ಹೊಸ ದಿಲ್ಲಿ: ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂಧೆ(Uddhav vs Shinde) ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ (supreme court) ಇಂದು ಅಂತ್ಯ ಹಾಡಲಿದ್ದು, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ (maharashtra political crisis) ಕುರಿತು ತೀರ್ಪು ಪ್ರಕಟಿಸಲಿದೆ.
ಶಿವಸೇನೆಯಿಂದ ಬಂಡಾಯವೆದ್ದ 16 ಶಾಸಕರ ಅರ್ಹತೆ- ಅನರ್ಹತೆಯ ಪ್ರಶ್ನೆ ಈ ತೀರ್ಪಿನಲ್ಲಿ ನಿರ್ಧಾರವಾಗಲಿದೆ. ಈ ತೀರ್ಪಿನ ಆಧಾರದ ಮೇಲೆ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೇ, ಪಕ್ಷದಿಂದ ಅವರ ಬಂಡಾಯ ಮತ್ತು ಅದರಿಂದಾಗಿ ನಡೆದ ವಿಶ್ವಾಸಮತ ಪರೀಕ್ಷೆಯು ಕಾನೂನುಬದ್ಧವೋ ಅಲ್ಲವೋ ಎಂಬುದು ನಿರ್ಧಾರವಾಗಲಿದೆ. ಶಿವಸೇನೆಯ ಠಾಕ್ರೆ ಮತ್ತು ಶಿಂಧೆ ಬಣಗಳೆರಡೂ ತಮ್ಮ ಕಡೆ ಗೆಲುವಿನ ಭರವಸೆಯಲ್ಲಿವೆ.
ಈ ಪ್ರಕರಣದ ಬಗ್ಗೆ 10 ಸಂಗತಿಗಳು ಇಲ್ಲಿವೆ:
- ಜೂನ್ 2022ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ 40 ಶಾಸಕರೊಂದಿಗೆ ಬಂಡಾಯ ಸಾರುವುದರೊಂದಿಗೆ ಬಿಕ್ಕಟ್ಟು ಪ್ರಾರಂಭವಾಯಿತು.
- ಶಿಂಧೆ ನಾಯಕತ್ವದಲ್ಲಿ ಬಂಡುಕೋರ ಶಾಸಕರು ಅಸ್ಸಾಂಗೆ ತೆರಳಿದರು. ನಂತರ ಬಿಜೆಪಿಯ ಸಹಾಯದಿಂದ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಏಕನಾಥ್ ಶಿಂಧೆ ಬಣ ಹೆಚ್ಚಿನ ಶಾಸಕರನ್ನು ಹೊಂದಿದ್ದರಿಂದ ನಿಜವಾದ ಶಿವಸೇನೆ ಎಂದು ತನ್ನನ್ನು ಗುರುತಿಸಿಕೊಂಡಿತು.
- ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದರು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗಿನ ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಅವರು ಸದನದಲ್ಲಿ ವಿಶ್ವಾಸಮತ ಪರೀಕ್ಷೆಗೆ ಆದೇಶಿಸಿದರು. ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲಿಲ್ಲ. ಜುಲೈ 4ರಂದು ಏಕನಾಥ್ ಶಿಂಧೆ ವಿಶ್ವಾಸಮತ ಗೆದ್ದರು.
- ಏಕನಾಥ್ ಶಿಂಧೆ ಪಾಳಯಕ್ಕೆ ತೆರಳಿದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
- ಬಾಳಾಸಾಹೇಬ್ ಠಾಕ್ರೆಯವರ ಮೂಲ ಶಿವಸೇನೆಯ ಚಿಹ್ನೆಯಾದ ʼಬಿಲ್ಲು ಮತ್ತು ಬಾಣʼಕ್ಕಾಗಿ ಹೊಡೆದಾಟ ಆರಂಭವಾಯಿತು. ಇದನ್ನು ಚುನಾವಣಾ ಆಯೋಗ ಶಿಂಧೆ ಬಣಕ್ಕೆ ನೀಡಿತು. ಉದ್ಧವ್ ಅವರ ಬಣಕ್ಕೆ ಜ್ಯೋತಿಯ ಚಿಹ್ನೆ ನೀಡಿತು. ಇದಕ್ಕೆ ʼಉದ್ಧವ್ ಬಾಳಾಸಾಹೇಬ್ ಠಾಕ್ರೆ ಶಿವಸೇನೆʼ ಎಂಬ ಹೊಸ ಹೆಸರನ್ನು ನೀಡಲಾಗಿದೆ.
- ʼʼದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್ನ ತೀರ್ಪು ನಿರ್ಧರಿಸಲಿದೆʼʼ ಎಂದು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಕಡೆಯ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
- ತೀರ್ಪು ಶಿಂಧೆ ಪರವಾಗಿ ಬರುಲಿರುವುದರಿಂದ ಏಕನಾಥ್ ಶಿಂಧೆ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. “ಶಿಂಧೆ ಯಾವ ತಪ್ಪೂ ಮಾಡಿಲ್ಲ. ಅವರು ರಾಜೀನಾಮೆ ನೀಡುವುದಿಲ್ಲʼʼ ಎಂದಿದ್ದಾರೆ.
- ತೀರ್ಪು ಉದ್ಧವ್ ಠಾಕ್ರೆಯವರ ಪರವಾಗಿ ಬಂದರೆ ಏಕನಾಥ್ ಶಿಂಧೆ ರಾಜೀನಾಮೆ ನೀಡಬೇಕಾಗುತ್ತದೆ.
- ಉದ್ಧವ್ ಠಾಕ್ರೆ ಅವರ ಪರ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಕೋರ್ಟ್ನಲ್ಲಿ ಕಾನೂನು ಸಮರದ ನೇತೃತ್ವ ವಹಿಸಿದ್ದರು. ಶಿಂಧೆ ಶಿಬಿರಕ್ಕೆ ಹರೀಶ್ ಸಾಳ್ವೆ, ಎನ್ಕೆ ಕೌಲ್ ಮತ್ತು ಮಹೇಶ್ ಜೇಠ್ಮಲಾನಿ ವಕೀಲರಾಗಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆಗಿನ ರಾಜ್ಯಪಾಲ ಬಿ.ಎಸ್ ಕೋಶ್ಯಾರಿ ಅವರನ್ನು ಪ್ರತಿನಿಧಿಸಿದ್ದರು.
- ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಕೋಶ್ಯಾರಿ ಪಾತ್ರವನ್ನು ಪ್ರಶ್ನಿಸಿತು. ಸರ್ಕಾರದ ಪತನಕ್ಕೆ ಕಾರಣವಾಗುವ ಯಾವುದೇ ವಿಷಯಕ್ಕೆ ರಾಜ್ಯಪಾಲರು ಪ್ರವೇಶಿಸಬಾರದು ಎಂದು ಸೂಚಿಸಿತ್ತು.