Site icon Vistara News

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Nirav modi

Big blow to Nirav Modi: UK Court rejects fugitive businessman bail plea

ಲಂಡನ್‌: ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ (Nirav Modi) ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ನೀರವ್‌ ಮೋದಿಯು ಹಿಸ್‌ ಮೆಜೆಸ್ಟೀಸ್‌ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ. ನೀರವ್‌ ಮೋದಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ನಲ್ಲಿರುವ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ (Westminster Magistrates Court) ನಿರಾಕರಿಸಿತು. ಇದರೊಂದಿಗೆ ಸತತ ಐದನೇ ಬಾರಿಯೂ ನೀರವ್‌ ಮೋದಿ ಜಾಮೀನು ಅರ್ಜಿಯು ತಿರಸ್ಕೃತಗೊಂಡಂತಾಗಿದೆ.

ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ. ಹಾಗಾಗಿ, ನೀರವ್‌ ಮೋದಿಗೆ ಯಾರೂ ಜಾಮೀನು ನೀಡಲು ಸಾಧ್ಯವಿಲ್ಲ. ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ತಿಳಿಸಿದರು. ಇದು ನೀರವ್‌ ಮೋದಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿರುವ ನೀರವ್‌ ಮೋದಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರ ವಿರುದ್ಧ ಸಿಬಿಐ ಹಾಗೂ ಇ.ಡಿ ತನಿಖೆ ನಡೆಸುತ್ತಿದ್ದು, ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರವು ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ. ಇವರನ್ನು ಭಾರತವು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಭಾರತದ ಮನವಿ ಮೇರೆಗೆ 2019ರಲ್ಲಿ ನೀರವ್‌ ಮೋದಿ ಅವರನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದೆ. ಅಂದಿನಿಂದ ಇದುವರೆಗೆ ನೀರವ್‌ ಮೋದಿಯು ಜೈಲಿನಲ್ಲೇ ಇದ್ದಾರೆ. ಇದಕ್ಕೂ ಮೊದಲು ಅವರನ್ನು ವಿಂಡ್ಸ್‌ವರ್ತ್‌ ಜೈಲಿನಲ್ಲಿ ಇರಿಸಲಾಗಿತ್ತು.

ನೀರವ್‌ ಮೋದಿಯು ಹಾಂಕಾಂಗ್‌ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 253.62 ಕೋಟಿ ರೂಪಾಯಿ, ವಿವಿಧ ಬಗೆಯ ರತ್ನಗಳು, ಆಭರಣಗಳನ್ನು ಇಡಿ ಜಪ್ತಿಮಾಡಿದೆ. ಹಾಗೆಯೇ, ದೇಶಭ್ರಷ್ಟ ಆರ್ಥಿಕ ಅಪರಾಧಿಯನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಲ್ಲಿಯವರೆಗೆ ದೇಶ-ವಿದೇಶ ಸೇರಿ ನೀರವ್‌ ಮೋದಿಯ 2,396.45ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ನೀರವ್‌ ಬ್ಯಾಂಕ್‌ ಅಕೌಂಟ್‌ಗಳನ್ನೂ ಸೀಲ್‌ ಮಾಡಲಾಗಿದೆ. 

ಇದನ್ನೂ ಓದಿ: IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

Exit mobile version