಲಾಗಬಹುದು. ಆದರೆ, ನಾಲ್ಕೈದು ದಶಕಗಳ ಆಡಳಿತದಲ್ಲಿದ್ದ ಪಕ್ಷವೊಂದು ಕಳೆದ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತ್ತು. ಜನರೊಂದಿಗೆ, ಜನರ ಬಳಿಗೆ ಪಕ್ಷವನ್ನು ಕೊಂಡೊಯ್ಯಲು ಅದಕ್ಕೊಂದು ನೆಪ ಬೇಕಿತ್ತು. ಈ ಯಾತ್ರೆಯು ಆ ದಾರಿಯನ್ನು ಹುಡುಕಿಕೊಟ್ಟಿದೆ. ಚುನಾವಣೆಯಲ್ಲಿ ಒಂಚೂರು ಈ ಯಾತ್ರೆಯ ಉಪಯೋಗವಾಗುವುದಿಲ್ಲ ಎನ್ನುವುದು ಮತ್ತು ಯಾತ್ರೆಯಿಂದ ಸಾಕಷ್ಟು ಲಾಭವಾಗಲಿದೆ ಎಂದು ಹೇಳುವುದು ಎರಡೂ ಒಂದೇ!

ಇದನ್ನೂ ಓದಿ: Bharat Jodo Yatra | ಭಾರತ್ ಜೋಡೋ ಯಾತ್ರೆ ರಾಷ್ಟ್ರೀಯ ಕಾಂಗ್ರೆಸ್, ದೇಶಕ್ಕೆ ಐತಿಹಾಸಿಕ ಘಟನೆ

ಆದರೆ, ಕಾಂಗ್ರೆಸ್ ಪಕ್ಷವು ಈ ಯಾತ್ರೆಯಿಂದ ಸಾಕಷ್ಟು ಉಬ್ಬಿ ಹೋಗಿದೆ. ಹಾಗಾಗಿ, ಪೂರ್ವ ಭಾರತಿಂದ ಪಶ್ಚಿಮ ಭಾರತದದ್ದಕ್ಕೂ ಯಾತ್ರೆ ಕೈಗೊಳ್ಳುವ ಮಾತಗಳನ್ನಾಡುತ್ತಿದೆ. ಖಂಡಿತವಾಗಿಯ ಭಾರತ್ ಜೋಡೋ ಯಾತ್ರೆ, ಪಕ್ಷಕ್ಕೆ ಟಾನಿಕ್ ಒದಗಿಸಿದೆ. ಅದರ ಪರಿಣಾಮ ಎಷ್ಟಿದೆ ಎಂಬುದನ್ನು ನೋಡಲು ನಾವು 2024ರ ಚುನಾವಣೆಗೆ ಕಾದು ನೋಡಬೇಕು.

Exit mobile version