Site icon Vistara News

Rahul Gandhi: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಎಂದ ರಾಹುಲ್‌ ಗಾಂಧಿ; ಸಂಸತ್ತಲ್ಲಿ ಗದ್ದಲ, ಸ್ಮೃತಿ ಇರಾನಿ ತಿರುಗೇಟು

Rahul Gandhi In Parliament

ನವದೆಹಲಿ: ಅನರ್ಹತೆ ರದ್ದಾದ ಬಳಿಕ ಬುಧವಾರ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಂಸತ್‌ನಲ್ಲಿ ಭಾಷಣ ಮಾಡಿದ್ದು, ಮಣಿಪುರ ವಿಚಾರಕ್ಕೆ (Manipur Violence) ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆಯು ಕೋಲಾಹಲ ಸೃಷ್ಟಿಸಿತು. “ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಮಣಿಪುರದಲ್ಲಿ ಭಾರತವನ್ನೇ ಹತ್ಯೆಗೈಯಲಾಗಿದೆ” ಎಂದು ರಾಹುಲ್‌ ಗಾಂಧಿ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಂಸತ್ತಿನಲ್ಲಿ ಗಲಾಟೆ ನಡೆಯಿತು.

“ಮಣಿಪುರದಲ್ಲಿ ಜನರ ಧ್ವನಿಯನ್ನು ಹುದುಗಿಸಲಾಗಿದೆ. ಇದರೊಂದಿಗೆ ಮಣಿಪುರದಲ್ಲಿ ಭಾರತವನ್ನು ಹತ್ಯೆ ಮಾಡಲಾಗಿದೆ. ನೀವು ದೇಶ ಭಕ್ತರಲ್ಲ, ನೀವು ದೇಶದ್ರೋಹಿಗಳು. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ತೆರಳಲಿಲ್ಲ. ಮಣಿಪುರದಲ್ಲಿ ಹಿಂದುಸ್ಥಾನದ ಕಗ್ಗೊಲೆಯಾಗಿದೆ. ನೀವು ಭಾರತ ಮಾತೆಯನ್ನು ರಕ್ಷಿಸುವವರಲ್ಲ, ನೀವು ಹತ್ಯೆ ಮಾಡುವವರು” ಎಂದು ರಾಹುಲ್‌ ಗಾಂಧಿ ಹೇಳಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, “ನಿಮಗೆ ನಾಚಿಕೆಯಾಗಬೇಕು” ಎಂದು ತಿರುಗೇಟು ನೀಡಿದರು.

ಆದರೂ ಭಾಷಣ ಮುಂದುವರಿಸಿದ ರಾಹುಲ್‌ ಗಾಂಧಿ, “ನಾನು ನಮ್ಮ ತಾಯಿಯ ಹತ್ಯೆಯಾಗಿರುವ ಕುರಿತು ಮಾತನಾಡುತ್ತಿದ್ದೇನೆ. ಮಣಿಪುರದಲ್ಲಿ ನನ್ನ ತಾಯಿಯ ಹತ್ಯೆಯಾಗಿರುವ ಕುರಿತು ಮಾತನಾಡುತ್ತಲೇ ಇರುತ್ತೇನೆ. ಒಬ್ಬ ತಾಯಿ ಇಲ್ಲಿ ಕುಳಿತಿದ್ದಾರೆ. ಮತ್ತೊಬ್ಬ ತಾಯಿಯನ್ನು ಮಣಿಪುರದಲ್ಲಿ ಹತ್ಯೆ ಮಾಡಲಾಗಿದೆ. ದೇಶದ ಸೇನೆಯನ್ನು ಮಣಿಪುರಕ್ಕೆ ಕಳುಹಿಸಿದರೆ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ ಮಾಡಬಹುದು. ಆದರೆ, ನರೇಂದ್ರ ಮೋದಿ ಅವರು ಮಣಿಪುರದ ಜನರ ಧ್ವನಿಯನ್ನು ಕೇಳುವುದಿಲ್ಲ. ದೇಶದ ಜನರ ಮಾತು ಕೇಳುವುದಿಲ್ಲ. ಅವರು ಅಮಿತ್‌ ಶಾ ಹಾಗೂ ಅದಾನಿಯವರ ಮಾತುಗಳನ್ನು ಮಾತ್ರ ಕೇಳುತ್ತಾರೆ” ಎಂದು ಕುಟುಕಿದರು.

ಇದನ್ನೂ ಓದಿ: Rahul Gandhi: ಅನರ್ಹತೆ ರದ್ದು ಬಳಿಕ ಮೊದಲ ಬಾರಿ ಸಂಸತ್ತಲ್ಲಿ ರಾಹುಲ್‌ ಗಾಂಧಿ ಭಾಷಣ; ಕೇಂದ್ರಕ್ಕೆ ಚಾಟಿ

ರಾವಣನ ಉಲ್ಲೇಖ ಮಾಡಿದ ರಾಹುಲ್‌ ಗಾಂಧಿ

“ರಾವಣ ಇಬ್ಬರ ಮಾತನ್ನು ಕೇಳುತ್ತಿದ್ದ. ಮೇಘನಾಥ ಹಾಗೂ ಕುಂಭಕರ್ಣರ ಮಾತನ್ನು ಮಾತ್ರ ರಾವಣ ಕೇಳುತ್ತಿದ್ದ. ಹಾಗೆಯೇ, ನರೇಂದ್ರ ಮೋದಿ ಅವರು ಅಮಿತ್‌ ಶಾ ಹಾಗೂ ಅದಾನಿಯವರ ಮಾತುಗಳನ್ನು ಮಾತ್ರ ಕೇಳುತ್ತಿದ್ದರು. ಲಂಕಾವನ್ನು ಸುಟ್ಟಿದ್ದು ಹನುಮಾನ್‌ ಅಲ್ಲ, ಲಂಕಾ ಭಸ್ಮಗೊಂಡಿದ್ದು ರಾವಣನ ಅಹಂಕಾರದಿಂದ. ರಾಮನು ರಾವಣನನ್ನು ಕೊಂದಿರಲಿಲ್ಲ. ರಾವಣ ಅಹಂಕಾರವು ಆತನನ್ನು ನುಂಗಿಹಾಕಿತು. ನೀವು ದೇಶಾದ್ಯಂತ ಸೀಮೆಎಣ್ಣೆ ಸುರಿದು ಹಿಂಸಾಚಾರಕ್ಕೆ ಕಾರಣರಾಗುತ್ತಿದ್ದೀರಿ. ಮೊದಲು ಮಣಿಪುರದಲ್ಲಿ ಸೀಮೆಎಣ್ಣೆ ಸುರಿದಿರಿ. ಬಳಿಕ ಹರಿಯಾಣದಲ್ಲಿ ಹಿಂಸಾಚಾರ ನಡೆಸಿದರು. ದೇಶಾದ್ಯಂತ ನೀವು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ” ಎಂದು ಹೇಳುವ ಮೂಲಕ ರಾಹುಲ್‌ ಗಾಂಧಿ ಅವರು ಅಬ್ಬರದ ಭಾಷಣ ಮುಗಿಸಿದರು.

ತಿರುಗೇಟು ನೀಡಿದ ಸ್ಮೃತಿ ಇರಾನಿ

ರಾಹುಲ್‌ ಗಾಂಧಿ ಅವರು ಭಾಷಣ ಮುಗಿಸಿದ ಬಳಿಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಗಾಂಧಿ ತಿರುಗೇಟು ನೀಡಿದರು. “ಭಾರತಕ್ಕೆ ಈಗ ಬಹುಮತ ಇರುವ ಸರ್ಕಾರ ಬೇಕಾಗಿದೆಯೇ ಹೊರತು, ಕುಟುಂಬ ರಾಜಕಾರಣವಲ್ಲ. ಇಂಡಿಯಾ ಎಂದು ಹೆಸರಿಟ್ಟುಕೊಂಡರೆ ನೀವೇ ಇಂಡಿಯಾ ಆಗುವುದಿಲ್ಲ. ದೇಶದ ಜನರಿಗಾಗಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಇದೇ ಕಾರಣಕ್ಕಾಗಿ ಬಹುಮತದ ಸರ್ಕಾರ ಅಸ್ತಿತ್ವದಲ್ಲಿದೆ” ಎಂದು ಹೇಳಿದರು.

ಹಾಗೆಯೇ, “ರಾಹುಲ್‌ ಗಾಂಧಿ ಅವರು ಹೆಣ್ಣುಮಕ್ಕಳಿಗೆ ಫ್ಲೈಯಿಂಗ್‌ ಕಿಸ್‌ ಕೊಡುತ್ತಾರೆ. ಸಂಸದೆಯರ ಮೇಲೆ ದ್ವೇಷದಿಂದ ಹೀಗೆ ಅನುಚಿತವಾಗಿ ವರ್ತಿಸುತ್ತಾರೆ. ಇದು ಅವರ ವಂಶವನ್ನು, ಕುಟುಂಬದ ಹಿನ್ನೆಲೆಯನ್ನು ತಿಳಿಸುತ್ತದೆ” ಎಂದು ಕುಟುಕಿದರು.

Exit mobile version