Site icon Vistara News

Yamini Krishnamurthy: ಪದ್ಮವಿಭೂಷಣ ಪುರಸ್ಕೃತ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಇನ್ನಿಲ್ಲ

Yamini Krishnamurthy

ನವದೆಹಲಿ: ದೇಶದ ಖ್ಯಾತ ಭರತನಾಟ್ಯ ಕಲಾವಿದೆ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಯಾಮಿನಿ ಕೃಷ್ಣಮೂರ್ತಿ (84) (Yamini Krishnamurthy) ಅವರು ಶನಿವಾರ (ಆಗಸ್ಟ್‌ 3) ಸಂಜೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ (Apollo Hospital) ಕೊನೆಯುಸಿರೆಳೆದಿದ್ದಾರೆ. “ಯಾಮಿನಿ ಕೃಷ್ಣಮೂರ್ತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಕಳೆದ 7 ತಿಂಗಳಿಂದಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ” ಎಂದು ಯಾಮಿನಿ ಕೃಷ್ಣಮೂರ್ತಿ ಅವರ ಮ್ಯಾನೇಜರ್‌ ಗಣೇಶ್‌ ಅವರು ಪಿಟಿಐಗೆ ತಿಳಿಸಿದ್ದಾರೆ.

ಯಾಮಿನಿ ಕೃಷ್ಣಮೂರ್ತಿ ಅವರ ಪಾರ್ಥಿವ ಶರೀರವನ್ನು ಅಪೋಲೊ ಆಸ್ಪತ್ರೆಯಿಂದ ಭಾನುವಾರ (ಆಗಸ್ಟ್‌ 4) ಬೆಳಗ್ಗೆ 9 ಗಂಟೆಗೆ ಅವರ ಯಾಮಿನಿ ಸ್ಕೂಲ್‌ ಆಫ್‌ ಡಾನ್ಸ್‌ ಇನ್‌ಸ್ಟಿಟ್ಯೂಟ್‌ಗೆ ತರಲಾಗುತ್ತದೆ. ಅಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಅವರ ಅಂತ್ಯಸಂಸ್ಕಾರದ ಕುರಿತು ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಯಾಮಿನಿ ಅವರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಗಣ್ಯರ ಸಂತಾಪ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿವರಾದ ಯಾಮಿನಿ ಕೃಷ್ಣಮೂರ್ತಿ ಅವರ ನಿಧನಕ್ಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. “ಭರತನಾಟ್ಯ ಹಾಗೂ ಕೂಚಿಪುಡಿಯಲ್ಲಿ ಪರಿಣತಿ ಸಾಧಿಸಿದ್ದ, ಖ್ಯಾತಿ ಗಳಿಸಿದ್ದ ಯಾಮಿನಿ ಕೃಷ್ಣಮೂರ್ತಿ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಮಾಜಿ ಸಿಎಂ ಪೋಸ್ಟ್‌ ಮಾಡಿದ್ದಾರೆ. ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಂಗೀತ ನಾಟಕ ಅಕಾಡೆಮಿ ಕೂಡ ಸಂತಾಪ ವ್ಯಕ್ತಪಡಿಸಿದೆ.

ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯದಲ್ಲಿ ಪ್ರಖ್ಯಾತಿ ಗಳಿಸಿದ್ದ ಯಾಮಿನಿ ಕೃಷ್ಣಮೂರ್ತಿ ಅವರಿಗೆ 1968ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಎ ಪ್ಯಾಷನ್‌ ಫಾರ್‌ ಡಾನ್ಸ್‌ ಎಂಬ ಕೃತಿಯನ್ನೂ ರಚಿಸಿದ್ದಾರೆ. ದೆಹಲಿಯಲ್ಲಿ ಯಾಮಿನಿ ಸ್ಕೂಲ್‌ ಆಫ್‌ ಡಾನ್ಸ್‌ ಇನ್‌ಸ್ಟಿಟ್ಯೂಟ್‌ ತೆರೆದು ಸಾವಿರಾರು ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದಾರೆ. ಇವರು ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನದ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: Alur Nagappa: ‘ಸಾವಿರ ಹಾಡುಗಳ ಸರದಾರ’ ಖ್ಯಾತಿಯ ಜಾನಪದ ಹಾಡುಗಾರ, ಸಾಹಿತಿ ಆಲೂರು ನಾಗಪ್ಪ ಇನ್ನಿಲ್ಲ

Exit mobile version