ದೇಶದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು (BJP) ಅಧಿಕಾರಕ್ಕೆ ಏರಿಸಲು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಲಾಲ್ಕೃಷ್ಣ ಅಡ್ವಾಣಿ (Lal Krishna Advani). ಅಯೋಧ್ಯೆಯ ರಾಮ ಜನ್ಮಭೂಮಿ (Ayodhya Ram Janmabhumi) ಚಳವಳಿಯ ವಿಷಯ ಎತ್ತಿಕೊಂಡರೂ ಅವರೇ ಮುಂದೆ ನಿಂತು ಇಡೀ ದೇಶದಲ್ಲಿ ಯಾತ್ರೆಗಳನ್ನು ನಡೆಸಿ, ಚಳವಳಿಯನ್ನು ತುದಿ ಮುಟ್ಟಿಸಿದವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದಿಟ್ಟ ಹೋರಾಟ ನಡೆಸಿದವರು, ಜೈಲು ಸೇರಿದವರು. ಸಂಸದೀಯ ಮುತ್ಸದ್ಧಿಗಳ ಹೆಸರು ತೆಗೆದುಕೊಂಡರೂ ಅವರು ಪಟ್ಟಿಯ ಮೇಲಿನ ಸ್ಥಾನದಲ್ಲಿ ಪ್ರತ್ಯಕ್ಷರಾಗುತ್ತಾರೆ. ಇಂಥ ಅಡ್ವಾಣಿ ಅವರನ್ನು ʼಭಾರತ ರತ್ನʼ (Bharat Ratna) ಪ್ರಶಸ್ತಿ ಅರಸಿಕೊಂಡು ಬಂದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ (PM Narendra Modi) ಅದನ್ನು ನೀಡಿದ್ದಾರೆ.
ಅಡ್ವಾಣಿ ಅವರ ಜೀವನದ ಪ್ರಮುಖ ಕ್ಷಣಗಳು ಕಡೆಗೊಂದು ಕ್ಷಕಿರಣ ಇಲ್ಲಿದೆ:
- ನವೆಂಬರ್ 1927ರಂದು ಅವಿಭಜಿತ, ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯ(ಇಂದಿನ ಕರಾಚಿ)ದ ಗೊರೆಗಾಂವ್ ನಲ್ಲಿ ಕಿಶೆನ್ ಚಂದ್ ಹಾಗೂ ಜ್ಞಾನಿದೇವಿ ಅವರ ಪುತ್ರರಾಗಿ ಲಾಲ್ ಕೃಷ್ಣ ಅಡ್ವಾಣಿ ಜನಿಸಿದರು. ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಶಾಲೆ ಮೆಟ್ರಿಕುಲೇಷನ್ ತನಕ ಓದು.
- ಆರೆಸ್ಸೆಸ್ನತ್ತ ಆಕರ್ಷಣೆ ಮೂಡಿ 1942ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರ್ಪಡೆ.
- ಅದೇ ವರ್ಷ ಹೈದರಾಬಾದಿನ ದಯಾರಾಮ್ ಗಿಡುಮಾಲ್ ನ್ಯಾಷನಲ್ ಕಾಲೇಜು ಸೇರ್ಪಡೆ
- 1944ರಲ್ಲಿ ಕರಾಚಿಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭ
- 1947ರ ಸೆ.12 ರಂದು ಸಿಂಧ್ ಪ್ರಾಂತ್ಯ ತೊರೆದು ಪ್ರೊಪೆಲ್ಲರ್ ಏರ್ಕ್ರಾಫ್ಟ್ ಮೂಲಕ ದೆಹಲಿಗೆ ಆಗಮನ
- ಆಳ್ವಾರ್, ಭರತ್ ಪುರ, ಕೋಟಾ, ಬಂಡಿ, ಜಲವಾರ್ ಪ್ರಾಂತ್ಯದ ಆರೆಸ್ಸೆಸ್ ಕಾರ್ಯದರ್ಶಿಯಾಗಿ ದೇಶ ವಿಭಜನೆಯಿಂದ ಉಂಟಾದ ಗಲಭೆ ಹತ್ತಿಕ್ಕಿ ಕೋಮು ಸಾಮರಸ್ಯ ಕಾಯ್ದುಕೊಳ್ಳುವ ಜವಾಬ್ದಾರಿ.
- ಜನಸಂಘದಿಂದ ಜನತಾ ಪಾರ್ಟಿಯತ್ತ. ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿತ ಭಾರತೀಯ ಜನ ಸಂಘದ ಸದಸ್ಯತ್ವ.
- 1957ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಹಾಯಕರಾಗಿ ಜವಾಬ್ದಾರಿ.
- ಜನಸಂಘದ ಪತ್ರಿಕೆ ಆರ್ಗನೈಸರ್ಗೆ ಸಹಾಯಕ ಸಂಪಾದಕರಾದರು.
- 1970ರಲ್ಲಿ ರಾಜ್ಯಸಭೆಗೆ ಪ್ರವೇಶ.
- 1975ರಲ್ಲಿ ಸಂಘದ ಅಧ್ಯಕ್ಷರಾದರು.
- ಈ ನಡುವೆ 1965ರಲ್ಲಿ ಕಮಲಾ ಅವರನ್ನು ಮದುವೆಯಾದರು. ಪ್ರತಿಭಾ ಹಾಗೂ ಜಯಂತ್ ಎಂಬ ಇಬ್ಬರು ಮಕ್ಕಳನ್ನು ಪಡೆದರು.
- 1975ರ ಜೂ.26ರಂದು ಎಮೆರ್ಜೆನ್ಸಿ ವಿರುದ್ಧ ತಿರುಗಿಬಿದ್ದ ಆರೋಪದ ಮೇಲೆ ಬೆಂಗಳೂರು ಕೇಂದ್ರ ಕಾರಾಗೃಹ ಸೇರಿದರು.
- ಮುಂದೆ ಜನಸಂಘದ ಸಹಚರ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ 1977ರಲ್ಲಿ ಲೋಕಸಭೆ ಪ್ರವೇಶ ಬಯಸಿದರು.
- ಮಾರ್ಚ್ 1977ರಿಂದ ಜುಲೈ 1979ರ ತನಕ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು.
- 1980-86: ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಅಧ್ಯಕ್ಷರಾಗಿ ಆಯ್ಕೆಯಾದರು.
- 1988ರಲ್ಲಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾದರು. 1988ರಲ್ಲಿ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು.
- 1999 ಹಾಗೂ 2004ರಲ್ಲಿ ಉಪ ಪ್ರಧಾನಿ.
- 2009ರಲ್ಲಿ ವಿಪಕ್ಷ ನಾಯಕ; ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದರು.
- 2013ರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ, ಎನ್ಡಿಎ ಸಂಚಾಲಕ ಹುದ್ದೆ ಬಿಟ್ಟು ಮಿಕ್ಕ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದರು.
ದೇಶದ ರಾಜಕೀಯ ಬದಲಿಸಿದ 6 ರಥಯಾತ್ರೆಗಳು
- ರಾಮ ರಥಯಾತ್ರೆ: ಗುಜರಾತಿನ ಸೋಮನಾಥದಲ್ಲಿ `ರಾಮ ರಥ ಯಾತ್ರೆ’ ಆರಂಭ. ಸೆ.25, 1990ರಿಂದ ಆರಂಭಿಸಿ 30 ಅಕ್ಟೋಬರ್ 1990ಕ್ಕೆ ಅಯೋಧ್ಯೆ ತಲುಪಿತು. ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ತಾರಕಕ್ಕೇರಿತು. ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ರಥವನ್ನು ನಿಲ್ಲಿಸಿ ಕರಸೇವಕರ ಮೇಲೆ ಶೂಟೌಟ್ಗೆ ಆದೇಶಿಸಿದರು.
- ಜನಾದೇಶ ಯಾತ್ರೆ: ದೇಶದ ನಾಲ್ಕು ಮೂಲೆ ತಲುಪುವ ಉದ್ದೇಶ. 1993 ಸೆ.11ರಿಂದ ಮೈಸೂರಿನಿಂದ ಆರಂಭಗೊಂಡು ದೇಶದಾದ್ಯಂತ ನಡೆದು ಭೋಪಾಲ್ನಲ್ಲಿ ಸಂಪನ್ನ. ಸಂವಿಧಾನನ 80ನೇ ಪರಿಚ್ಛೇದ ತಿದ್ದುಪಡಿಗೆ ಆಗ್ರಹ.
- ಸ್ವರ್ಣಜಯಂತಿ ರಥಯಾತ್ರೆ: 1997ರ ಮೇ ಹಾಗೂ ಜುಲೈ ತಿಂಗಳಿನಲ್ಲಿ ದೇಶದಾದ್ಯಂತ ಸಂಚರಿಸಿತು. ಉತ್ತಮ ಆಡಳಿತ ನೀಡುವಲ್ಲಿ ನಂಬಿಕೆಯುಳ್ಳ ಬಿಜೆಪಿ 50ನೇ ಸ್ವಾತಂತ್ರ್ಯೋತ್ಸವ ಆಚರಿಸಲು ನಡೆಸಿದ ರಥಯಾತ್ರೆ.
- ಭಾರತ ಉದಯ ಯಾತ್ರೆ: 2004ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ನಡೆದ ರಥಯಾತ್ರೆ.
- ಭಾರತ ಸುರಕ್ಷಾ ಯಾತ್ರೆ: 2006 ಏಪ್ರಿಲ್ 6ರಿಂದ ಮೇ 10 ಮೇರವರೆಗೆ, ದ್ವಾರಕದಿಂದ ದೆಹಲಿ ತನಕ ಅಂದಿನ ವಿಪಕ್ಷ ನಾಯಕ ಎಲ್ ಕೆ ಅಡ್ವಾಣಿ ನೇತೃತ್ವ. ರಾಜನಾಥ್ ಸಿಂಗ್ ಅವರು ಜಗನ್ನಾಥ್ ಪುರಿಯಿಂದ ದೆಹಲಿ ತನಕ ರಥ ಮುನ್ನಡೆಸಿದರು.
- ಜನ ಚೇತನ ಯಾತ್ರೆ: ಬಿಹಾರದ ಸಿತಾಬ್ ದಿಯಾರಾದಿಂದ ಅಕ್ಟೋಬರ್ 11, 2011ರಂದು ಆರಂಭಗೊಂಡ ಯಾತ್ರೆ ಯುಪಿಎ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಡೆಸಿದ ಯಾತ್ರೆ.
ಆತ್ಮಚರಿತ್ರೆ
ಎಲ್ಕೆ ಅಡ್ವಾಣಿ ಅವರ ʻಮೈ ಕಂಟ್ರಿ ಮೈ ಲೈಫ್’ ಆತ್ಮಚರಿತ್ರೆ ಮಾತ್ರವಲ್ಲ. ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿ. 1900ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ದಾಖಲೆ ಕೂಡಾ ನಿರ್ಮಿಸಿದೆ. ಭಾರತೀಯ ಜನತಾ ಪಕ್ಷದ ಪ್ರಮುಖ ನಿರ್ಣಯಗಳಲ್ಲದೆ, ವಿಪಕ್ಷ ನಾಯಕರಾಗಿ ಉತ್ತಮ ಸಂಸದೀಯ ಪಟುವಾಗಿಯೂ ಆಡ್ವಾಣಿ ಗುರುತಿಸಿಕೊಂಡಿದ್ದರು. ಎನ್ಡಿಎ ಮೈತ್ರಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಅಡ್ವಾಣಿ ಮುಖ್ಯಪಾತ್ರ ವಹಿಸಿದ್ದರು.
ಇದನ್ನೂ ಓದಿ: L K Advani : ಅಡ್ವಾಣಿಗೆ ಭಾರತರತ್ನ ಘೋಷಿಸಿದ್ದು ಜೀವನದ ಅತ್ಯಂತ ಭಾವನಾತ್ಮಕ ಕ್ಷಣ ಎಂದ ಮೋದಿ